
ನವದೆಹಲಿ (ನ.14) ಭಾರತಕ್ಕೆ ಮತ್ತೊಮ್ಮೆ ಚಂಡಮಾರುತ ಆತಂಕ ಎದುರಾಗಿದೆ. ಪರಿಣಾಮ ನವೆಂಬರ್ 18 ಹಾಗೂ 19ಕ್ಕೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಎಚ್ಚರಿಸಿದೆ. ದಕ್ಷಿಣ ಭಾರತ ಮತ್ತು ಪೂರ್ವ ಕರಾವಳಿ ತೀರದ ಚಂಡಮಾರುತ ಮತ್ತೆ ಕೋಲಾಹಲ ಸೃಷ್ಟಿಸುವ ಆತಂಕ ಎದುರಾಗಿದೆ. ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು (Low Pressure Area) ತೀವ್ರಗೊಂಡಿದೆ. ನವೆಂಬರ್ 16ರ ಸಂಜೆಯ ವೇಳೆಗೆ ಪ್ರಬಲ ಚಂಡಮಾರುತವಾಗಿ (Cyclonic Storm) ಮಾರ್ಪಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಎಚ್ಚರಿಸಿದೆ.
ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ಕರಾವಳಿ ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಅಂಡಮಾನ್ ಸಮುದ್ರದಲ್ಲಿ ಸೃಷ್ಟಿಯಾದ ಚಂಡಮಾರುತದ ಪರಿಚಲನೆಯ ಪರಿಣಾಮವಾಗಿ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಈ ಚಂಡಮಾರುತ ವಾಯುವ್ಯ ದಿಕ್ಕಿನತ್ತ ಚಲಿಸಿ ಮತ್ತಷ್ಟು ಪ್ರಬಲವಾಗಿ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ನವೆಂಬರ್ 15ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳಲಿದೆ. ನವೆಂಬರ್ 16ರ ವೇಳೆ ಮಧ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರತೆ ಪಡೆದು ಚಂಡಮಾರುತವಾಗಿ ರೂಪಗೊಳ್ಳಲಿದೆ. ಚಂಡಮಾರತ ಬಲಗೊಳ್ಳುತ್ತಾ, ಕರಾವಳಿ ತೀರಗಳಿಗೆ ಅಪ್ಪಳಿಸಲಿದೆ.
ಚಂಡಮಾರುತ ಅಪ್ಪಳಿಸುವ ಪರಿಣಾಮ ಕರಾವಳಿ ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಲಾಗಿದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನವೆಂಬರ್ 16ರವರೆಗೆ ಮಳೆಯಾಗಲಿದೆ. ನವೆಂಬರ್ 18 ಹಾಗೂ ನವೆಂಬರ್ 19ಕ್ಕೆ ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳು, ಒಡಿಶಾದ ಗಂಜಾಂ, ಪುರಿ, ಜಗತ್‌ಸಿಂಗಪುರ, ರಾಯಗಡ ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಗಾಳಿ ವೇಗ ಪ್ರತಿ ಗಂಟೆಗೆ 50 ರಿಂದ 65 ಕಿಲೋಮೀಟರ್ ಇರಲಿದೆ. ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಅಲೆಗಳು ತೀವ್ರಗೊಂಡಿದೆ. ಹೀಗಾಗಿ ಸಮುದ್ರಕ್ಕೆ ಇಳಿದಿರುವ ಎಲ್ಲಾ ಮೀನುಗಾರರು ತಕ್ಷಣವೇ ದಡ ಸೇರಲು ಸೂಚಿಸಲಾಗಿದೆ. ಇದೇ ವೇಳೆ ಪ್ರಕ್ಷುಬ್ದಗೊಂಡ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚನೆ ನೀಡಲಾಗಿದೆ. ನವೆಂಬರ್ 15ರಿಂದ 18ರವರೆಗೆ ಆಗ್ನೇಯ ಬಂಗಾಳಕೊಲ್ಲಿ ಹಾಗೂ ನವೆಂಬರ್ 16ರಿಂದ 19ರವರೆಗೆ ಮಧ್ಯ ಬಂಗಾಳಕೊಲ್ಲಿ ಭಾಗಕ್ಕೆ ಯಾರೂ ತೆರಳದಂತೆ ಸೂಚಿಸಲಾದಿದೆ.
ಇತ್ತೀಚೆಗ ಅಪ್ಪಳಿಸಿದ್ದ ಚಂಡಮಾರುತಗಳ ನಂತರ ಇದೀಗ ಮತ್ತೊಂದು ಸೈಕ್ಲೋನ್ ಭೀತಿ ಎದುರಾಗಿರುವುದರಿಂದ ಒಡಿಶಾ ಸರ್ಕಾರ ಅಲರ್ಟ್ ಆಗಿದೆ. ಕರಾವಳಿ ಮತ್ತು ದಕ್ಷಿಣ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವಾಲಯ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ