ಅಯೋಧ್ಯೆ ತೀರ್ಪು: ರಾಮಜನ್ಮಭೂಮಿ ಸನಿಹ ಮಸೀದಿಗಿಲ್ಲ ಜಾಗ?

By Kannadaprabha News  |  First Published Nov 11, 2019, 8:44 AM IST

ಅಯೋಧ್ಯೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗ ನೀಡಿಕೆ ಕ್ಷೀಣ | ಸರಯೂ ನದಿ ಆಚೆ ಬಾಬ್ರಿ ಮಸೀದಿ ನಿರ್ಮಾಣ ಸಾಧ್ಯ | ಸೋಮ್‌ಪುರ ವಿನ್ಯಾಸದಂತೆ ರಾಮಮಂದಿರ ನಿರ್ಮಿಸಿ: ಕೇಂದ್ರಕ್ಕೆ ವಿಎಚ್‌ಪಿ ಆಗ್ರಹ 


ಅಯೋಧ್ಯೆ (ನ. 10): ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ‘ಬಾಬ್ರಿ ಮಸೀದಿ ಧ್ವಂಸದ ಪರಿಹಾರಾರ್ಥವಾಗಿ, ಪ್ರತ್ಯೇಕ ಮಸೀದಿ ಕಟ್ಟಲು 5 ಎಕರೆ ಜಾಗವನ್ನು ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು’ ಎಂದು ಮೊನ್ನೆ ಆದೇಶಿಸಿತ್ತು. ಆದರೆ ಈ ಜಮೀನು ರಾಮಜನ್ಮಭೂಮಿ ಸನಿಹ ದೊರಕುವ ಸಾಧ್ಯತೆ ಇಲ್ಲ. ಸರಯೂ ನದಿಯ ಆಚೆ, ಅಂದರೆ ಜನ್ಮಭೂಮಿಯಿಂದ 15 ಕಿ.ಮೀ. ದೂರದಲ್ಲಿ ಜಮೀನು ಲಭ್ಯತೆ ಸಾಧ್ಯವಿದೆ ಎಂದು ತಿಳಿದುಬಂದಿದೆ.

ಸುಪ್ರೀಂ ತೀರ್ಪಿನ ಬಳಿಕ ಹೇಗಿದೆ ಅಯೋಧ್ಯೆ ಜೀವನ

Latest Videos

undefined

‘ಅಯೋಧ್ಯೆ ಜನನಿಬಿಡ ನಗರವಾಗಿದ್ದು, ಇಲ್ಲಿ ಈ ಮುಂಚಿನ ಅಯೋಧ್ಯೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಷ್ಟೊಂದು ವಿಶಾಲ ಜಮೀನು ಲಭ್ಯವಿಲ್ಲ. ಅಲ್ಲದೆ, ಸರಯೂ ನದಿ ದಂಡೆಯ ಈಚೆ ಕೂಡ ಭೂಮಿ ಲಭ್ಯತೆ ಇಲ್ಲ’ ಎಂದು
ಅಧಿಕಾರಿಗಳು ಹೇಳಿದ್ದಾರೆ. ‘ರಾಮಜನ್ಮಭೂಮಿ ಸುತ್ತಲಿನ 15 ಕಿ.ಮೀ. ವ್ಯಾಪ್ತಿಯನ್ನು ‘ಶಾಸ್ತ್ರೀಯ ಪರಿಧಿ’ ಎಂದು ಕರೆಯಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಭೂಮಿಯ ಲಭ್ಯತೆ ಕ್ಷೀಣವಾಗಿದೆ.

ಮೇಲಾಗಿ ನ್ಯಾಯಾಲಯವು ಪ್ರಮುಖ ಸ್ಥಳದಲ್ಲಿ ಮಸೀದಿಗೆ ಜಮೀನು ನೀಡಿ ಎಂದು ಹೇಳಿದೆಯೇ ವಿನಾ, ಇಂಥದ್ದೇ ಸ್ಥಳದಲ್ಲಿ ನೀಡಿ ಎಂದಿಲ್ಲ. ಅಯೋಧ್ಯೆ-ಫೈಜಾಬಾದ್ ರಸ್ತೆಯಲ್ಲಿನ ಪಂಚಕೋಶಿ ಎಂಬ ಸ್ಥಳದ ಆಚೆ (೧೫ ಕಿ.ಮೀ. ಪರಿಧಿಯ ಆಚೆ) ಮಸೀದಿ ನಿರ್ಮಾಣಕ್ಕೆ ಜಾಗ ನೀಡುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ಈ ನಡುವೆ ಮಂದಿರ ಕೆಡವಿದ್ದ ಎನ್ನಲಾದ ಮುಘಲ್ ಅರಸ ಬಾಬರ್‌ನ ಕಮಾಂಡರ್ ಮೀರ್ ಬಾಕಿ ಎಂಬಾತನ ಸಮಾಧಿ ಇರುವ ಶಹಜಾನ್‌ವಾಲಾ ಗ್ರಾಮದಲ್ಲಿ ಮಸೀದಿ ನಿರ್ಮಿಸಬೇಕು ಎಂಬ ಆಗ್ರಹಗಳಿವೆ. ಆದರೆ ಇದು ೧೫ ಕಿ.ಮೀ. ಪರಿಧಿಯ ಒಳಗೆ ಬರುತ್ತದೆ.

ಈ ಉಸಾಬರಿ ಬೇಕಿತ್ತಾ? ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಸಿಕೊಂಡ ಪಾಕಿಸ್ತಾನ!

ಮಸೀದಿ ಜಮೀನು ಪಡೆಯಲು ಸುನ್ನಿ ಮಂಡಳಿ ಮೀನ-ಮೇಷ

ಸುಪ್ರೀಂ ಕೋರ್ಟ್ ಆದೇಶಾನುಸಾರ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ೫ ಎಕರೆ ಜಮೀನು ನೀಡಬೇಕಿದೆ. ಆದರೆ ಈ ಜಮೀನನ್ನು ಸ್ವೀಕರಿಸಬೇಕೇ ಬೇಡವೇ ಎಂಬ ಬಗ್ಗೆ ಸುನ್ನಿ ವಕ್ಫ್ ಮಂಡಳಿ ಜಿಜ್ಞಾಸೆಯಲ್ಲಿದ್ದು, ನ.26 ರಂದು ನಿರ್ಧರಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಜಫರ್ ಫಾರೂಖಿ ಅವರು ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯ ಜತೆ ಮಾತನಾಡಿ, ‘ಜಮೀನನ್ನು ಸ್ವೀಕರಿಸಬೇಕ ಬೇಡವೇ ಎಂಬ ಬಗ್ಗೆ ಭಿನ್ನ-ವಿಭಿನ್ನ ಅಭಿಪ್ರಾಯ ಕೇಳಿಬರತೊಡಗಿವೆ.

ಹೀಗಾಗಿ 5 ಎಕರೆ ಜಮೀನನ್ನು ಸರ್ಕಾರದಿಂದ ಸ್ವೀಕರಿಸಬೇಕಾ ಎಂಬ ಬಗ್ಗೆ ನವೆಂಬರ್ 26 ರಂದು ನಡೆಸಲು ಉದ್ದೇಶಿಸಿರುವ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು. ಈ ನಡುವೆ, ಕೋರ್ಟ್ ಆದೇಶವನ್ನು ಪ್ರಶ್ನಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ಸರ್ಕಾರದ ಜಮೀನು ಬೇಡ: ಮುಸ್ಲಿಮರ ಗುಂಪೊಂದು, ‘ಮಸೀದಿ ಕಟ್ಟಲು ನಮಗೆ ಸರ್ಕಾರದ ಜಮೀನು ಬೇಕಿಲ್ಲ’ ಎಂದಿದೆ.

 

click me!