ಜಯಲಲಿತಾ ಸಾವಿನ ಕೇಸಲ್ಲಿ ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು

By Gowthami K  |  First Published Aug 30, 2022, 1:42 PM IST

 ನ್ಯಾ.ಆರ್ಮುಗಂ ಆಯೋಗದ ವರದಿಯಲ್ಲಿ  ಜಯಾ ಸಾವಿನ ಕೇಸಲ್ಲಿ ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು. ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರ ನಿರ್ಧಾರ.


ಚೆನ್ನೈ (ಆ.30): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಲು ನೇಮಿತವಾಗಿದ್ದ ನ್ಯಾ.ಆರ್ಮುಗಂ ನೇತೃತ್ವದ ಸಮಿತಿಯು, ಜಯಾ ಮಾಜಿ ಆಪ್ತೆ ವಿ.ಕೆ.ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ಆದರೆ ಯಾವ ಕಾರಣಕ್ಕೆ ಶಶಿಕಲಾ ಮತ್ತಿತರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ, ಏನು ಕ್ರಮಕ್ಕೆ ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ವರದಿಯನ್ನು ಪರಿಶೀಲಿಸಿರುವ ರಾಜ್ಯ ಸರ್ಕಾರ ಬಹಿರಂಗಪಡಿಸಿಲ್ಲ. ನ್ಯಾ.ಅರ್ಮುಗಂ ನೇತೃತ್ವದ ಸಮಿತಿ ಕಳೆದ ಶುಕ್ರವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. ಈ ವರದಿಯನ್ನು ಸೋಮವಾರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಂಡಿಸಲಾಯಿತು. ಈ ವೇಳೆ ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ, ಜಯಾ ಆಪ್ತೆ ಶಶಿಕಲಾ, ಶಿವಕುಮಾರ್‌, ಅಂದಿನ ಆರೋಗ್ಯ ಸಚಿವ ಸಿ.ವಿಜಯ್‌ಭಾಸ್ಕರ್‌, ಮುಖ್ಯ ಕಾರ್ಯದರ್ಶಿ ರಾಮ ಮೋಹನ ರಾವ್‌ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು, ಬಳಿಕ ವರದಿಯನ್ನು ವಿಧಾನಸಭೆಯ ಮುಂದಿಡಲು ಸಭೆ ನಿರ್ಧರಿಸಿದೆ.

2016ರ ಡಿ.5ರಂದು ಜಯಲಲಿತಾ ಸಾವನ್ನಪ್ಪಿದ್ದರು. ಆದರೆ ಜಯಾ ಸಾವಿನ ಕುರಿತು ಸಾಕಷ್ಟುಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ 2017ರಲ್ಲಿ ಅಂದಿನ ಎಐಎಡಿಎಂಕೆ ಸರ್ಕಾರವು 2016ರ ಸೆ.22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗಲು ಕಾರಣವಾದ ಅಂಶಗಳು, ಆಸ್ಪತ್ರೆಯಲ್ಲಿ ಅವರಿಗೆ ನೀಡಿದ ಚಿಕಿತ್ಸೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಮದ್ರಾಸ್‌ ಹೈಕೋರ್ಚ್‌ ನಿವೃತ್ತ ನ್ಯಾಯಮೂರ್ತಿ ಆರ್ಮುಗಂ ನೇತೃತ್ವದ ತನಿಖಾ ಸಮಿತಿ ರಚಿಸಿತ್ತು.

Tap to resize

Latest Videos

ಜಯಲಲಿತಾ 2016ರ ಸೆ.22ರಂದು ಅಸ್ವಸ್ಥರಾಗಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ 75 ದಿನ ಆಸ್ಪತ್ರೆಯಲ್ಲಿದ್ದ ಬಳಿಕ ಡಿ.5ರಂದು ಅಸುನೀಗಿದ್ದರು. ಆದರೆ ಜಯಲಲಿತಾ ಸಾವು ಅನುಮಾನಾಸ್ಪದವಾಗಿದೆ. ಅವರ ಸಾವಿನ ಹಿಂದೆ ಯಾರೋ ಇದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜಯಾ ಬಂಧುಗಳಾದ ದೀಪಾ ಹಾಗೂ ದೀಪಕ್‌ ಆಗ್ರಹಿಸಿದ್ದರು. 2017ರಲ್ಲಿ ಅಣ್ಣಾಡಿಎಂಕೆ ಸರ್ಕಾರ ನ್ಯಾ.ಆರ್ಮುಗಸ್ವಾಮಿ ಸಮಿತಿಯನ್ನು ತನಿಖೆಗೆ ರಚಿಸಿತ್ತು. 150 ಸಾಕ್ಷಿಗಳನ್ನು ಮಾತನಾಡಿಸಿರುವ ಸಮಿತಿ  608 ಪುಟಗಳ ವರದಿ ತಯಾರಿಸಿ ಸಲ್ಲಿಸಿದೆ. ಸಮಿತಿ  ರಚನೆಯಾಗಿ 5 ವರ್ಷ ನಂತರ ವರದಿ ಸಲ್ಲಿಕೆ ಆಗಿದೆ. 

5 ವರ್ಷದ ಬಳಿಕ ಸದ್ದು ಮಾಡಿದ ಕೊಡನಾಡ್ ಕೊಲೆ ಪ್ರಕರಣ, ಮೊದಲ ಬಾರಿ ಶಶಿಕಲಾ ವಿಚಾರಣೆ!

ಜಯಲಲಿತಾ ಸಾವಿನ ಕೇಸಲ್ಲಿ ನ್ಯಾಯಮೂರ್ತಿ ಆರುಮುಗಸ್ವಾಮಿ ಅವರು ಸಿಎಂ ಸ್ಟಾಲಿನ್ ಅವರಿಗೆ ಸಲ್ಲಿಸಿದ ಎರಡು ದಿನಗಳ ನಂತರ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿದೆ. ನ್ಯಾಯಮೂರ್ತಿ ಆರುಮುಗಸಾಮಿ ಅವರು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದಾರೆ.

ಜಯಾ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್

ಇನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ 4 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದು, ರಾಜಕೀಯದಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗ ಜಯಲಲಿತಾ ನಿಧನದ ಕೇಸ್ ನಲ್ಲಿ ತನಿಖೆಗೆ ಆದೇಶವಾಗಿದ್ದು ಶಶಿಕಲಾ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಬಿದ್ದಂತಾಗಿದೆ.

click me!