ಜಮ್ಮುಕಾಶ್ಮೀರ(ಜ.14): ಮೊನ್ನೆ ಮೊನ್ನೆಯಷ್ಟೇ ಭಾರತೀಯ ಯೋಧನೊಬ್ಬ ಸುರಿಯುತ್ತಿರುವ ಹಿಮಗಾಳಿಯನ್ನು ಲೆಕ್ಕಿಸದೇ ಅಚಲವಾಗಿ ನಿಂತು ದೇಶ ಕಾಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ರಾಶಿಬಿದ್ದಿರು ಮೊಣಕಾಲೆತ್ತರದ ಹಿಮದಲ್ಲಿ ಯೋಧರು ವಾಲಿಬಾಲ್ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಮೈನಸ್ ಡಿಗ್ರಿ ಚಳಿಯಲ್ಲೂ ಯೋಧರ ಕ್ರೀಡಾಸ್ಪೂರ್ತಿಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕ ರಕ್ಷಣೆಗೆ ಧಾವಿಸುವುದು ಭಾರತೀಯ ಸೇನೆ. ಮಳೆ, ಮೈ ಕೊರೆಯುವ ಚಳಿ, ಬಿಸಿಲೆನ್ನದೆ ದೇಶ ಕಾಯವ ಯೋಧರು ಪೋಷಕರು, ಹೆಂಡತಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ. ತಾವಿದ್ದಲ್ಲೇ ತಮ್ಮ ಜೊತೆ ಇರುವವರನ್ನೇ ಕುಟುಂಬವೆಂದು ತಿಳಿದು ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿ ಪದಗಳಿಗೆ ನಿಲುಕದ್ದು.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan)ಶೇರ್ ಮಾಡಿದ್ದಾರೆ. ಅತ್ಯುತ್ತಮ 'ಚಳಿಗಾಲದ ಆಟಗಳು.' ನಮ್ಮ ಜವಾನರು ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಭಾರತೀಯ ಯೋಧರು ಶೀತ, ಚಳಿ ವಾತಾವರಣವನ್ನು ಎದುರಿಸಿ ಹಿಮದ ಮೇಲೆ ವಾಲಿಬಾಲ್ ಆಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ಎಲ್ಲಾ ಕಡೆಯಿಂದ ಮೆಚ್ಚುಗೆ ಗಳಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯೋಧರು ಎರಡು ತಂಡಗಳಾಗಿ ವಿಭಜಿಸಿ ವಾಲಿಬಾಲ್ ಆಡುತ್ತಿರುವುದು ಕಂಡುಬಂದಿದೆ. ಒಂದು ತಂಡವು ಪಾಯಿಂಟ್ ಗಳಿಸಿದ ನಂತರ ಸ್ವಲ್ಪ ಸಂಭ್ರಮಿಸುತ್ತಿದ್ದು ನಂತರ ಆಟ ಮುಂದುವರೆಯಿತು. ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ನೂರಾರು ಜನ ಕಾಮೆಂಟ್ ಮಾಡಿದ್ದಾರೆ.
ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್
ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ದೇಶ ಸಂಕಷ್ಟಕ್ಕೀಡಾದಾಗಲೆಲ್ಲಾ ಮುಂದೋಡಿ ಬಂದು ನೆರವಿಗೆ ಬರುವ ಭಾರತೀಯ ಯೋಧರು ತಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದರ ಜೊತೆ ನೃತ್ಯಗಳನ್ನು ಮಾಡಿ ಸಂಭ್ರಮಿಸುವುದರಲ್ಲೂಅಷ್ಟೇ ಹುಶಾರು. ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಯೋಧರು ಈಗ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಸಖತ್ ಆಗಿ ಖುಕುರಿ ಡಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ
ಗೋರ್ಖಾ ರೆಜಿಮೆಂಟ್‌ನಲ್ಲಿ ಗೋರ್ಖಾ ಸಂಸ್ಕೃತಿಯಾದ ಈ ಖುಕುರಿ ನೃತ್ಯ ಯೋಧರಿಗೆ ಚಿರಪರಿಚಿತ. ಸಣ್ಣದಾದ ಚೂರಿಯನ್ನು ಹಿಡಿದುಕೊಂಡು ಮಾಡುವ ನೃತ್ಯ ಇದಾಗಿದ್ದು, ಇದು ವಿಜಯವನ್ನು ಸಂಕೇತಿಸುತ್ತದೆ. ಇದನ್ನು ಸೈನಿಕರ ಗೌರವಾರ್ಥ ಪ್ರದರ್ಶಿಸಲಾಗುತ್ತದೆ. ಗಡಿಯನ್ನು ಕಾಪಾಡುವುದು ಸಣ್ಣ ಕೆಲಸವಲ್ಲ, ಅದರಲ್ಲೂ ವಿಶೇಷವಾಗಿ ಮೈನಸ್ ಶೂನ್ಯ ತಾಪಮಾನವನ್ನು ಎದುರಿಸುತ್ತಿದ್ದರೆ ಇನ್ನಷ್ಟು ಕಷ್ಟ. ಆದರೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಈ ಮೈನಸ್ ತಾಪಮಾನದಲ್ಲೂ ರಾಷ್ಟ್ರಧ್ವಜದ ಮುಂದೆ ಭಾರತೀಯ ಯೋಧರು ಖುಕುರಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ