
ನವದೆಹಲಿ(ಜೂ.22): ಗಡಿಯಲ್ಲಿ ಚೀನಾ ಮತ್ತೆ ದುಸ್ಸಾಹಸಕ್ಕೆ ಕೈಹಾಕಿದರೆ ಕಠಿಣ ಉತ್ತರ ನೀಡಲು ಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಅಸಾಧಾರಣ ಸಂದರ್ಭಗಳಲ್ಲಿ ಸೇನೆಯ ಕಮಾಂಡರ್‌ಗಳು ಶಸ್ತ್ರಾಸ್ತ್ರ ಬಳಸುವುದಕ್ಕೂ ಅನುಮತಿ ನೀಡಿದೆ. ತನ್ಮೂಲಕ ಉಭಯ ದೇಶಗಳ ನಡುವಣ ಶಸ್ತ್ರಾಸ್ತ್ರ ಬಳಕೆ ನಿರ್ಬಂಧ ಒಪ್ಪಂದಕ್ಕೆ ಎಳ್ಳು ನೀರು ಬಿಟ್ಟಿದೆ.
ಭಾನುವಾರ ಪೂರ್ವ ಲಡಾಖ್‌ನಲ್ಲಿನ ಪರಿಸ್ಥಿತಿಯ ಕುರಿತು ರಕ್ಷಣಾ ಪಡೆಗಳ ಮಹಾದಂಡನಾಯಕ (ಸಿಡಿಎಸ್) ಹಾಗೂ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಚೀನಾದ ಚಟುವಟಿಕೆಗಳ ಬಗ್ಗೆ ಭೂಮಿ, ಆಕಾಶ ಹಾಗೂ ಸಮುದ್ರದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ಯೋಧರ ಕೆಚ್ಚೆದೆಯಿಂದಾಗಿ ಅತಿಕ್ರಮಣ ವಿಫಲ: ಪಿಎಂಒ ಸ್ಪಷ್ಟನೆ!
ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ರಷ್ಯಾ ಜಯ ಸಾಧಿಸಿದ್ದರ 75ನೇ ವರ್ಷಾಚರಣೆಯ ಮಿಲಿಟರಿ ಪರೇಡ್‌ನಲ್ಲಿ ಪಾಲ್ಗೊಳ್ಳಲು ರಾಜನಾಥ್ ಸೋಮವಾರದಿಂದ 3 ದಿನ ರಷ್ಯಾದ ಮಾಸ್ಕೋಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಸಭೆ ನಡೆಸಿದ ಅವರು, ಚೀನಾ ಜೊತೆಗಿನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಯಾವುದೇ ಉಪಟಳಕ್ಕೆ ತಕ್ಕ ಉತ್ತರ ನೀಡಿ ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಗಡಿಯಲ್ಲಿ ಎಂತಹುದೇ ಸಂಘರ್ಷದ ಸಂದರ್ಭ ಬಂದರೂ ಶಸ್ತ್ರಾಸ್ತ್ರ ಬಳಸಬಾರದು ಎಂದು ಭಾರತ- ಚೀನಾ 1996 ಹಾಗೂ 2005ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಗಲ್ವಾನ್ ಘರ್ಷಣೆ ಬಳಿಕ ಭಾರತ ಆ ಒಪ್ಪಂದಕ್ಕೆ ಬಾಧ್ಯವಾಗುವುದಿಲ್ಲ. ಸ್ಥಳದಲ್ಲಿನ ಕಮಾಂಡರ್‌ಗಳು ಅಸಾಧಾರಣ ಸನ್ನಿವೇಶಗಳಲ್ಲಿ ಶಸ್ತ್ರಾಸ್ತ್ರ ಬಳಸಬಹುದು. ಈ ಕುರಿತು ಸದ್ಯದಲ್ಲೇ ಚೀನಾ ಸೇನೆಗೂ ಮಾಹಿತಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಗಲ್ವಾನ್ ನಮ್ಮದು, ಜಗಳ ತೆಗೆದಿದ್ದೇ ಭಾರತ: ಚೀನಾ
ಸಭೆಯ ನಂತರ ಮಾತನಾಡಿದ ಸೇನಾಪಡೆಯ ಉನ್ನತ ಅಧಿಕಾರಿಯೊಬ್ಬರು, ‘ಇನ್ನುಮುಂದೆ ನಮ್ಮ ಕಾರ್ಯಾಚರಣೆ ವಿಭಿನ್ನವಾಗಿರಲಿದೆ. ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಲು ಸ್ಥಳೀಯ ಕಮಾಂಡರ್‌ಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ