ಅಗ್ನಿವೀರ ನೇಮಕ ನಿಯಮ ಬದಲು: ಮೊದಲು ಆನ್‌ಲೈನ್‌ ಟೆಸ್ಟ್‌ ಜಾರಿ

By Kannadaprabha NewsFirst Published Feb 5, 2023, 11:37 AM IST
Highlights

ಅಗ್ನಿವೀರ ನೇಮಕ ನಿಯಮ ಬದಲಾಗಿದ್ದು, ಮೊದಲು ಆನ್‌ಲೈನ್‌ ಟೆಸ್ಟ್‌ ಮೂಲಕ ನೇಮಕ ಮಾಡಲಾಗುತ್ತದೆ. ಇನ್ನು, ಆನ್‌ಲೈನ್‌ ಟೆಸ್ಟ್‌ ಬಳಿಕ, ದೈಹಿಕ, ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂದೂ ತಿಳಿದುಬಂದಿದೆ. 

ನವದೆಹಲಿ: ಅಗ್ನಿವೀರ ಸೇನಾ ಯೋಧರ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದ್ದು, ಆನ್‌ಲೈನ್‌ ಪರೀಕ್ಷೆಯನ್ನು ಮೊದಲು ನಡೆಸಲು ನಿರ್ಧರಿಸಲಾಗಿದೆ. ಆನ್‌ಲೈನ್‌ ಟೆಸ್ಟ್‌ ಪಾಸಾದವರಿಗೆ ಮುಂದೆ ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಈ ಬಗ್ಗೆ ಶುಕ್ರವಾರ ವಿವಿಧ ಪತ್ರಿಕೆಗಳಲ್ಲಿ ಸೇನೆ (Army) ಜಾಹೀರಾತು (Advertisement) ನೀಡಿದ್ದು, ಅಧಿಕೃತ ಅದೇಶವನ್ನೂ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಮುಂದಿನ ತಿಂಗಳು 2ನೇ ಬ್ಯಾಚ್‌ನ 40 ಸಾವಿರ ಅಗ್ನಿವೀರರ (Agniveer) ನೇಮಕಕ್ಕೆ (Appointment) ಚಾಲನೆ ಸಿಗುವ ನಿರೀಕ್ಷೆಯಿದ್ದು, ಅವರು ಮೊದಲು ಆನ್‌ಲೈನ್‌ ಟೆಸ್ಟ್‌ನಲ್ಲಿ (Online Test) ಪಾಲ್ಗೊಳ್ಳುವುದು ಕಡ್ಡಾಯವಾಗಲಿದೆ.

ಇದನ್ನು ಓದಿ: ಅಗ್ನಿಪಥದಿಂದ ಸೇನೆಗೆ ಮತ್ತಷ್ಟುಶಕ್ತಿ, ಇದೊಂದು ಕ್ರಾಂತಿಕಾರಕ ನೀತಿ: ಪ್ರಧಾನಿ ಮೋದಿ

ಈವರೆಗೆ ಮೊದಲು ದೈಹಿಕ ಪರೀಕ್ಷೆ (Physical Test) , ನಂತರ ವೈದ್ಯಕೀಯ (Medical Test) ಹಾಗೂ ಕೊನೆಗೆ ಲಿಖಿತ ಪರೀಕ್ಷೆ (Written Test) ನಡೆಯುತ್ತಿದ್ದವು. ಆದರೆ ಮೊದಲು ದೈಹಿಕ ಪರೀಕ್ಷೆ ಇರುತ್ತಿದ್ದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಬರುತ್ತಿದ್ದರು. ಇವರನ್ನು ನಿರ್ವಹಿಸುವುದು ಸೇನೆಗೆ ಕಷ್ಟವಾಗುತ್ತಿತ್ತು. ಹೀಗಾಗಿ ಮೊದಲೇ ಆನ್‌ಲೈನ್‌ ಲಿಖಿತ ಪರೀಕ್ಷೆ ಏರ್ಪಡಿಸಿದರೆ ಪಾಸಾದವರಷ್ಟೇ ದೈಹಿಕ ಪರೀಕ್ಷೆಗೆ ಅರ್ಹರಾಗುತ್ತಾರೆ. ಇದರಿಂದ ಸೇನೆಗೆ ಸಾಕಷ್ಟು ಉಳಿತಾಯ ಆಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮುಂಚಿನ ಕಾರ್ಯವಿಧಾನವು ದೇಶಾದ್ಯಂತ 200 ಕ್ಕೂ ಹೆಚ್ಚು ಸ್ಕ್ರೀನಿಂಗ್ ಕೇಂದ್ರಗಳಲ್ಲಿ ಲಕ್ಷಗಟ್ಟಲೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದರು. ಇದು ದೊಡ್ಡ ಆಡಳಿತಾತ್ಮಕ ವೆಚ್ಚವನ್ನು ಒಳಗೊಂಡಿತ್ತು ಎಂದು ಮೂಲಗಳು ತಿಳಿಸಿವೆ. 2023-24ರ ಮುಂದಿನ ನೇಮಕಾತಿ ಚಕ್ರದಿಂದ ಸೇನೆಗೆ ಸೇರಲು ಸಿದ್ಧರಿರುವ ಸುಮಾರು 40,000 ಅಭ್ಯರ್ಥಿಗಳಿಗೆ ಹೊಸ ಪ್ರಕ್ರಿಯೆ ಅನ್ವಯವಾಗಲಿದೆ. ಮೊದಲ ಆನ್‌ಲೈನ್ ಸಿಇಇ ಏಪ್ರಿಲ್‌ನಲ್ಲಿ ದೇಶದಾದ್ಯಂತ ಸುಮಾರು 200 ಸ್ಥಳಗಳಲ್ಲಿ ನಡೆಯಲಿದೆ ಎಂದೂ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

ಇದನ್ನೂ ಓದಿ: ಬೀದರ್ ನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ, ಆಕಾಂಕ್ಷಿಗಳ ನೋಂದಣಿ ದಾಖಲೆ

ಕಳೆದ ವರ್ಷದ ನೇಮಕಾತಿ ವೇಳೆ 40 ಸಾವಿರ ಅಗ್ನಿವೀರರು ನೇಮಕ ಆಗಿದ್ದು, 19 ಸಾವಿರ ಜನರು ಸೇವೆಗೆ ಸೇರ್ಪಡೆ ಆಗಿದ್ದಾರೆ. ಇನ್ನು 21 ಸಾವಿರ ಅಗ್ನಿವೀರರು ಮಾರ್ಚ್‌ನಲ್ಲಿ ಸೇರಲಿದ್ದಾರೆ. ಅಗ್ನಿವೀರ ಯೋಜನೆ ಪ್ರಕಾರ ನೇಮಕವಾದ ಸೈನಿಕ 4 ವರ್ಷ ಮಾತ್ರ ಸೇನೆಯಲ್ಲಿ ಕೆಲಸ ಮಾಡುತ್ತಾನೆ. ಆತನ ಕರ್ತವ್ಯ ತೃಪ್ತಿ ತಂದರಷ್ಟೇ ಸೇವೆ ಕಾಯಂ ಆಗಲಿದೆ. 

ಅಗ್ನಿಪಥ ಯೋಜನೆ:
ಕಳೆದ ಜೂನ್‌ 14ರಂದು ಕೇಂದ್ರ ಸರ್ಕಾರ ಘೋಷಿಸಿದ ಈ ಯೋಜನೆ ಅನ್ವಯ ಹದಿನೇಳೂವರೆ ವರ್ಷ ಪೂರೈಸಿದ ಮತ್ತು 21 ವರ್ಷ ಮೀರದ ಯುವಕ, ಯುವತಿಯರು ಅಗ್ನಿವೀರ ಯೋಜನೆಯಲ್ಲಿ ಭಾಗಿಯಾಗಬಹುದು. ಆಯ್ಕೆಯಾದವರಿಗೆ 4 ವರ್ಷಗಳ ಅಲ್ಪಾವಧಿ ಸೇವೆ ನೀಡಲಾಗುತ್ತದೆ. ಹೀಗೆ ಸೇವೆ ಸಲ್ಲಿಸಿದವರ ಪೈಕಿ ಶೇ. 25ರಷ್ಟು ಯೋಧರನ್ನು ಮತ್ತೆ 15 ವರ್ಷಗಳಿಗೆ ಮುಂದುವರೆಸಲಾಗುತ್ತದೆ. ಹೀಗೆ ತರಬೇತಿ ಪಡೆದವರಿಗೆ ಸರ್ಕಾರ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ತರಬೇತಿ, ಸೇವೆ ಸಲ್ಲಿಸಿ ಬಂದವರಿಗೆ ಈಗಾಗಲೇ ವಿವಿಧ ಹುದ್ದೆಗಳ ನೇಮಕಾತಿ ವೇಳೆ ಮೀಸಲು ನೀಡುವುದಾಗಿ ಹಲವು ರಾಜ್ಯ ಸರ್ಕಾರಗಳು ಘೋಷಿಸಿವೆ.

ಇದನ್ನು ಓದಿ: Agnipath recruitment rally: ಬೀದರ: ಇಂದಿನಿಂದ ಭಾರತದ ಬೃಹತ್‌ ಅಗ್ನಿಪಥ್‌ ನೇಮಕ Rally

click me!