ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರೆದಿದ್ದು, ಗುರುವಾರ ಮತ್ತೊಂದು ಸೇತುವೆ ಕುಸಿದಿದೆ. ಇದು ಕಳೆದ 15 ದಿನದಲ್ಲಿ ಸಂಭವಿಸಿದ 10ನೇ ಸೇತುವೆ ದುರಂತವಾಗಿದೆ. ಸರಣ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆ ಕುಸಿದಿದೆ.
ಪಟನಾ (ಜು.05): ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರೆದಿದ್ದು, ಗುರುವಾರ ಮತ್ತೊಂದು ಸೇತುವೆ ಕುಸಿದಿದೆ. ಇದು ಕಳೆದ 15 ದಿನದಲ್ಲಿ ಸಂಭವಿಸಿದ 10ನೇ ಸೇತುವೆ ದುರಂತವಾಗಿದೆ. ಸರಣ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅಮನ್ ಸಮೀರ್, ‘ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 3 ಸೇತುವೆ ಕುಸಿದಿದೆ. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಲಾಗುವುದು.
ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮೂರು ಸೇತುವೆ ಕುಸಿತ ಪ್ರಕರಣದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಸರಣ್ ಮತ್ತು ಪಕ್ಕದ ಸಿವಾನ್ ಜಿಲ್ಲೆಯ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತಿದ್ದ ಈ ಸೇತುವೆಯನ್ನ 15 ವರ್ಷಗಳ ಹಿಂದೆ ಗಂಡಕಿ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನದಿಂದ ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಈ ಕಾರಣಕ್ಕೆ ಸೇತುವೆ ಕುಸಿದಿರಬಹುದು ಎನ್ನಲಾಗಿದೆ.
ಆಂಧ್ರಕ್ಕೆ ಹೆಚ್ಚಿನ ಹಣಕಾಸು ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಚಂದ್ರಬಾಬು ನಾಯ್ಡು ಮನವಿ
ರಾಜ್ಯದ ಸಿವಾನ್, ಸರಣ್, ಅರಾರಿಯಾ, ಪೂರ್ವ ಚಂಪಾರಣ್, ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಈ ಸೇತುವೆ ಕುಸಿತದ ಘಟನೆಗಳು ಸಂಭವಿಸಿವೆ. ಈ ನಡುವೆ ದುರಸ್ತಿಯ ಅಗತ್ಯವಿರುವ ಸೇತುವೆಗಳನ್ನು ಗುರುತಿಸಿ ಕೂಡಲೇ ಅವುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಸೇತುವೆ ಕುಸಿತ ದುರಂತ: ಬಿಹಾರದಲ್ಲಿ ಸರಣಿ ಸೇತುವೆ ದುರಂತದ ಬೆನ್ನಲ್ಲೇ ಜಾರ್ಖಂಡ್‌ನಲ್ಲಿಯೂ ನಿರ್ಮಾಣ ಹಂತದ ಸೇತುವೆಯೊಂದು ಕುಸಿದಿದೆ. ಭಾರೀ ಮಳೆಗೆ ಕಾಮಗಾರಿ ಪ್ರಗತಿಯಲ್ಲಿದ್ದ ಸೇತುವೆಯ ಗರ್ಡರ್ ಕುಸಿದು ಮತ್ತು ಪಿಲ್ಲರ್ ವಾಲಿ ಈ ಘಟನೆ ಸಂಭವಿಸಿದೆ. ಸುಮಾರು 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿದಿದೆ. ರಾಂಚಿಯಿಂದ ಸುಮಾರು 235 ಕಿಮೀ ದೂರದಲ್ಲಿರುವ ಡಿಯೋರಿ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ.
ಮತ್ತೊಬ್ಬ ಜೆಇಇ ವಿದ್ಯಾರ್ಥಿ ನೇಣಿಗೆ ಶರಣು: ಈ ವರ್ಷದ 13ನೇ ಕೇಸ್
ಡುಮ್ರತೋಲಾ ಮತ್ತು ಕರಿಪಾರ್ಹಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಫತೇಪುರ್ ಮತ್ತು ಭೇಲ್ವಾಗತಿ ನಡುವೆ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ದುರಂತದಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ.‘ಭಾರೀ ಮಳೆಗೆ ಸೇತುವೆ ಕುಸಿದಿದೆ. ‘ಗರ್ಡರ್ ಕುಸಿದು ಪಿಲ್ಲರ್ ವಾಲಿದೆ. ಸೇತುವೆಯನ್ನು ಮರು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಗುವುದು’ ಎಂದು ಗಿರಿದಿಹ್ ರಸ್ತೆ ನಿರ್ಮಾಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್ ತಿಳಿಸಿದ್ದಾರೆ.