ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಬೋಸ್ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಆರೋಪಿಸಿದ್ದ ಸಂತ್ರಸ್ತ ಮಹಿಳೆ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಕಲ್ಕತ್ತಾ (ಜು.05): ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಬೋಸ್ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಆರೋಪಿಸಿದ್ದ ಸಂತ್ರಸ್ತ ಮಹಿಳೆ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಧಿಕಾರದ ಅವಧಿಯಲ್ಲಿ ತಾವು ಚಲಾಯಿಸಿದ ಅಧಿಕಾರ ಮತ್ತು ಕರ್ತವ್ಯದ ಕುರಿತು ರಾಜ್ಯಪಾಲರು ಯಾವುದೇ ನ್ಯಾಯಾಲಯಕ್ಕೂ ಹೇಳಿಕೆ ನೀಡಬೇಕಿಲ್ಲ ಎಂದು ಸಂವಿಧಾನದ 361ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ರಕ್ಷಣೆಯನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಇಂಥ ವಿಧಿಯು ‘ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರಿಗೆ ರಕ್ಷಣೆ ನೀಡಿರುವ ಅರ್ಥ ಲೈಂಗಿಕ ಕಿರುಕುಳವೂ ಅವರ ಕೆಲಸದ ಭಾಗ ಎಂದೇ? ನ್ಯಾಯ ದೊರಕಲು ಅವರು ಅಧಿಕಾರದಿಂದ ಕೆಳಗಿಳಿಯುವ ತನಕ ಕಾಯಬೇಕೇ’ ಎಂದು ಸಂತ್ರಸ್ತೆ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಕಟುವಾಗಿ ಪ್ರಶ್ನಸಿದ್ದಾರೆ. ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿ ಕರೆಸಿಕೊಂಡ ರಾಜ್ಯಪಾಲರು ಏ.24 ಹಾಗು ಮೇ.2ರಂದು ರಾಜ್ ಭವನದ ಆವರಣದಲ್ಲೇ ತನ್ನ ಮೆಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದರು.
ನನಗೆ ಅಭದ್ರತೆ ಕಾಡುತ್ತಿದೆ: ಇಲ್ಲಿನ ರಾಜಭವನದಲ್ಲಿ ನಿಯೋಜಿಸಲಾಗಿರುವ ಕೋಲ್ಕತಾ ಪೊಲೀಸರಿಂದ ನನಗೆ ಅಭದ್ರತೆ ಕಾಡುತ್ತಿದೆ. ಅವರನ್ನು ಇಲ್ಲಿಂದ ತೆರವು ಮಾಡುವಂತೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೂಚಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಕಿಡಿಕಾರಿದ್ದಾರೆ. ಇತ್ತೀಚೆಗೆ ಬೋಸ್ ಮೇಲೆ ರಾಜಭವನ ಮಹಿಳಾ ಸಿಬ್ಬಂದಿಯಿಂದ ಕಾಮಚೇಷ್ಟೆ ಆರೋಪ ಕೇಳಿಬಂದಿತ್ತು. ಆಗಿನಿಂದ ರಾಜ್ಯಪಾಲರು, ‘ಕೋಲ್ಕತಾ ಪೊಲೀಸರು ರಾಜಭವನದಲ್ಲಿ ಭದ್ರತಾ ನೆಪದಲ್ಲಿ ಇದ್ದು ಗೂಢಚರ್ಯೆ ನಡೆಸುತ್ತಿದ್ದಾರೆ. ಎಲ್ಲ ಮಾಹಿತಿಯನ್ನು ಮಮತಾಗೆ ನೀಡುತ್ತಾರೆ’ ಎಂದು ಕಿಡಿಕಾರಿದ್ದರು.
ಹಾಥ್ರಸ್ ಕಾಲ್ತುಳಿತ, 6 ಜನರ ಬಂಧನ: ಸಂಘಟಕನ ಪತ್ತೆಗೆ 1 ಲಕ್ಷ ಬಹುಮಾನ
ಈ ಬಗ್ಗೆ ಮತ್ತೆ ಗುರುವಾರ ಪಿಟಿಐ ಜತೆ ಮಾತನಾಡಿದ ಅವರು, ‘ನಾನು ರಾಜ್ಯ ಪೊಲೀಸರಿಗೆ ರಾಜಭವನವನ್ನು ಖಾಲಿ ಮಾಡುವಂತೆ ಆದೇಶ ನೀಡಿದ್ದರೂ ಖಾಲಿ ಮಾಡದೆ ರಾಜಭವನದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತವಾಗಿ ನಿಯೋಜಿಸಿರುವ ಪ್ರಭಾರಿ ಅಧಿಕಾರಿ ಮತ್ತು ಅವರ ತಂಡದ ಉಪಸ್ಥಿತಿಯು ನನ್ನ ವೈಯಕ್ತಿಕ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ’ ಎಂದು ಹೇಳಿದ್ದಾರೆ. ‘ಹೊರಗಿನ ಪ್ರಭಾವಿ ವ್ಯಕ್ತಿಗಳ ಒತ್ತಾಯದ ಮೇರೆಗೆ ರಾಜಭವನದಲ್ಲಿ ನಿಯೋಜಿಸಲಾದ ಸಿಬ್ಬಂದಿ ನಿರಂತರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ. ನನ್ನ ಪ್ರತಿಯೊಂದು ಚಲನವಲನಗಳನ್ನು ಹಾಗೂ ನನ್ನ ಕೆಲಸದ ಮೇಲೂ ಕಣ್ಣಿಟ್ಟಿದ್ದಾರೆ. ಇಲ್ಲಿಯ ವಿಚಾರ ಮತ್ತು ಮಾಹಿತಿಗಳನ್ನು ಹೊರಗೆ ತಿಳಿಸುತ್ತಿರುತ್ತಾರೆ’ ಎಂದು ಬೋಸ್ ಹೇಳಿದ್ದಾರೆ.