
ಅಂದು ಮೇ 26 1999. ಅಂದರೆ ಇಂದಿಗೆ 27 ವರ್ಷಗಳ ಹಿಂದಿನ ಸ್ಟೋರಿ ಇದು. ಕಾರ್ಗಿಲ್, ದ್ರಾಸ್ ಮತ್ತು ಬಟಾಲಿಕ್ ವಲಯಗಳಲ್ಲಿ ಪಾಕಿಸ್ತಾನಿ ಪಡೆಗಳು ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರು. ಪರ್ವತದ ಶಿಖರದಿಂದ ಗುಂಡು ಹಾರಿಸಿದರೆ, ಕೆಳಗೆ ಇರುವ ಭಾರತೀಯ ಯೋಧರು ಹೇಗೆ ಮಾಡಿದರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಅವರ ಪ್ಲ್ಯಾನ್ ಇದಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಥಾನಗಳನ್ನು ಆಕ್ರಮಿಸಿಕೊಂಡಿತ್ತಯ ಪಾಕಿಸ್ತಾನಿ ಸೇನೆ. ಗೆಲುವು ನಮ್ಮದೇ ಎನ್ನುವ ಅಹಂನಲ್ಲಿತ್ತು ಪಾಕಿಸ್ತಾನ. ಏಕೆಂದರೆ ಅಷ್ಟು ದುರ್ಗಮ ಸ್ಥಾನವನ್ನು ಏರಿ ಕುಳಿತಿದ್ದರು.
ಆದರೆ ನಮ್ಮದು ಭಾರತೀಯ ಸೇನೆ ಎನ್ನುವುದನ್ನೇ ಅವರು ಮರೆತುಬಿಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವಿದ್ದ ಅವಧಿಯದು. ಭಾರತೀಯ ಸೇನೆ ಅಂದು ಮಾಡಿದ ಕಾರ್ಯಾಚರಣೆಯೇ ಆಪರೇಷನ್ ಸಫೇದ್ ಸಾಗರ್. ಆದರೆ ಈ ಆಪರೇಷನ್ ಅದೆಷ್ಟು ಅಪಾಯಕಾರಿಯಾಗಿತ್ತು ಎಂದರೆ, ಇದಕ್ಕೆ ಕೇಂದ್ರ ಸರ್ಕಾರ ಯೋಧರಿಗೆ ಅನುಮತಿಯನ್ನೇ ನೀಡಿರಲಿಲ್ಲ. ಯುದ್ಧ ಶುರುವಾಗಿ 14 ದಿನ ಕಳೆದರು ಕೂಡ ವಾಯುಪಡೆ ಬಳಸೋಕೆ ಸರ್ಕಾರ ಆರಂಭದಲ್ಲಿ ಧೈರ್ಯ ತೋರಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, 1998 ರಲ್ಲಿಷ್ಟೇ ಭಾರತ ಪಾಕಿ ಎರಡು ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ಮಾಡಿದ್ದವು. ಆದ್ದರಿಂದ ಬಹಳ ಚರ್ಚೆಯ ಬಳಿಕ ಕೊನೆಗೆ ಅನುಮತಿ ಸಿಕ್ಕಿತ್ತು.
ಒರಟಾದ ಪರ್ವತ ಪ್ರದೇಶದಲ್ಲಿ ಅತಿ ಎತ್ತರದ ನಿಖರ ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಐಎಎಫ್ ಅತ್ಯಂತ ಕರಾರುವಕ್ಕಾಗಿ ಪೂರ್ಣಗೊಳಿಸಿತ್ತು. ಪಾಕಿಗಳು ಅಡಗಿ ಕುಳಿತಿದ್ದ ಜಾಗಕ್ಕಿಂತಲೂ ಮೇಲೆ ಆಗಸದ ಎತ್ತರಕ್ಕೆ ಹೋಗಿದ್ದ ನಮ್ಮ ಯೋಧರು, ಅಲ್ಲಿಂದ ಬೆಂಕಿಯ ಮಳೆಯನ್ನೇ ಸುರಿಸಿಬಿಟ್ಟರು. ಹದಿನಾರುವರೆ ಸಾವಿರ ಅಡಿಗಿಂತಲೂ ಎತ್ತರಕ್ಕೆ ಯೋಧರು ದುರ್ಗಮ ಹಾದಿಯಲ್ಲಿ ಸಾಗಿದ್ದರು. ಕೆಲವು ಯೋಧರು ಪ್ರಾಣ ಕಳೆದುಕೊಂಡರು. ಕೊನೆಗೆ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯ ಸಿಕ್ಕಿತು.
ಈ ಕಾರ್ಯಾಚರಣೆ ಇತಿಹಾಸದಲ್ಲಿ ದಾಖಲಾಗಿದೆ. ಅದಕ್ಕೆ ಕಾರಣ, ಮಿರಾಜ್ 2000, ಮಿಗ್ 21, ಎಂಐ 17,s ಜಾಗ್ವಾರ್, ಮಿಗ್ 23, ಮಿಗ್ 27, ಚೇತಕ್ ಮತ್ತು ಮಿಗ್ 29ನಂತಹ ಯುದ್ಧ ವಿಮಾನಗಳನ್ನು ಬಳಸಲಾಗಿತ್ತು. ಈ ಯುದ್ಧ ವಿಮಾನಗಳು ಶತ್ರು ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಯಿತು. ಅದು ಜಗತ್ತಿನ ಮಿಲಿಟರಿ ಇತಿಹಾಸದಲ್ಲಿ ನಡೆದ ಹೈ ಆಲ್ಟಿಟ್ಯೂಡ್ ಏರ್ ವಾರ್ ಎಂದೇ ಫೇಮಸ್ ಆಗಿದೆ. ಮೊದಲ ಬಾರಿಗೆ ಪಾಕಿಗಳಿಗೆ ಇಸ್ರೇಲ್ ಬಾಂಬ್ಗಳ ರುಚಿಯನ್ನು ಭಾರತ ತೋರಿತ್ತು.
ಕಾರ್ಗಿಲ್ ಪರ್ವತಗಳ ಹಿಮಾವೃತ ಶಿಖರಗಳಲ್ಲಿ ಸುಮಾರು ಮೂರು ತಿಂಗಳ ಕಾಲ ಯುದ್ಧ ನಡೆಯಿತು. ಮೇ ತಿಂಗಳಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಭಯೋತ್ಪಾದಕರು ಕಾರ್ಗಿಲ್ ವಲಯದ ಶಿಖರಗಳನ್ನು ಆಕ್ರಮಿಸಿಕೊಂಡಾಗ, ಭಾರತೀಯ ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿತು. ಭಾರತವು ತನ್ನ ಭೂಪ್ರದೇಶವನ್ನು ಮರಳಿ ಪಡೆಯಲು 'ಆಪರೇಷನ್ ವಿಜಯ್'ನ್ನು ಪ್ರಾರಂಭಿಸಿತು. ಜುಲೈ 26 ರಂದು ಭಾರತ ಅಂತಿಮವಾಗಿ ಕಾರ್ಗಿಲ್ ಯುದ್ಧವನ್ನು ಗೆದ್ದುಕೊಂಡಿತು. ಭಾರತವು ಪ್ರತಿ ವರ್ಷದ ಜುಲೈ 26ನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ