ಕೃಷಿ ಭೂಮಿಯಲ್ಲಿ ಸಿಕ್ತು ವಜ್ರ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಆಂಧ್ರದ ರೈತ

By Anusha Kb  |  First Published Aug 26, 2024, 9:33 AM IST

ಆಂಧ್ರ ಪ್ರದೇಶದ ರೈತನೊಬ್ಬ ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರವನ್ನು ಕಂಡುಹಿಡಿದಿದ್ದಾರೆ. ಈ ಅಪರೂಪದ ಸಂಪತ್ತು ಅವರ ಜೀವನವನ್ನೇ ಬದಲಿಸಿದೆ. ಈ ಪ್ರದೇಶವು ವಜ್ರಗಳಿಗೆ ಹೆಸರುವಾಸಿಯಾಗಿದ್ದು, ಅನೇಕರು ತಮ್ಮ ಅದೃಷ್ಟ ಪರೀಕ್ಷಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.


ಕರ್ನೂಲ್‌: ಆಂಧ್ರ ಪ್ರದೇಶದ ರೈತರೊಬ್ಬರಿಗೆ ಜಮೀನಿನಲ್ಲಿ ಲಕ್ಷಾಂತರ ಮೌಲ್ಯದ ವಜ್ರವೊಂದು ಸಿಕ್ಕಿದ್ದು, ಇದರಿಂದ ರಾತ್ರೋರಾತ್ರಿ ಈ ರೈತನಿಗೆ ಶ್ರೀಮಂತಿಕೆ ಬಂದಿದ್ದು, ಲಕ್ಷಾಧಿಪತಿಯಾಗಿದ್ದಾರೆ. ಕರ್ನೂಲ್‌ ಜಿಲ್ಲೆಯ ತುಗ್ಗಲಿ ಮಂಡಲದ ನಿವಾಸಿಯಾಗಿರುವ ರೈತ ಬೊಯಾ ರಾಮಂಜನೇಯಲು ಅವರಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಜ್ರ ಸಿಕ್ಕಿದೆ. ರಾಮಾಂಜನೇಯಲು ಹಾಗೂ ಅವರು ಸೋದರ ಶೇಖರ್ ಅವರು ತಮ್ಮ ಎರಡು ಎಕರೆಯ ಜಮೀನಿನಲ್ಲಿ ಬೆಳೆ ಬೆಳೆಯುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು. ಬೆಳೆ ಬೆಳೆಯದ ಸಮಯದಲ್ಲಿ ಅವರು ಅವರು ಚಾಲಕರಾಗಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಶುಕ್ರವಾರ ಬೋಯಾ ರಾಮಂಜನೇಯಲು  ಅವರಿಗೆ ಅದೃಷ್ಟ ಖುಲಾಯಿಸಿದೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಹೊಳೆಯುವ ಕಲ್ಲಿನಂತಿದ್ದ ವಸ್ತು ಸಿಕ್ಕಿದ್ದು, ಅದನ್ನು ಅವರು ಜೊನ್ನಗಿರಿಯ ವಜ್ರದ ವ್ಯಾಪಾರಿಯೊಬ್ಬರಿಗೆ ತೋರಿಸಿದ್ದಾರೆ. ಆ ವಜ್ರದ ವ್ಯಾಪಾರಿ ಇವರಿಗೆ 12 ಲಕ್ಷ ರೂಪಾಯಿ ಹಣ ಹಾಗೂ ಐದು ತೊಲ ಬಂಗಾರ ನೀಡಿ ರಾಮಾಂಜನೇಯಗೆ ಸಿಕ್ಕ ವಜ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿರೀಕ್ಷೆಯೂ ಮಾಡದಿದ್ದಾಗ ಒಮ್ಮಲೇ ಬಂದ ಈ ಹಣವನ್ನು ನೋಡಿ ರಾಮಾಂಜನೇಯ ಫುಲ್ ಖುಷಿಯಾಗಿದ್ದಾರೆ. ಆದರೆ ಈ ವಿಚಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. ಇಲ್ಲಿನ ಕೃಷಿ ಭೂಮಿಯಲ್ಲಿ ಮನ್ಸೂನ್ ಸಮಯದಲ್ಲಿ ಆಗಾಗ ವಜ್ರ ಸಿಕ್ಕುವುದು ಸಾಮಾನ್ಯವಾಗಿದೆ. ಕರ್ನೂಲ್ ಜಿಲ್ಲೆಯ ತುಗ್ಗಲಿ, ಮಡ್ಡಿಕೆರ, ಪೆರ್ವಲಿ, ಪಗಿದಿರಯಿ, ಜೊನ್ನಗಿರಿ ಹಾಗೂ ಯೆರ್ರಗುಡಿ ಈ ಪ್ರದೇಶಗಳಲ್ಲಿ ಆಗಾಗ ವಜ್ರಗಳು ಕಾಣಲು ಸಿಗುತ್ತವೆ. ಇದಲ್ಲದೇ  ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಇತರ ಸ್ಥಳಗಳ ಜನರು ಕೂಡ ಇಲ್ಲಿ ಬಂದು ತೆಲುಗು ರಾಜ್ಯಗಳ ಈ ಸ್ಥಳದಲ್ಲಿ ವಜ್ರಗಳನ್ನು ಹುಡುಕುತ್ತಾರೆ. ಹಾಗೂ ಇಲ್ಲಿ ಸಿಕ್ಕ ವ್ರಜವಗಳನ್ನು ಗೂಟಿ, ಜೊನ್ನಗಿರಿ ಹಾಗೂ ಪೆರವಲಿ ಬಳಿ ಇರುವ ವಜ್ರದ ವ್ಯಾಪಾರಿಗಳು ಖರೀದಿಸುತ್ತಾರೆ. ಆದರೆ ಈ ವ್ಯಾಪಾರಿಗಳು ತುಂಬಾ ದುಬಾರಿ ಬೆಲೆಯ ವಜ್ರಗಳನ್ನು ಅತೀ ಕಡಿಮೆ ಬೆಲೆಗೆ ಖರೀದಿಸುತ್ತಾರೆ ಎಂಬ ಆರೋಪವಿದೆ. ಇಲ್ಲಿರುವ ಅನೇಕರಿಗೆ ವಜ್ರದ ನಿಜವಾದ ಬೆಲೆ ಗೊತ್ತಿರದೇ ಇರುವುದು ಕೂಡ ಈ ಮೋಸಕ್ಕೆ ಕಾರಣವಾಗಿದೆ. 

Tap to resize

Latest Videos

ಇಲ್ಲಿನ ಬಹುತೇಕರು ಒಂದಲ್ಲ ಒಂದು ದಿನ ನಮ್ಮ ಜಮೀನಿನಲ್ಲೂ ವಜ್ರ ಸಿಕ್ಕಿ ನಾವು ಕೂಡ ಶ್ರೀಮಂತರಾಗಬಹುದು ಎಂಬ ಆಸೆಯೊಂದಿಗೆ ಆಗಾಗ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಒಂದು ವರ್ಷದಲ್ಲಿ ಈ ಜೊನ್ನಗಿರಿ ಪ್ರದೇಶದಲ್ಲಿ ಒಟ್ಟು 42 ವಜ್ರಗಳು ಪತ್ತೆಯಾಗಿವೆ. ಅದರಲ್ಲೂ ಪ್ರತಿ ವಾರ 4 ರಿಂದ 8 ರಷ್ಟು ವಜ್ರಗಳು ಇಲ್ಲಿ ಸಿಗುತ್ತವೆ ಎಂದು ವಜ್ರದ ವ್ಯಾಪಾರಿಗಳು ಹೇಳುತ್ತಾರೆ. ಆದರೆ ಯಾರಿಗೆ ಸಿಕ್ಕಿದೆ ಹಾಗೂ ಯಾರು ಮಾರಾಟ ಮಾಡಿದರು ಎಂಬುದನ್ನು ಅವರು ಬಿಟ್ಟುಕೊಡುವುದಿಲ್ಲ. 

click me!