ಅನಂತ್ ಮತ್ತು ರಾಧಿಕಾ ಅವರ ಎರಡನೇ ವಿವಾಹ ಪೂರ್ವ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ನಡೆಯುತ್ತಿದೆ. ಇದೇ ವೇಳೆ ಇವರಿಬ್ಬರ ಮದುವೆ ಕಾರ್ಡ್ ಕೂಡ ಬಹಿರಂಗವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸದ್ಯ ಇವರಿಬ್ಬರ ವಿವಾಹ ಪೂರ್ವ ಸಂಭ್ರಮಾಚರಣೆ ನಡೆಯುತ್ತಿದೆ. ಮಾರ್ಚ್ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್-ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮದ 1ನೇ ಸುತ್ತನ್ನು ಆಯೋಜಿಸಿದ್ದರೆ, 2ನೇ ಸುತ್ತನ್ನು ಇಟಲಿಯಲ್ಲಿ ಕ್ರೂಸ್‌ನಲ್ಲಿ ಆಯೋಜಿಸಲಾಗಿದೆ.
ಅನಂತ್-ರಾಧಿಕಾ ಅವರ ಕ್ರೂಸ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ವರೆಗೆ ಎಲ್ಲಾ ಬಾಲಿವುಡ್ ತಾರೆಯರು ಇಟಲಿ ತಲುಪಿದ್ದಾರೆ. ಅನೇಕ ವಿದೇಶಿ ಸೆಲೆಬ್ರಿಟಿಗಳು ಸಹ ಈ ಆಚರಣೆಯ ಭಾಗವಾಗುತ್ತಿದ್ದಾರೆ. ಈ ನಡುವೆ ಅನಂತ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯೂ ಹೊರಬಿದ್ದಿದೆ. ಇವರಿಬ್ಬರ ಮದುವೆ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಮತ್ತು ಯಾವೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂಬುದನ್ನು ತಿಳಿಯೋಣ.
ಅನಂತ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆ
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ. ಜುಲೈ 12ರಂದು ಜೋಡಿ ವಿವಾಹವಾಗಲಿದ್ದಾರೆ. ಅತಿಥಿಗಳು ಆಮಂತ್ರಣ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅನಂತ್-ರಾಧಿಕಾ ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಗೋಲ್ಡನ್ ಬಣ್ಣದ್ದಾಗಿದೆ. ಇವರಿಬ್ಬರ ವಿವಾಹ ಕಾರ್ಯಕ್ರಮದ ವಿವರಗಳನ್ನೂ ಕಾರ್ಡ್‌ನಲ್ಲಿ ನೀಡಲಾಗಿದೆ.
ಅದರಂತೆ, 12ರಂದು ವಿವಾಹ- ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, 13ರಂದು ಆಶೀರ್ವಾದ ಕಾರ್ಯಕ್ರಮ- ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ 14ರಂದು ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೇಳಲಾಗಿದೆ. ಈ ಆಮಂತ್ರಣದ ಬೆನ್ನಲ್ಲೇ ಅಧಿಕೃತ ಆಮಂತ್ರಣ ಬರಲಿದೆ ಎಂದೂ ಹೇಳಲಾಗಿದೆ.