'16 ವರ್ಷ ಓದಿದ್ರೂ ಇಷ್ಟು ಚಂದ ಮಾತಾಡೋಕೆ ಬರಲ್ಲ': ಆಟೋ ಡ್ರೈವರ್ ಯಾದವ್ ಚಾಚಾ ಇಂಗ್ಲಿಷ್ ಜ್ಞಾನಕ್ಕೆ ಸೋಶಿಯಲ್ ಮೀಡಿಯಾ ಫಿದಾ

Published : Nov 09, 2026, 02:44 PM IST
amravati elderly auto driver yadav chacha fluent english viral video

ಸಾರಾಂಶ

ವೃದ್ಧ ಆಟೋ ಚಾಲಕರೊಬ್ಬರು “ನಿಮಗೆ ಇಂಗ್ಲಿಷ್ ಗೊತ್ತಿದ್ದರೆ ಲಂಡನ್, ಪ್ಯಾರಿಸ್, ಅಮೆರಿಕಕ್ಕೆ ಹೋಗಬಹುದು. ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ” ಎಂದು ಅವರು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇಂಗ್ಲಿಷ್ ಮಾತನಾಡಲು ದೊಡ್ಡ ದೊಡ್ಡ ಪದವಿ ಬೇಕಿಲ್ಲ, ಆತ್ಮವಿಶ್ವಾಸವಿದ್ದರೆ ಸಾಕು ಎಂಬುದನ್ನು ಮಹಾರಾಷ್ಟ್ರದ ವೃದ್ಧ ಆಟೋ ಚಾಲಕರೊಬ್ಬರು ಸಾಬೀತುಪಡಿಸಿದ್ದಾರೆ. “ನಿಮಗೆ ಇಂಗ್ಲಿಷ್ ಗೊತ್ತಿದ್ದರೆ ಲಂಡನ್, ಪ್ಯಾರಿಸ್, ಅಮೆರಿಕಕ್ಕೆ ಹೋಗಬಹುದು. ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ” ಎಂದು ಅವರು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದ ಅಮರಾವತಿಯ ಈ ವೃದ್ಧ ಆಟೋ ಚಾಲಕರು ಸರಾಗವಾಗಿ ಇಂಗ್ಲಿಷ್ ಮಾತನಾಡುವ ಶೈಲಿ ಮತ್ತು ಅವರ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. 2024ರಲ್ಲಿ ಚಿತ್ರೀಕರಿಸಲಾಗಿದ್ದ ಈ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾವಿರಾರು ಜನರ ಗಮನ ಸೆಳೆಯುತ್ತಿದೆ.

ಲಂಡನ್, ಪ್ಯಾರಿಸ್, ಅಮೆರಿಕದ ಉದಾಹರಣೆ ಕೊಟ್ಟ ಅಜ್ಜ!

ವೈರಲ್ ವಿಡಿಯೋದಲ್ಲಿ ವೃದ್ಧ ಆಟೋ ಚಾಲಕರು ಯುವಕನೊಬ್ಬನೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು. ಆಟೋದಲ್ಲಿ ಪ್ರಯಾಣಿಕರೊಬ್ಬರು ಕುಳಿತಿರುವಾಗಲೇ ಯುವಕನಿಗೆ ಇಂಗ್ಲಿಷ್ ಕಲಿಯುವ ಮಹತ್ವವನ್ನು ಅವರು ವಿವರಿಸಿದ್ದಾರೆ. “ನಾನು ಹೇಳುವುದನ್ನು ಬಹಳ ಗಮನವಿಟ್ಟು ಕೇಳು. ನಿನಗೆ ಇಂಗ್ಲಿಷ್ ಗೊತ್ತಿದ್ದರೆ ಲಂಡನ್, ಪ್ಯಾರಿಸ್, ಅಮೆರಿಕಕ್ಕೆ ಹೋಗಬಹುದು. ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಲಂಡನ್‌ನ ಹೋಟೆಲ್‌ಗೆ ಹೋದಾಗ ಇಂಗ್ಲಿಷ್ ಗೊತ್ತಿದ್ದರೆ ಅಲ್ಲಿನ ವೇಟರ್ ಬಳಿ ಒಂದು ಲೋಟ ನೀರು ಕೇಳಬಹುದು. ಆದರೆ ಮರಾಠಿಯಲ್ಲಿ ಕೇಳಿದರೆ ಅವರಿಗೆ ಅರ್ಥವಾಗುವುದಿಲ್ಲ ಎಂದು ಉದಾಹರಣೆ ಸಮೇತ ವಿವರಿಸಿದ್ದಾರೆ. “ಅದಕ್ಕಾಗಿಯೇ ನಾನು ಹೇಳುತ್ತಿರುವುದು, ಇಂಗ್ಲಿಷ್ ಕಲಿಯಿರಿ, ಇಂಗ್ಲಿಷ್‌ನಲ್ಲಿ ಮಾತನಾಡಿ. ಅದು ಅಂತರರಾಷ್ಟ್ರೀಯ ಭಾಷೆ” ಎಂದು ಯುವಕನಿಗೆ ಸಲಹೆ ನೀಡಿದ್ದಾರೆ.

ಈ ಆಟೋ ಚಾಲಕನ ಹೆಸರು 'ಯಾದವ್ ಚಾಚಾ'!

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಭೂಷಣ್ ಪೋಹಾನೆ (Bhushan Pohane) ಅವರು ಹಂಚಿಕೊಂಡಿದ್ದಾರೆ. @kon_bhushan1222 ಎಂಬ ಖಾತೆಯಲ್ಲಿ ವಿಡಿಯೋ ಪ್ರಕಟವಾಗಿದ್ದು, ಆಟೋ ಚಾಲಕರ ಇಂಗ್ಲಿಷ್ ಕೇಳಿ ತಮಗೂ ಆಶ್ಚರ್ಯವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಅಮರಾವತಿಯ ಸ್ಥಳೀಯರು ಈ ವೃದ್ಧರನ್ನು ಪ್ರೀತಿಯಿಂದ 'ಯಾದವ್ ಚಾಚಾ' ಎಂದು ಕರೆಯುತ್ತಾರೆ. ಅವರ ಆಟೋ ಹಲವು ವರ್ಷಗಳಿಂದ ತಮ್ಮ ಮನೆಯ ಮುಂದೆ ನಿಲ್ಲುತ್ತಿತ್ತು. ಅವರನ್ನು ಬಹಳ ವರ್ಷಗಳಿಂದ ಪರಿಚಯವಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಕಷ್ಟಪಟ್ಟು ದುಡಿಯುವ, ಸ್ನೇಹಪರ ಹಾಗೂ ಸದಾ ನಗುಮುಖದಿಂದ ಮಾತನಾಡುವ ವ್ಯಕ್ತಿ ಎಂದೂ ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲರಿಗೂ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್ ಎಂದು ಇಂಗ್ಲಿಷ್‌ನಲ್ಲೇ ಶುಭಾಶಯ ಕೋರುತ್ತಾರೆ ಎಂದು ತಿಳಿಸಿದ್ದಾರೆ.

16 ವರ್ಷ ಓದಿದರೂ ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಆಗಿಲ್ಲ ಎಂದ ನೆಟ್ಟಿಗರು!

ಯಾದವ್ ಚಾಚಾ ಅವರ ಇಂಗ್ಲಿಷ್ ಕೇಳಿದ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. 16 ವರ್ಷಗಳ ಕಾಲ ಶಿಕ್ಷಣ ಪಡೆದಿದ್ದರೂ ತಮಗೆ ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾಗಿಲ್ಲ ಎಂದು ಕೆಲವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರ ಮಾತನಾಡುವ ಶೈಲಿಯನ್ನು ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಹೋಲಿಸಿದ್ದಾರೆ. ಅವರ ನಗು, ಸರಳತೆ ಮತ್ತು ಆತ್ಮವಿಶ್ವಾಸಕ್ಕೂ ಜನರು ಮನಸೋತಿದ್ದಾರೆ. ಈ ವಿಡಿಯೋ ಸೂಕ್ತ ವ್ಯಕ್ತಿಗಳ ಗಮನಕ್ಕೆ ತಲುಪಿ, ಯಾದವ್ ಚಾಚಾ ಅವರಿಗೆ ಅವರ ಪ್ರತಿಭೆಗೆ ತಕ್ಕ ಗೌರವ ಮತ್ತು ಮನ್ನಣೆ ಸಿಗಲಿ ಎಂದು ಹಲವರು ಆಶಿಸಿದ್ದಾರೆ.

ಒಟ್ಟಿನಲ್ಲಿ, ದೊಡ್ಡ ಹುದ್ದೆ, ಶ್ರೀಮಂತಿಕೆ ಅಥವಾ ಉನ್ನತ ಶಿಕ್ಷಣಕ್ಕಿಂತ ಕಲಿಯುವ ಆಸಕ್ತಿ ಮತ್ತು ಆತ್ಮವಿಶ್ವಾಸ ಮುಖ್ಯ ಎಂಬುದನ್ನು ಈ ಆಟೋ ಚಾಲಕರು ತಮ್ಮ ಮಾತಿನ ಮೂಲಕ ತೋರಿಸಿಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಅಂಗಡಿಗೆ ಹೊತ್ತಿಕೊಂಡ ಬೆಂಕಿ, ಕಾಂಗ್ರೆಸ್ ಕೌನ್ಸಿಲರ್ ಹಾಗೂ ಪತಿ ಸಾವು
ವಿದೇಶದಲ್ಲಿ ಕೆಲಸ ಬಿಟ್ಟು ಊರು ಸೇರಿದರು; ಈಗ ಕೋಟಿ ಕೋಟಿ ಸಂಪಾದನೆ, ಆಪ್ತಮಿತ್ರರ ಬದುಕು ಬದಲಿಸಿತು 'ಬಿಸಾಡುವ ಬಾಳೆ ದಿಂಡು'