ಹಸ್ತಾಂತರಕ್ಕೆ ಬಾಂಗ್ಲಾದಿಂದ ಭಾರತಕ್ಕೆ ತೀವ್ರ ಒತ್ತಡ, ಲಂಡನ್ ವಕೀಲರ ಮೂಲಕ ಹೊಸ ಪಾಸ್‌ಪೋರ್ಟ್, ಗುರುತಿನ ಚೀಟಿಗೆ ಶೇಖ್ ಹಸೀನಾ ಅರ್ಜಿ!

Published : Nov 09, 2026, 12:53 PM IST
Sheikh Hasina

ಸಾರಾಂಶ

ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೊಸ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯ ವರದಿಗಳ ನಡುವೆ, ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಒತ್ತಾಯಿಸಿದೆ. ಈ ಬೆಳವಣಿಗೆ ಭಾರತ-ಬಾಂಗ್ಲಾದೇಶ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ತಮ್ಮ ದೇಶಕ್ಕೆ ಮರಳಲು ರಾಜತಾಂತ್ರಿಕ ಮಟ್ಟದಲ್ಲಿ ಕಾನೂನಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಹೊಸ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ (NID) ಒದಗಿಸುವಂತೆ ಕೋರಿ ನವದೆಹಲಿಯಲ್ಲಿರುವ ಬಾಂಗ್ಲಾದೇಶಿ ಹೈಕಮಿಷನ್‌ಗೆ ಹಸೀನಾ ತಮ್ಮ ವಕೀಲರ ಮೂಲಕ ಅಧಿಕೃತ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಯಾವುದೇ ಪ್ರಯಾಣ ದಾಖಲೆಗಳನ್ನು ನೀಡಬಾರದು, ಬದಲಿಗೆ ದ್ವಿಪಕ್ಷೀಯ ಒಪ್ಪಂದದಡಿ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಢಾಕಾದ ಮಧ್ಯಂತರ ಸರ್ಕಾರ ಭಾರತವನ್ನು ಬಲವಾಗಿ ಆಗ್ರಹಿಸಿದೆ.

ಲಂಡನ್ ವಕೀಲರಿಂದ ದೆಹಲಿ ರಾಯಭಾರ ಕಚೇರಿಗೆ ಪತ್ರ

ರಾಯಿಟರ್ಸ್ ವರದಿಯ ಮಾಡಿರುವ ಪ್ರಕಾರ, ಲಂಡನ್‌ನ ಮ್ಯಾಟ್ರಿಕ್ಸ್ ಚೇಂಬರ್ಸ್‌ನ ಹಸೀನಾ ಪರ ವಕೀಲರು ನವದೆಹಲಿಯಲ್ಲಿರುವ ಬಾಂಗ್ಲಾದೇಶಿ ಹಂಗಾಮಿ ಹೈಕಮಿಷನರ್ ಪ್ರೀತಿ ರೆಹಮಾನ್ ಅವರಿಗೆ ಪತ್ರ ಬರೆದಿದ್ದಾರೆ. ಮಧ್ಯಂತರ ಸರ್ಕಾರ ಹಾಗೂ ಇಲಾಖಾ ಅಧಿಕಾರಿಗಳು ನಮ್ಮ ಕಕ್ಷಿದಾರರಾಗಿದ್ದ ಶೇಖ್ ಹಸೀನಾ ಅವರ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು ರದ್ದುಗೊಳಿಸಿದ್ದಾರೆ. ಒಬ್ಬ ನಾಗರಿಕಳಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆ ಹಾಗೂ ಬಾಂಗ್ಲಾದೇಶದ ಪೌರತ್ವದ ಆಧಾರದ ಮೇಲೆ ಅವರಿಗೆ ತಕ್ಷಣ ಹೊಸ ಪಾಸ್‌ಪೋರ್ಟ್ ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ಡಿಸೆಂಬರ್ ವೇಳೆಗೆ ಬಾಂಗ್ಲಾಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗುವ ಉದ್ದೇಶವನ್ನು ಹಸೀನಾ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಪಾಸ್‌ಪೋರ್ಟ್ ಅಗತ್ಯವಿಲ್ಲ, ಬಾಂಗ್ಲಾ ಸರ್ಕಾರದ ಆಕ್ರೋಶ

ಹಸೀನಾ ಅವರ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯುನ್ ಕೋಬಿರ್, ಹಸೀನಾ ಅವರಿಗೆ ಪಾಸ್‌ಪೋರ್ಟ್ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

"ಶೇಖ್ ಹಸೀನಾ ಒಬ್ಬ ಪರಾರಿಯಾಗಿರುವ ಅಪರಾಧಿ ಹಾಗೂ ಭಯೋತ್ಪಾದಕಿ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸಕ್ರಿಯ ಹಸ್ತಾಂತರ ಒಪ್ಪಂದವಿದೆ. ಅಪರಾಧಿಗಳು ಹಾಗೂ ಉಗ್ರರನ್ನು ಬಂಧಿಸಿ ಕರೆತರಲು ಪಾಸ್‌ಪೋರ್ಟ್‌ನ ಅಗತ್ಯವಿಲ್ಲ, ಹಸ್ತಾಂತರ ಕಾಯ್ದೆಯೇ ಸಾಕಾಗುತ್ತದೆ. ಭಾರತ ಅವರನ್ನು ನಮಗೆ ಹಸ್ತಾಂತರಿಸಲೇಬೇಕು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಸೀನಾ ಮರಳುವಿಕೆಯ ಕಾನೂನು ಸವಾಲುಗಳು

ಆಗಸ್ಟ್ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ತೀವ್ರ ರಕ್ತಸಿಕ್ತ ದಂಗೆಯ ಬಳಿಕ 20 ವರ್ಷಗಳ ಆಡಳಿತ ಕೊನೆಗೊಂಡು ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.

ಪ್ರತಿಭಟನಾಕಾರರ ಮೇಲಿನ ಭೀಕರ ದಮನಕಾಂಡಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಕ್ಕಾಗಿ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಹಸೀನಾ ನೇತೃತ್ವದ ಅತಿದೊಡ್ಡ ರಾಜಕೀಯ ಪಕ್ಷ 'ಅವಾಮಿ ಲೀಗ್' ಅನ್ನು ಮಧ್ಯಂತರ ಸರ್ಕಾರ ನಿಷೇಧಿಸಿದ್ದು, ನೂರಾರು ನಾಯಕರು ಜೈಲುಪಾಲಾಗಿದ್ದಾರೆ. ಕೆಲವರು ತಲೆಮರೆಸಿಕೊಂಡಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಹಸೀನಾ, ದೇಶಕ್ಕೆ ಮರಳಿ ನ್ಯಾಯಾಲಯವನ್ನು ಎದುರಿಸುವುದಾಗಿ ಹೇಳಿಕೊಂಡಿದ್ದಾರೆ.

ಭಾರತ-ಬಾಂಗ್ಲಾದೇಶ ರಾಜತಾಂತ್ರಿಕ ಬಿಕ್ಕಟ್ಟು

ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿದ ಕ್ಷಣದಿಂದಲೇ ನವದೆಹಲಿ ಮತ್ತು ಢಾಕಾ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ತೀವ್ರ ಬಿರುಕು ಮೂಡಿದೆ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ನಿರಂತರವಾಗಿ ಭಾರತದ ಮೇಲೆ ಒತ್ತಡ ಹೇರುತ್ತಿದ್ದರೆ, ನವದೆಹಲಿ ಈ ವಿನಂತಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

ಸದ್ಯ ಹಸೀನಾ ಅವರ ಈ ಹೊಸ ಪಾಸ್‌ಪೋರ್ಟ್ ಅರ್ಜಿ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಭಾರತ ಸರ್ಕಾರ ಈ ವಿಚಾರದಲ್ಲಿ ಯಾವ ನಿರ್ಧಾರ ತಳೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಹಸ್ತಾಂತರ ವಿನಂತಿಯು ಕಾನೂನು ಪ್ರಕ್ರಿಯೆಯ ಮೂಲಕ ಪರಿಶೀಲನೆಯಲ್ಲಿರುವುದರಿಂದ ಅವರಿಗೆ ಬಾಂಗ್ಲಾಕ್ಕೆ ಮರಳಿ ಎಂದು ಭಾರತ ಯಾವುದೇ ಗಡುವು ನಿಗದಿ ಮಾಡಲ್ಲ’ ಎಂದು ಬಾಂಗ್ಲಾದೇಶದಲ್ಲಿನ ಭಾರತೀಯ ರಾಯಭಾರಿ ದಿನೇಶ್ ತ್ರಿವೇದಿ ಹೇಳಿದ್ದರು.ಹಸೀನಾ ಗಡೀಪಾರಿಗೆ ಯಾರೂ ನಿಮಗೆ ಸಮಯ ಮಿತಿಯನ್ನು ನೀಡಲು ಸಾಧ್ಯವಿಲ್ಲ. ಹಸೀನಾ ಅವರನ್ನು ಭಾರತೀಯ ವಾಯುಪಡೆ ಅಥವಾ ಸೇನೆ ಭಾರತಕ್ಕೆ ಕರೆ ತಂದಿಲ್ಲ. ಆ ಸಮಯದಲ್ಲಿ, ಅವರು ಇನ್ನೂ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಆಗ ವಾಸ್ತವ ಒಪ್ಪಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು’ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಮಹಿಳೆಯರು ಈ ಅಂಗಡಿಗೆ ಬರಬೇಡಿ, ದೇವರೇ ಗ್ರಾಹಕರನ್ನೂ ಕಳುಹಿಸಬೇಡ!' ಅಂಗಡಿ ಮಾಲೀಕನ ಈ ಮನವಿಗೆ ಕಾರಣವೇನು?
ಗರ್ಲ್‌ಫ್ರೆಂಡ್ ಜೊತೆ ಸಮೋಸಾ, ಟೀ ಸವಿಯುತ್ತಿದ್ದ ಪತಿ; ದಿಢೀರ್ ಬಂದ ಪತ್ನಿ ಇಬ್ಬರಿಗೂ ಕೊಟ್ಟ ಶಾಕ್, ಮುಂದೇನಾಯ್ತು?