
ಮದುರೈ (ಜೂ.9): ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. 2026ರಲ್ಲಿ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಪತನಗೊಂಡು ಬಿಜೆಪಿ- ಎಐಎಡಿಎಂಕೆ ಸರ್ಕಾರ ರಚನೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಸಿದ್ಧತೆಯ ಭಾಗವಾಗಿ ಭಾನುವಾರ ಮದುರೈಗೆ ಭೇಟಿ ನೀಡಿದ್ದ ಅಮಿತ್ ಶಾ, ಚುಣಾವಣೆ ಸಂಬಂಧ ಪಕ್ಷದ ನಾಯಕರು ಕಾರ್ಯಕರ್ತರಿಗೆ ಸಲಹೆ ಸೂಚನೆ ನೀಡಿದ್ದಾರೆ. ಪಕ್ಷದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಅವರು, ‘ಮದುರೈ ಪರಿವರ್ತನೆಯ ನಗರ. ನಮ್ಮ ಪಕ್ಷದ ಕಾರ್ಯಕರ್ತರ ಸಭೆಯು ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಿ, ರಾಜ್ಯದಲ್ಲಿ ಬದಲಾವಣೆ ತರಲಿದೆ. ಡಿಎಂಕೆಯ ಭ್ರಷ್ಟ ಆಡಳಿತ ತಮಿಳುನಾಡಿನ ಬಡವರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಪಕ್ಷದ ಕಾರ್ಯಕರ್ತರು ಸ್ಟಾಲಿನ್ ನೇತೃತ್ವದ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಕರೆ ನೀಡಿದರು.
‘2026ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ-ಎಐಎಡಿಎಂಕೆ ತಮಿಳುನಾಡಿನಲ್ಲಿ ಎನ್‌ಡಿಎ ಸರ್ಕಾರವನ್ನು ರಚಿಸಲಿವೆ. ಜನ ಡಿಎಂಕೆಯನ್ನು ಸೋಲಿಸಲಿದ್ದಾರೆ. ಡಿಎಂಕೆ ಸಂಪೂರ್ಣ ವಿಫಲ ಸರ್ಕಾರ’ ಎಂದು ಟೀಕಿಸಿದರು.
ಶ್ರೇಷ್ಠ ಭಾಷೆ ತಮಿಳಲ್ಲಿ ಮಾತನಾಡಲು ಆಗದ್ದಕ್ಕೆ ಕ್ಷಮೆ ಇರಲಿ: ಅಮಿತ್ ಶಾ
ಮದುರೈನಲ್ಲಿ ಸಾರ್ವಜನಿಕ ಮೆರವಣಿಗೆಯಲ್ಲಿ ಪಾಲ್ಗೊಂಡ ಅಮಿತ್ ಶಾ, ‘ಭಾರತದ ಶ್ರೇಷ್ಠ ಭಾಷೆಗಳಲ್ಲಿ ಒಂದಾದ ತಮಿಳಿನಲ್ಲಿ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ನಾನು ತಮಿಳುನಾಡಿನ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದರು. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಡಿಎಂಕೆ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. ಅದರ ಬೆನ್ನಲ್ಲೆ ಅಮಿತ್ ಶಾ ಈ ರೀತಿ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ