ಉಗ್ರರ ಬೇಟೆ ನಿಲ್ಲಲ್ಲ, ಪಾಕ್‌ ಜೊತೆ ಮಾತಿಲ್ಲ: ಅಮಿತ್‌ ಶಾ

By Govindaraj SFirst Published Oct 6, 2022, 7:38 AM IST
Highlights

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿನ ಮಾತುಕತೆ ಸಾಧ್ಯತೆಯನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಮ್ಮ ಸರ್ಕಾರ ಪಾಕಿಸ್ತಾನದ ಬದಲು, ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಮಾತುಕತೆ ನಡೆಸಲು ಹೆಚ್ಚು ಉತ್ಸುಕವಾಗಿದೆ ಎಂದು ಹೇಳಿದ್ದಾರೆ. 

ಬಾರಾಮುಲ್ಲಾ (ಅ.06): ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿನ ಮಾತುಕತೆ ಸಾಧ್ಯತೆಯನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಮ್ಮ ಸರ್ಕಾರ ಪಾಕಿಸ್ತಾನದ ಬದಲು, ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಮಾತುಕತೆ ನಡೆಸಲು ಹೆಚ್ಚು ಉತ್ಸುಕವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಸಹಿಸುವುದಿಲ್ಲ. ಜಮ್ಮು-ಕಾಶ್ಮೀರ ವಿಧಾನಸಭೆಗೆ ಸಂಪೂರ್ಣ ಪಾರದರ್ಶಕವಾಗಿ ಶೀಘ್ರವೇ ಚುನಾವಣೆ ನಡೆಸುವ ಮೂಲಕ ರಾಜ್ಯದಲ್ಲಿ ಪೂರ್ಣ ಶಾಂತಿ ಮರುಸ್ಥಾಪನೆಗೆ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಸುಮಾರು 3 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಶ್ಮೀರದ ಬಾರಾಮುಲ್ಲಾದಲ್ಲಿ ಬುಧವಾರ ಬೃಹತ್‌ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ ರಾಜ್ಯದ ಪ್ರಮುಖ ವಿಪಕ್ಷಗಳಾದ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು. ‘ಅಬ್ದುಲ್ಲಾಗಳು, ಮುಫ್ತಿಗಳು ಮತ್ತು ನೆಹರೂ-ಗಾಂಧಿ ಕುಟುಂಬಗಳು ಸ್ವಾತಂತ್ರ್ಯಾನಂತರದ ಬಹುಪಾಲು ಸಮಯ ಕಣಿವೆ ರಾಜ್ಯದಲ್ಲಿ ಆಡಳಿತ ನಡೆಸಿವೆ. ಕಳೆದ 70 ವರ್ಷಗಳಿಂದ ರಾಜ್ಯವನ್ನು ಆಳಿದವರು ನಮಗೆ ಪಾಕಿಸ್ತಾನದ ಜೊತೆ ಮಾತನಾಡಿ ಎಂದು ಸಲಹೆ ನೀಡುತ್ತಾರೆ. ಆದರೆ ಈ ವಿಷಯದಲ್ಲಿ ನನಗೆ ಸ್ಪಷ್ಟತೆ ಇದೆ. ನಾನು ಯಾವುದೇ ಕಾರಣಕ್ಕೂ ಪಾಕ್‌ ಜೊತೆ ಮಾತುಕತೆ ನಡೆಸುವುದಿಲ್ಲ’ ಎಂದು ಅಮಿತ್‌ ಶಾ ಹೇಳಿದರು.

ಹುತಾತ್ಮರಾದ ನಾಲ್ವರು ಜಮ್ಮು ಪೊಲೀಸ್ ಕುಟುಂಬಕ್ಕೆ ಉದ್ಯೋಗ: ನೇಮಕಾತಿ ಪತ್ರ ನೀಡಿದ ಅಮಿತ್ ಷಾ

‘ಕಣಿವೆ ರಾಜ್ಯದಲ್ಲಿ 1990ರಿಂದ ಇಲ್ಲಿಯವರೆಗೆ ನಡೆದ ಭಯೋತ್ಪಾದನಾ ಕೃತ್ಯಗಳು 42 ಸಾವಿರ ಜನರನ್ನು ಬಲಿ ತೆಗೆದುಕೊಂಡಿವೆ. ಇದಕ್ಕೆಲ್ಲಾ ಯಾರು ಕಾರಣ ಹೇಳಿ? ರಾಜ್ಯವನ್ನು ಆಳಿದ ಮೂರು ಕುಟುಂಬಗಳೇ ಇದಕ್ಕೆ ಕಾರಣ. ಹೀಗಿರುವಾಗ ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರೊಂದಿಗೆ ಮಾತನಾಡುತ್ತೇವೆ. ಕಾಶ್ಮೀರದ ಜನರೊಂದಿಗೆ ಮಾತನಾಡುತ್ತೇವೆ. ಮೋದಿ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಲಗಿಸಿ, ಶಾಂತಿಯುತ ರಾಜ್ಯ ಸ್ಥಾಪನೆ ಮಾಡಲಿದೆ ಎಂದು ಹೇಳಿದರು.

ಜಮ್ಮು ಕಾಶ್ಮೀರದ ಭಾಷಾವಾರು ಗುಂಪು Pahari ಸಮುದಾಯಕ್ಕೆ ಮೀಸಲಾತಿ ಘೋಷಿಸಿದ Amit Shah

ಇದೇ ವೇಳೆ ರಾಜ್ಯದಲ್ಲಿ ಭಯೋತ್ಪಾದನೆ ನಿಧಾನವಾಗಿ ಮತ್ತು ಹಂತಹಂತವಾಗಿ ಅಂತ್ಯದತ್ತ ಸಾಗುತ್ತಿದೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಕಾರಣ. ಮುಫ್ತಿ ಆ್ಯಂಡ್‌ ಕಂಪನಿ ಮತ್ತು ಅಬ್ದುಲ್ಲಾ ಆ್ಯಂಡ್‌ ಸನ್ಸ್‌ 70 ವರ್ಷದ ರಾಜ್ಯ ಆಳಿದ ಅವಧಿಯಲ್ಲಿ 1 ಲಕ್ಷ ಜನರು ವಸತಿ ಇಲ್ಲದೆ ಚಳಿಯಲ್ಲಿ ಕಂಗೆಡುತ್ತಿದ್ದರು. ಆದರೆ 2014-2022 ಅವಧಿಯಲ್ಲಿ ಮೋದಿ ಸರ್ಕಾರ ರಾಜ್ಯದ ಜನರಿಗೆ 1 ಲಕ್ಷ ಮನೆಗಳನ್ನು ಒದಗಿಸಿದೆ, 12 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್‌ ನೀಡಲಾಗಿದೆ. ರಾಜ್ಯಕ್ಕೆ ಮೋದಿ 56000 ಕೋಟಿ ರು. ಬಂಡವಾಳ ಹೂಡಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದರಿಂದ 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

click me!