
ನವದೆಹಲಿ (ಅ.06): ಚುನಾವಣೆ ವೇಳೆ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳ ಭರವಸೆ ಬಗ್ಗೆ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಚುನಾವಣಾ ಆಯೋಗ, ಇದೀಗ ಇಂಥ ಭರವಸೆ ನೀಡುವ ರಾಜಕೀಯ ಪಕ್ಷಗಳು ಅವುಗಳ ಕಾರ್ಯಸಾಧ್ಯತೆ ಬಗ್ಗೆ ವರದಿಯನ್ನೂ ನೀಡಬೇಕು ಎಂದು ತನ್ನ ಮಾದರಿ ನೀತಿ ಸಂಹಿತೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಈ ಕುರಿತು ಅದು ಎಲ್ಲಾ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿದ್ದು, ಅ.19ರೊಳಗೆ ಅಭಿಪ್ರಾಯ ಸಲ್ಲಿಸುವಂತೆ ಕೋರಿದೆ. ಉಚಿತ ಕೊಡುಗೆಗಳ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಗಂಭೀರ ಕಳವಳ ವ್ಯಕ್ತಪಡಿಸಿ ಈ ಕುರಿತು ವರದಿ ನೀಡಲು ಸಮಿತಿ ರಚಿಸಿದ ಬೆನ್ನಲ್ಲೇ, ಚುನಾವಣಾ ಆಯೋಗ ಇಂಥ ಪ್ರಸ್ತಾಪ ಮುಂದಿಟ್ಟಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ವರದಿ ಅಗತ್ಯ: ಉಚಿತ ಕೊಡುಗೆಗಳನ್ನು ಘೋಷಿಸುವುದು ಚುನಾವಣೆಯ ವೇಳೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವುಗಳ ಹಣಕಾಸಿನ ಕಾರ್ಯಸಾಧ್ಯತೆ ಬಗ್ಗೆಯೂ ವರದಿ ನೀಡುವುದು ಅಗತ್ಯವಾಗಿದೆ. ಇದು ರಾಜಕೀಯ ಪಕ್ಷಗಳಿಗೆ ಸ್ಪರ್ಧಾತ್ಮಕವಾಗಿ ಚುನಾವಣಾ ಭರವಸೆ ಘೋಷಿಸಲು ಅವಕಾಶ ನೀಡುವುದು ಮಾತ್ರವಲ್ಲದೇ ಘೋಷಿಸಿದ ವೆಚ್ಚದಲ್ಲೇ ಭರವಸೆಗಳ ಈಡೇರಿಕೆಯನ್ನು ಕಾರ‍್ಯಗತ ಮಾಡಲು ನೆರವಾಗುತ್ತದೆ ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ.
ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್
ಯೋಜನೆ ಜಾರಿಗೆ ಅಗತ್ಯವಾಗುವ ಆದಾಯವನ್ನು ಹೇಗೆ ಸಂಗ್ರಹಿಸಲಾಗುವುದು(ತೆರಿಗೆ ಏರಿಕೆ ಅಥವಾ ಇತರೆ ಮೂಲ)? ವೆಚ್ಚದ ನಿರ್ವಹಣೆ (ಕೆಲ ಯೋಜನೆ ಕಡಿತ), ಯೋಜನೆ ಜಾರಿಯಾದರೆ ಆಗುವ ಬೀಳುವ ಒಟ್ಟು ಹೊರೆ, ಯೋಜನೆ ಜಾರಿಗೆ ಮಾಡಬೇಕಾಗಿ ಬರುವ ಸಾಲ, ಸಾಲ ಮಾಡಿದರೆ ಅದರಿಂದಾಗುವ ಪರಿಣಾಮ ಮತ್ತು ಈ ಸಾಲವು ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ಕಾಯ್ದೆ ಮಿತಿಯೊಳಗೆ ಇರಲಿದೆಯೇ ಎಂಬ ಅಂಶಗಳನ್ನು ಚುನಾವಣಾ ಪ್ರಣಾಳಿಕೆ ಮಾರ್ಗಸೂಚಿಯಲ್ಲಿ ಸೇರಿಸಲು ಚುನಾವಣಾ ಆಯೋಗ ಪ್ರಸ್ತಾಪ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಉಚಿತ ಕೊಡುಗೆಗಳನ್ನು ಘೋಷಿಸುವ ಸಂಪ್ರದಾಯದ ಬಗ್ಗೆ ಟೀಕಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ ನಡುವೆ ಭಾರೀ ವಾಕ್ಸಮರ ನಡೆದಿತ್ತು. ಸುಪ್ರೀಂಕೋರ್ಟ್ ಕೂಡ ಈ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿತ್ತು. ಇದರ ಬೆನ್ನಲ್ಲೇ ಚುನಾವಣಾ ಆಯೋಗ ತಿದ್ದುಪಡಿ ಪ್ರಸ್ತಾಪ ಸಲ್ಲಿಸಿದೆ.
ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ, 7 ಭಕ್ತರ ಸಾವು ಹಲವರು ನಾಪತ್ತೆ!
ಈ ಬಗ್ಗೆ ಆಪ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ಕಾರ ತೆರಿಗೆ ಪಾವತಿದಾರರ ಹಣವನ್ನು ಮೂಲಭೂತ ಸೌಕರ್ಯ ಒದಗಿಸಲು ಬಳಸಿಕೊಳ್ಳಬೇಕೇ ಹೊರತು ರಾಜಕೀಯ ನಾಯಕರು ಅವರ ಕುಟುಂಬದ ಹಿತಾಸಕ್ತಿಗಳಿಗೆ ಬಳಸಿಕೊಳ್ಳಬಾರದು. ವಿದ್ಯುತ್, ನೀರು, ಶಾಲೆ ಹಾಗೂ ಇತರೆ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ