
- ಡೆಲ್ಲಿ ಮಂಜು
ನವದೆಹಲಿ(ಆ.20): ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿದ್ದುಕೊಂಡು, ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ತಾಂತ್ರಿಕ ನೆರವು ನೀಡುತ್ತಿದ್ದ ಆರೋಪದಲ್ಲಿ ಬಂಧಿತನಾದ ಶಂಕಿತ ಉಗ್ರ ಡಾ. ಅಬ್ದುರ್ ರೆಹಮಾನ್ ಸೆರೆ ಸಿಕ್ಕಿದ್ದು ಹೇಗೆಂಬ ಬಗ್ಗೆ ರೋಚಕ ಮಾಹಿತಿ ಲಭ್ಯವಾಗಿದೆ. ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಡಾ ಅಬ್ದುರ್ ರೆಹಮಾನ್ ಬಗ್ಗೆ ಸುಳಿವು ನೀಡಿದ್ದು ಅಮೆರಿಕದಿಂದ ಬಂದ ಎಚ್ಚರಿಕೆ ಸಂದೇಶ ಎಂದು ಇದೀಗ ತಿಳಿದು ಬಂದಿದೆ.
"
2018ರಲ್ಲಿ ಬಂದ ಸುಳಿವನ್ನು ಆಧರಿಸಿ ಸುಮಾರು 2 ವರ್ಷಗಳ ಕಾಲ ಬೇಟೆಯಾಡುತ್ತಾ ಹೋದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಗೆ ಭಯೋತ್ಪಾದನೆ ಜಾಲದ ಆಳ ಅನಾವರಣಗೊಳ್ಳುತ್ತಾ ಹೋಗಿ ಡಾ ಅಬ್ದುರ್ ರೆಹಮಾನ್ ಬಂಧನಕ್ಕೆ ಕಾರಣವಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.
ಅಮೆರಿಕ ಎಚ್ಚರಿಕೆ:
2018ರಲ್ಲಿ ಐಸಿಸ್ ಉಗ್ರರ ಚಟುವಟಿಕೆಗಳ ಬಗ್ಗೆ ಎಚ್ಚರಿಸಿದ್ದ ಅಮೆರಿಕವು ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತನಾಡುವ ಭಾರತ, ಮೊದಲು ತನ್ನ ದೇಶದವರ ಮೇಲೆ ನಿಗಾ ಇಡಬೇಕು ಎಂದು ಉಲ್ಲೇಖಿಸಿದ್ದ ವರದಿಯೊಂದನ್ನು ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಅಲ್ಲದೆ, ಸಿರಿಯಾದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕುವಾಗ ಸಿಕ್ಕಿದ ಭಾರತದ ಔಷಧಗಳ ಲೇಬಲ್‌ಗಳನ್ನು ಸಂಗ್ರಹಿಸಿ ಸಾಕ್ಷ್ಯವಾಗಿ ನೀಡಿತ್ತು.
ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ
ಅದರಂತೆ ತಕ್ಷಣ ಶಂಕಿತರ ಜಾಡು ಹಿಡಿದು ಹೊರಟ ಭಾರತದ ತನಿಖಾ ಸಂಸ್ಥೆಗಳು, ಪ್ರತಿಯೊಬ್ಬ ಶಂಕಿತರ ಚಟುವಟಿಕೆ ಮೇಲೂ ನಿಗಾ ವಹಿಸುತ್ತಾ ಹೋದವು. ಇದೇ ವೇಳೆ, ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಎಂಬ ಐಸಿಸ್ ಸೋದರ ಸಂಘಟನೆ ಕಾಶ್ಮೀರ ಸೇರಿ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿತ್ತು. ಈ ಕುರಿತ ಮಾಹಿತಿ ಪಡೆದು ಗುಪ್ತಚರ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆ ವೇಳೆ ಕಾಶ್ಮೀರ ಮೂಲದ ಜಹಾನೆಬ್ ದಂಪತಿ ಬಂಧನವಾಗಿತ್ತು. ಅವರ ವಿಚಾರಣೆಯಿಂದ ಹೊರಬಿದ್ದ ಮಾಹಿತಿಯಂತೆ ಬಳಿಕ ಡಾ.ಅಬ್ದುರ್ ರೆಹಮಾನ್ ಜಾಡು ಸಿಕ್ಕಿತು. ಈವರೆಗೆ ನಡೆದಿರುವ ತನಿಖೆ ಪ್ರಕಾರ ಹಣಕಾಸು, ವೈದ್ಯಕೀಯ ಸೇವೆ ಸೇರಿ ಉಗ್ರರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಚಟುವಟಿಕೆಗಳಲ್ಲಿ ಡಾ.ಅಬ್ದುಲ್ ರೆಹಮಾನ್ ಭಾಗಿಯಾಗಿದ್ದ ಎನ್ನುತ್ತವೆ ಎನ್‌ಐಎ ಉನ್ನತ ಮೂಲಗಳು.
ಸೋಷಿಯಲ್ ಮೀಡಿಯಾಕ್ಕಾಗಿ ‘ಡಾಕ್ಟರ್ ಬ್ರೇವ್’ ಗುಪ್ತ ಹೆಸರು
ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಬಲೆಗೆ ಬಿದ್ದ ಶಂಕಿತ ಉಗ್ರ ಡಾ.ಅಬ್ದುರ್ ರೆಹಮಾನ್ ಊರಿಗೆಲ್ಲಾ ಗೊತ್ತಿರುವಂತೆ ಎಂ.ಎಸ್.ರಾಮಯ್ಯ ವೈದ್ಯಕೀಯ ವಿದ್ಯಾಲಯದ ನೇತ್ರ ತಜ್ಞ. ಆದರೆ ಉಗ್ರರ ಪಾಲಿಗೆ ಮಾತ್ರ ಈತ ಮಿಸ್ಟರ್ ಧೈರ್ಯವಂತನಂತೆ. ಉಗ್ರರ ಗುಂಪಿನಲ್ಲಿ ತನಗೆ ‘ಡಾ ಬ್ರೇವ್’ ಎಂಬ ಅಡ್ಡ ಹೆಸರಿತ್ತು ಎಂಬ ವಿಚಾರವನ್ನು ಎನ್‌ಐಎ ಅಧಿಕಾರಿಗಳ ಮುಂದೆ ಡಾ.ರೆಹಮಾನ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಈತನ ಪ್ರಕಾರ ಡಾ. ಬ್ರೇವ್ ಅಂದರೆ ‘ದಿಲ್ ಇರೋನು’ ಅಂಥ ಅರ್ಥವಂತೆ. ಹೀಗಾಗಿ ‘ಅಬ್ದುರ್ ಡಾ.ಬ್ರೇವ್ ಬಸವನಗುಡಿ’ ಅಂತ ಟೆರರ್ ಕೋಡ್ ನೇಮ್ ಇಟ್ಟುಕೊಂಡಿದ್ದನಂತೆ. ವೈದ್ಯನಾಗಿದ್ದುಕೊಂಡೇ ಉಗ್ರರ ಪಾಲಿಗೆ ಸ್ಲೀಪರ್ ಸೆಲ್ನಂತೆ ಕೆಲಸ ಮಾಡುತ್ತಿದ್ದ ಈತನಿಗೆ ತಾನು ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವಾಗಲೆಂದು ಅಭಿವೃದ್ಧಿಪಡಿಸುತ್ತಿದ್ದ ಆ್ಯಪ್‌ಗಳೇ ಕೊನೆಗೆ ಮುಳುವಾದವು, ಬಂಧನಕ್ಕೆ ದಾರಿ ಮಾಡಿಕೊಟ್ಟವು ಎನ್ನುತ್ತವೆ ಮೂಲಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ