Uttar Pradesh Elections: ಅಖಿಲೇಶ್‌ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

By Suvarna News  |  First Published Dec 11, 2021, 4:02 PM IST

ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ (BS Yediyurappa) ಬೇಸರಗೊಂಡಿರಬಹುದು. ಈಗ ಅವರನ್ನು ಭೇಟಿ ಆದರೆ ಸಂಚಲನ ಸೃಷ್ಟಿಸಬಹುದು ಎಂದು ಮಮತಾ ಬ್ಯಾನರ್ಜಿ (Mamatha Banergee)  ರಣನೀತಿಗಾರ ಪ್ರಶಾಂತ್‌ ಕಿಶೋರ್‌ರನ್ನು ಕಳುಹಿಸಿದ್ದಾರೆ. 


ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆದ್ದ ನಂತರ ವಿಶ್ವಾಸದಲ್ಲಿ ಬೀಗುತ್ತಿರುವ ಮಮತಾ ಬ್ಯಾನರ್ಜಿ ಈಗ ಗುಜರಾತ್‌, ಗೋವಾ, ಈಶಾನ್ಯ ರಾಜ್ಯಗಳ ನಂತರ ಕರ್ನಾಟಕದತ್ತ ಕೂಡ ಕಣ್ಣು ಹರಿಸಿದ್ದು, ತೃಣಮೂಲ ಗಾಳಕ್ಕೆ ಯಾವುದಾದರೂ ದೊಡ್ಡ ಮೀನು ಸಿಗಬಹುದೇ ಎಂಬ ಹುಡುಕಾಟದಲ್ಲಿದ್ದಾರೆ. ಹೀಗಾಗಿಯೇ ಮಮತಾ ಬೆಂಗಳೂರಿಗೆ ತಮ್ಮ ರಣನೀತಿಕಾರ ಪ್ರಶಾಂತ್‌ ಕಿಶೋರ್‌ ಅವರನ್ನು ಕಳುಹಿಸಿದ್ದರು.

2023ರ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ರಾಜಕೀಯ ಹವಾಮಾನ ಅರಿಯಲು ಬಂದಿದ್ದ ಪ್ರಶಾಂತ್‌ ಕಿಶೋರ್‌, ಯಡಿಯೂರಪ್ಪನವರ ಭೇಟಿಗೆ ಸಮಯ ಕೇಳಿದ್ದಾರೆ. ಆದರೆ ನಾನು ಯಾರನ್ನೂ ಭೇಟಿ ಆಗೋಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕೊನೆಗೆ ವಿಜಯೇಂದ್ರರನ್ನು ಭೇಟಿ ಆಗಲು ಪಿಕೆ ಪ್ರಯತ್ನಪಟ್ಟರು. ಆದರೆ ವಿಜಯೇಂದ್ರ ಕೂಡ ವಿಧಾನ ಪರಿಷತ್‌ ಚುನಾವಣೆಯಲ್ಲಿ ವ್ಯಸ್ತನಿದ್ದೇನೆ ಎಂದು ಹೇಳಿ ಸಾಗಹಾಕಿದ್ದಾರೆ.

Latest Videos

undefined

ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಬೇಸರಗೊಂಡಿರಬಹುದು, ಈಗ ಅವರನ್ನು ಭೇಟಿ ಆದರೆ ಸಂಚಲನ ಸೃಷ್ಟಿಸಬಹುದು ಎಂದು ಮಮತಾ ಪ್ರಶಾಂತ್‌ ಕಿಶೋರ್‌ರನ್ನು ಕಳುಹಿಸಿದ್ದಾರೆ. ಆದರೆ ಪಿಕೆಯನ್ನು ತಾವು ಭೇಟಿ ಆದರೆ ಏನು ಆಗಬಹುದು ಎಂದು ಗೊತ್ತಿರುವ ಯಡಿಯೂರಪ್ಪನವರು ಹತ್ತಿರವೂ ಬಿಟ್ಟುಕೊಂಡಿಲ್ಲ.

India Gate: ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಮೋದಿ, ಶಾ ಜೊತೆ ಸೇರಿ ರಣತಂತ್ರ ರೂಪಿಸಿದರಾ ದೇವೇಗೌಡ?

ಮಮತಾಗೆ ಪಿಎಂ ಹುದ್ದೆ ಕನಸು

ನರೇಂದ್ರ ಮೋದಿ ಜೊತೆ ಚುನಾವಣಾ ಕೆಲಸ ಮಾಡುತ್ತಿದ್ದ ಪ್ರಶಾಂತ್‌ ಕಿಶೋರ್‌ ನಂತರ ಸೇರಿಕೊಂಡಿದ್ದು ನಿತೀಶ್‌ ಕುಮಾರ್‌ ಬಳಿ. ಅಲ್ಲಿ ಜಗಳವಾಡಿ ಹೊರಗೆ ಬಿದ್ದ ನಂತರ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, ಸ್ಟಾಲಿನ್‌ ಜೊತೆ ಕೆಲಸ ಮಾಡಿದ ಪಿಕೆ ಈಗ ಮಮತಾ ಬ್ಯಾನರ್ಜಿಯನ್ನು ದೇಶದ ನಾಯಕಿಯನ್ನಾಗಿ ಮಾಡಲು ಹೆಣಗಾಡುತ್ತಿದ್ದಾರೆ. ಈಶಾನ್ಯದಲ್ಲಿ ಕಾಂಗ್ರೆಸ್ಸನ್ನು ಮುಗಿಸಿ ಆ ಜಾಗೆಯನ್ನು ತುಂಬಲು ಮೊದಲಿಗೆ ಸುಶ್ಮಿತಾ ದೇವ್‌ರನ್ನು ಕರೆದುಕೊಂಡು ಬಂದ ಪಿಕೆ, ಈಗ ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ಸೆಳೆಯುತ್ತಿದ್ದಾರೆ.

ಯುಪಿಯಲ್ಲಿ ಬ್ರಾಹ್ಮಣರನ್ನು ತಲುಪಲು ಕಮಲಾಪತಿ ತ್ರಿಪಾಠಿಯ ಮೊಮ್ಮಗನನ್ನು ಸೆಳೆದಿರುವ ಪ್ರಶಾಂತ್‌ ಕಿಶೋರ್‌, ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಲೂಸಿನೋ ಫೆಲೆರೋ ಜೊತೆಗೆ 9 ಮಾಜಿ ಶಾಸಕರನ್ನು ಸೆಳೆದಿದ್ದಾರೆ. ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿದ್ದು ಬೇಸರಗೊಂಡಿರುವ ನಾಯಕರಿಗೆ ಗಾಳ ಹಾಕುತ್ತಿರುವ ಪ್ರಶಾಂತ್‌, ಅದೇ ಪ್ರಯತ್ನದ ಭಾಗವಾಗಿ ಬೆಂಗಳೂರಿಗೂ ಬಂದಿದ್ದರು. ಆದರೆ ಸದ್ಯಕ್ಕೆ ರಾಜ್ಯದ ಯಾವುದೇ ದೊಡ್ಡ ಮೀನು ಮಮತಾ ಮತ್ತು ಪಿಕೆಯ ಗಾಳಕ್ಕೆ ಬೀಳುವ ಲಕ್ಷಣ ಕಾಣುತ್ತಿಲ್ಲ.

ಯಡಿಯೂರಪ್ಪನವರೇ ಏಕೆ?

ಇವತ್ತಿನ ಕರ್ನಾಟಕದ ರಾಜಕಾರಣದಲ್ಲಿ ಯಾವುದೇ ಸ್ಥಿತಿಯಲ್ಲೂ 6ರಿಂದ 10 ಪ್ರತಿಶತ ಮತ ತಾವು ಹೇಳಿದವರಿಗೆ ತಿರುಗಿಸುವ ಸಾಮರ್ಥ್ಯ ಇರುವುದು ಮೂರು ಜನರಿಗೆ. ಒಂದು ನಿಸ್ಸಂದೇಹವಾಗಿ ಯಡಿಯೂರಪ್ಪ. ಎರಡು-ದೇವೇಗೌಡರ ಕುಟುಂಬ ಮತ್ತು ಮೂರು- ಕುರುಬರ ಮತ ಪಡೆಯುವ ಸಿದ್ದರಾಮಯ್ಯ. ಅದರಲ್ಲಿ ದೇವೇಗೌಡರ ಕೈಯಲ್ಲಿ ಅವರದೇ ಕುಟುಂಬದವರು ತುಂಬಿಕೊಂಡಿರುವ ಪ್ರಾದೇಶಿಕ ಪಾರ್ಟಿ ಇದ್ದರೆ, ಸಿದ್ದರಾಮಯ್ಯರ ನೇತೃತ್ವವೇ ಸ್ಥಳೀಯ ಕಾಂಗ್ರೆಸ್‌ಗೆ ಆಮ್ಲಜನಕ.

New Population Policy: ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳ ಲೋಕಸಭೆಗೆ ಸೀಟಿಗೆ ಕತ್ತರಿ?

ಆದರೆ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಏಕಮಾತ್ರ ಮಾಸ್‌ ಲೀಡರ್‌ ಆದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ಸ್ವಲ್ಪಮಟ್ಟಿಗೆ ಬೇಸರದಲ್ಲಿರಬಹುದು ಎಂಬ ಗುಸುಗುಸು ಇದೆ. ಆದರೆ 2013ರಲ್ಲಿ ಇದ್ದಂತೆ ಬಿಎಸ್‌ವೈ ಈಗ ತರಾತುರಿಯಲ್ಲಿ ಇಲ್ಲ. ಜೊತೆಗೆ ಬಂಡಾಯದ ಮನಸ್ಥಿತಿಯಲ್ಲೂ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಸ್ವತಃ ಪ್ರಶಾಂತ ಕಿಶೋರ್‌ ಅವರನ್ನು ಕಳುಹಿಸಿದರೂ ಯಡಿಯೂರಪ್ಪ ನಯವಾಗಿ ಟೈಮ… ಇಲ್ಲ ಎಂದು ಹೇಳಿ ಕಳುಹಿಸಿದ್ದಾರಂತೆ.

ಮಮತಾ ಕನಸು ಸಾಧ್ಯವೇ?

ಒಂದು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆದ ಮೇಲೆ ಪ್ರಧಾನಮಂತ್ರಿ ಕನಸು ಕಾಣುವುದು ಸಹಜ. ಲಾಲು, ನಿತೀಶ್‌, ಮುಲಾಯಂ, ಚಂದ್ರಬಾಬು, ಜಯಲಲಿತಾ, ಶರದ್‌ ಪವಾರ್‌ ಹೀಗೆ ಎಲ್ಲರೂ ಆಯಾ ರಾಜ್ಯಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಮುಖ್ಯಮಂತ್ರಿಗಳು ದಿಲ್ಲಿ ಕನಸು ಹೊತ್ತುಕೊಂಡೇ ಓಡಾಡಿದವರು. ಆದರೆ ಒಬ್ಬರ ಕನಸೂ ನನಸಾಗಲಿಲ್ಲ. ದೇವೇಗೌಡರು ಆಕಸ್ಮಿಕವಾಗಿ ಸಮ್ಮಿಶ್ರ ಯುಗದ ಆರಂಭದಲ್ಲಿ ಪ್ರಧಾನಿಯಾದರೆ, ನರೇಂದ್ರ ಮೋದಿ ಒಂದು ರಾಷ್ಟ್ರೀಯ ಪಕ್ಷದಲ್ಲಿ ಇದ್ದು ಆರ್‌ಎಸ್‌ಎಸ್‌ ಹಿನ್ನೆಲೆ ಇದ್ದಿದ್ದರಿಂದ ಪ್ರಧಾನಿ ಹುದ್ದೆಗೆ ಬರುವುದು ಸಾಧ್ಯವಾಯಿತು.

ಹಿಂದುತ್ವ ಮತ್ತು ಆರ್‌ಎಸ್‌ಎಸ್‌ನ ಪಾತ್ರ ಮೋದಿ ಉಚ್ಛ್ರಾಯದಲ್ಲಿ ಜಾಸ್ತಿ ಇದೆ. ಆ ಕಾರಣದಿಂದಲೇ ಗುಜರಾತ್‌ ಮುಖ್ಯಮಂತ್ರಿಗೆ ದೇಶದಲ್ಲೆಡೆ ಸ್ವೀಕಾರಾರ್ಹತೆ ದೊರೆಯುವುದು ಸಾಧ್ಯವಾಯಿತು. ಆದರೆ ಬಂಗಾಳಿ ಅಸ್ಮಿತೆಯ ರಾಜಕಾರಣ ಮಾಡುವ ಮಮತಾಗೆ ಬಂಗಾಳದ ಹೊರಗಡೆ ಅಂಥದ್ದೊಂದು ಜೋಡಿಸುವ, ಕೂಡಿಸುವ ಅಂಶ ಯಾವುದೂ ಇಲ್ಲ. ಗೋವಾ ಮತ್ತು ಈಶಾನ್ಯದ ಸಣ್ಣ ರಾಜ್ಯಗಳಲ್ಲಿ ಕೆಲ ಮುನಿಸಿಕೊಂಡ ನಾಯಕರನ್ನು ಪಿಕೆ ತಮ್ಮ ಪ್ರಭಾವ ಬಳಸಿ ತರಬಹುದಾದರೂ ಅದಕ್ಕೆ ಒಂದು ಸಂಘಟನೆಯ ರೂಪ ಕೊಡಲು ಸಾಧ್ಯ ಆಗೋದು ತೀರ ಕಷ್ಟ.

ಆದರೆ ಮೋದಿ ವಿರುದ್ಧ ಕಾಂಗ್ರೆಸ್‌ ಮತ್ತು ರಾಹುಲ್ ಗಾಂಧಿ ತೀರ ಸಪ್ಪೆ ಎನಿಸಿಕೊಂಡಿರುವುದರಿಂದ ಮೋದಿ ವಿರುದ್ಧದ ಧ್ರುವದಲ್ಲಿ ಇರುವ ಅವಕಾಶ ಬಳಸಿಕೊಳ್ಳಲು ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ದೇಶವ್ಯಾಪಿ ತಿರುಗುತ್ತಿದ್ದಾರೆ. ಈ ಪ್ರಯತ್ನದ ಮೊದಲ ನಷ್ಟಆಗುತ್ತಿರುವುದು ಸದ್ಯಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ.

ಮಾಧ್ಯಮ ಸ್ನೇಹಿ ಜ. ರಾವತ್‌

ಸೇನಾ ಮುಖ್ಯಸ್ಥರು ಮಾಧ್ಯಮಗಳ ಜೊತೆ ಮಾತನಾಡೋದು ಅಪರೂಪ. ಆದರೆ ಜ| ಬಿಪಿನ್‌ ರಾವತ್‌ ಪತ್ರಕರ್ತರು ಕಂಡರೆ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ಕೊಟ್ಟು ಮುಂದೆ ಹೋಗುತ್ತಿದ್ದರು. ಅದು ಚೀನಾ ಬಗ್ಗೆ ಇರಲಿ, ಲಡಾಖ್‌ ಬಗ್ಗೆ ಇರಲಿ ಜನರಲ್ ಸಾಹೇಬರು ಮುಕ್ತವಾಗಿ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದರು. ಇದರಿಂದ ಬಿಪಿನ್‌ ರಾವತ್‌ ಅನೇಕ ಬಾರಿ ಸಮಸ್ಯೆಗೆ ಒಳಗಾಗಿದ್ದೂ ಇದೆ. ಆ ಬಗ್ಗೆ ಕೇಳಿದರೆ, ನಾನೊಬ್ಬ ಸೈನಿಕ. ಸೈನ್ಯ ಮತ್ತು ದೇಶಕ್ಕೆ ಯಾವುದು ಒಳ್ಳೆಯದೋ ಅದನ್ನು ಹೇಳುತ್ತೇನೆ ಅಷ್ಟೇ ಎಂದು ನಗುತ್ತಲೇ ಉತ್ತರ ಕೊಡುತ್ತಿದ್ದರು. ಕಳೆದ ವಾರವಷ್ಟೇ ನೌಕಾ ದಿನದಂದು ರಾಷ್ಟ್ರಪತಿಗಳ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ವೇದಿಕೆಯಿಂದ ಕೆಳಗೆ ಬಂದು ರಕ್ಷಣಾ ಇಲಾಖೆ ಕವರ್‌ ಮಾಡುವ ವರದಿಗಾರರ ಜೊತೆ ಮನಸ್ಸು ಬಿಚ್ಚಿ ಹರಟೆ ಹೊಡೆದು ಹೋಗಿದ್ದರು.

ಸೋಲು- ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

ಮೋದಿಗೆ ಎಂಪಿ ಹಾಜರಿ ಚಿಂತೆ

ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಹಾಜರಾಗದ ಸಂಸದರಿಗೆ ನೀವು ಬದಲಾಗಿ, ಇಲ್ಲದೇ ಇದ್ದರೆ ನಿಮ್ಮನ್ನು ಬದಲಿಸಬೇಕಾಗುತ್ತದೆ ಎಂದರೂ ಉಪಯೋಗ ಆಗಿಲ್ಲ. ಅದರ ಮರುದಿನ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಇದ್ದದ್ದು ಬಿಜೆಪಿಯ 58 ಸಂಸದರು ಮಾತ್ರ. ಅದೇ ವಿಪಕ್ಷದ ಸಂಸದರು ಇದ್ದದ್ದು 90. ನಂತರ ಮಂತ್ರಿಗಳಿಂದ ಫೋನ್‌ ಮಾಡಿಸಿ ಬಿಜೆಪಿ ಸಂಸದರನ್ನು ಸದನಕ್ಕೆ ಕರೆಸಬೇಕಾಯಿತು. ಅದು ಯಾಕೋ ಗೊತ್ತಿಲ್ಲ ಬಿಜೆಪಿ ಸಂಸದರು ಸಂಸತ್‌ ಭವನಕ್ಕೆ ಬಂದರೂ ಸದನದಲ್ಲಿ ಬಂದು ಕುಳಿತುಕೊಳ್ಳುವ ಪರಿಪಾಠ ಕಡಿಮೆ ಆಗುತ್ತಿದೆ ಎಂದು ಹಾಜರಾತಿ ದಾಖಲೆಗಳು ಹೇಳುತ್ತಿವೆ.

ಅಖಿಲೇಶ್‌ ರ್ಯಾಲಿಗೆ ಜನಸ್ತೋಮ

ಉತ್ತರಪ್ರದೇಶ ಚುನಾವಣೆಗೆ 3 ತಿಂಗಳು ಉಳಿದಿರುವಾಗ ಯೋಗಿ ಆದಿತ್ಯನಾಥರಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿರುವ ಅಖಿಲೇಶ್‌ ಯಾದವ್‌ರ ಸಭೆಗಳಿಗೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅದರಲ್ಲೂ ಕಳೆದ ವಾರ ಪಶ್ಚಿಮ ಯುಪಿಯ ಮೇರಠ್‌ನಲ್ಲಿ ಸೇರಿದ್ದ ಜನಸ್ತೋಮ ಸ್ವಲ್ಪಮಟ್ಟಿಗೆ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದು ಹೌದು.

ಇದಕ್ಕೆ ತಕ್ಕಂತೆ ಅಖಿಲೇಶ್‌ ರಾಜರ್ಭ ಮೌರ್ಯ ಮತ್ತು ಜಾಟ್‌ ಸಮುದಾಯದ ಸಣ್ಣ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು, ಯಾದವ್‌ ಮತ್ತು ಮುಸ್ಲಿಂ ವೋಟ್‌ಬ್ಯಾಂಕ್‌ ಜೊತೆ ಇನ್ನುಳಿದವರನ್ನು ಸೇರಿಸುವ ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿಯೇ ಮುಂದಿನ ವಾರ ಮತ್ತೆ ಪ್ರಧಾನ ಮಂತ್ರಿ ಮೋದಿ ಕಾಶಿಗೆ ಹೋಗುತ್ತಿದ್ದು, ವಿಶ್ವನಾಥ್‌ ಕಾರಿಡಾರ್‌ ಉದ್ಘಾಟನೆ ಮಾಡಲಿದ್ದಾರೆ. ಬಹುತೇಕ ಯುಪಿ ಚುನಾವಣೆ ಮೋದಿ, ಯೋಗಿ ಮತ್ತು ಅಖಿಲೇಶ್‌ ಯಾದವ್‌ ಸುತ್ತ ಸುತ್ತಲಿದೆ ಅನ್ನಿಸುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್ ದೆಹಲಿಯಿಂದ ಕಂಡ ರಾಜಕಾರಣ 

click me!