
ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಎಂದೇ ಖ್ಯಾತಿ ಗಳಿಸಿದ ಅಜಿತ್ ಪವಾರ ಅವರು ನಿನ್ನೆ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪುವುದರೊಂದಿಗೆ ಅವರ 4 ದಶಕದ ರಾಜಕೀಯ ಜೀವನ ಅವರೊಂದಿಗೆ ಅಂತ್ಯವಾಗಿದೆ. ನಿನ್ನೆ ಮುಂಜಾನೆ 8.50ರ ಸುಮಾರಿಗೆ ಈ ದುರಂತ ಸಂಭವಿಸಿತ್ತು. 66 ವರ್ಷದ ಅಜಿತ್ ಪವಾರ್ ಸೇರಿದಂತೆ ವಿಮಾನ ಸಿಬ್ಬಂದಿ ಅಧಿಕಾರಿಗಳು ಸೇರಿ ಒಟ್ಟು 5 ಜನ ಈ ವಿಮಾನದಲ್ಲಿದ್ದರು. ಆದರೆ ಈ ಘಟನೆ ನಡೆಯುವ ವೇಳೆ ಅಜಿತ್ ಪವಾರ್ ತಾಯಿ ಅಶಾ ಅವರು ಇದ್ಯಾವುದರ ಅರಿವಿಲ್ಲದೇ ಎಂದಿನಂತೆ ಟಿವಿ ನೋಡುತ್ತಿದ್ದರು. ಅಲ್ಲದೇ ಟಿವಿಯಲ್ಲಿ ವಿಮಾನ ಅಪಘಾತದ ಸುದ್ದಿ ನೋಡಿದ ಅವರು ದಾದಾಗೆ ಆಕ್ಸಿಡೆಂಟ್ ಆಯ್ತಾ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದ್ದರು. ಆದರೆ ಮಗನ ಸಾವು ತಾಯಿಗೆ ಹೀಗೆ ಸಡನ್ ಆಗಿ ತಿಳಿಯುವುದು ಬೇಡ ಎಂದು ಅಲ್ಲಿದ್ದ ಸಿಬ್ಬಂದಿ ಕೂಡಲೇ ಮನೆಯ ಕೇಬಲ್ ಕನೆಕ್ಷನ್ ಕಡಿತಗೊಳಿಸಿದ್ದರು ಎಂದು ವರದಿಯಾಗಿದೆ.
ಅಜಿತ್ ಪವಾರ್ ಅವರ ಮಾಹಾರಾಷ್ಟ್ರದ ಬಾರಾಮತಿಯಲ್ಲಿ ಇರುವ ತೋಟದ ಮನೆಯ ಮ್ಯಾನೇಜರ್ ಆಗಿರುವ ಸಂಪತ್ ಧೈಗುಡೆ ಅವರು ಈ ಬೇಸರದ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಅಜಿತ್ ಪವಾರ್ ಅವರ ವೃದ್ಧ ತಾಯಿಗೆ ಮಗನ ಸಾವಿನ ವಿಚಾರ ಹೀಗೆ ಧುತ್ತನೇ ತಿಳಿಯುವುದು ಬೇಡ ಎಂದು ನಿರ್ಧರಿಸಿದ ಅವರ ತೋಟದ ಮನೆಯ ಸಿಬ್ಬಂದಿ ಕೂಡಲೇ ಮನೆಯ ಕೇಬಲ್ ಕನೆಕ್ಷನ್ ಕಟ್ ಮಾಡಿದರು ಎಂದು ವರದಿಯಾಗಿದೆ. ಬರೀ ಇಷ್ಟೇ ಅಲ್ಲ ಅಜಿತ್ ತಾಯಿ ಅಶಾ ಅವರ ಮೊಬೈಲ್ ಫೋನ್ ಅನ್ನು ಕೂಡ ಕೂಡಲೇ ಸಿಬ್ಬಂದಿ ಫ್ಲೈಟ್ ಮೂಡ್‌ಗೆ ಹಾಕಿದರು ನಂತರ ಆಕೆಗೆ ಆ ತರ ಏನು ನಡೆದಿಲ್ಲ ಎಂದು ಆ ಕ್ಷಣಕ್ಕೆ ಸುಳ್ಳು ಹೇಳಿದರು ಎಂದು ವರದಿಯಾಗಿದೆ.
ಸಂಪತ್ ಧೈಗುಡೆ ಅವರ ಪ್ರಕಾರ ಅವರ ತಾಯಿ ಅಶಾ ಅವರು ಮಗನಿಗೆ ಅಪಘಾತದಲ್ಲಿ ಸಣ್ಣಪುಟ್ಟ ಹಾನಿಯಾಗಿದೆ ಎಂದು ಭಾವಿಸಿದ್ದರು. ನಂತರ ಟಿವಿಯಲ್ಲಿ ಅಜಿತ್ ಪವಾರ ಅವರನ್ನು ಬಾರಾಮತಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂಬ ಸುದ್ದಿ ಬಂತು. ಇತ್ತ ನಾವು ಅಜಿತ್ ಪವಾರ್ ಅವರ ತಾಯಿಗೆ ಅಂತದ್ದೇನು ಸಂಭವಿಸಿಲ್ಲ, ಸಮಾಧಾನವಾಗಿರಿ ಎಂದು ಹೇಳಿದೆವು. ಅದರೆ ಅಗಲೇ ಅವರು ಫಾರ್ಮ್‌ಹೌಸ್‌ನಿಂದ ಹೊರಗೆ ಬಂದು ಓಡಾಡುವುದಕ್ಕೆ ಶುರು ಮಾಡಿದ್ದು, ನನಗೆ ಈಗಲೇ ದಾದಾನನ್ನು ನೋಡಬೇಕು ಎಂದು ಹೇಳುವುದಕ್ಕೆ ಶುರು ಮಾಡಿದರು. ಆಕೆ ಯಾರ ಮಾತನ್ನು ಕೇಳುವುದಕ್ಕೆ ಸಿದ್ಧಳಿರಲಿಲ್ಲ. ಕೊನೆಗೆ, ನಾವು ಇಷ್ಟವಿಲ್ಲದೆ ಅವಳನ್ನು ಬಾರಾಮತಿಯಲ್ಲಿರುವ ಬಂಗಲೆಗೆ ಕರೆದುಕೊಂಡು ಹೋದೆವು ಎಂದು ಸಂಪತ್ ಅವರು ಹೇಳಿದ್ದಾರೆ.
4 ದಿನಗಳ ಹಿಂದಷ್ಟೇ ಪವಾರ ಈ ತೋಟದ ಮನೆಗೆ ಬಂದು ತಮ್ಮ ತಾಯಿಯನ್ನು ಮಾತನಾಡಿಸಿ ಅರೋಗ್ಯ ವಿಚಾರಿಸಿಕೊಂಡು ಹೋಗಿದ್ದರು. ಮುಂಜಾನೆ 7.30ರ ಸುಮಾರಿಗೆ ಈ ತೋಟದ ಮನೆಗೆ ಬಂದಿದ್ದ ಅಜಿತ್ ಪವಾರ್, ತನ್ನ ತಾಯಿಯ ಜೊತೆ 15 ನಿಮಿಷ ಕಾಲ ಕಳೆದು ಅಲ್ಲಿಂದ ಹೊರಟು ಹೋಗಿದ್ದರು. ಆದರೆ ಈಗ ಅವರೇ ಇಲ್ಲ. ಅಜಿತ್ ಪವಾರ್ ಅವರ ಸಾವಿನಿಂದ ಈಗ ಬರೀ ಅವರ ಕುಟುಂಬವಷ್ಟೇ ಕಂಗೆಟ್ಟಿಲ್ಲ, ಅವರ ಸಾವು ಮಹಾರಾಷ್ಟ್ರದ ಪ್ರಸ್ತುತ ರಾಜಕಾರಣದ ಸ್ಥಿತಿಯನ್ನೆ ಬದಲಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಡಿಸಿಎಂ ಅಜಿತ್ ಪವಾರ್ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭವೇ ಕುಸಿದಂತಾಗಿದೆ. ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ.
ಇದನ್ನು ಓದಿ: ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು
ಅಜಿತ್‌ರ ಎನ್‌ಸಿಪಿ ಪಕ್ಷದಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಸಮರ್ಥ ನಾಯಕರಿಲ್ಲ. ಹೀಗಿರುವಾಗ, ಆ ಪಕ್ಷದ ಭವಿಷ್ಯ ಮತ್ತು 41 ಶಾಸಕರ ಮುಂದಿನ ನಡೆಯ ಬಗ್ಗೆ ಕೆಲ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಉತ್ತರಾಧಿಕಾರತ್ವದ ಕಿತ್ತಾಟ ಹಾಗೂ ಸೈದ್ಧಾಂತಿಕ ಕಾರಣಗಳಿಂದಾಗಿ 2023ರಲ್ಲಿ ಅಜಿತ್ ಅವರು ಶರದ್ ಪವಾರ್‌ರ ಎನ್‌ಸಿಪಿಯಿಂದ ಬೇರ್ಪಟ್ಟು ತಮ್ಮದೇ ಬಣ ಕಟ್ಟಿಕೊಂಡಿದ್ದರು. ಈಗ ನಾಯಕತ್ವದ ಕೊರತೆಯಿಂದಾಗಿ ಅವು ಮತ್ತೆ ವಿಲೀನವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಅಜಿತ್-ಶರದ್ ನಡುವಿನ ಮನಸ್ತಾಪ ತಗ್ಗಿ ಇಬ್ಬರೂ ಕೈಜೋಡಿಸಲು ಮುಂದಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.
ಇದನ್ನು ಓದಿ: ತಾಯಿಯ ಸಾವಿಗೂ ಬರಲಾಗದಷ್ಟು ಬ್ಯುಸಿಯಾದ ಮಗ: ವೀಡಿಯೋ ಕರೆಯಲ್ಲೇ ಅಂತಿಮ ದರ್ಶನ
ಈ ನಡುವೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ತಮ್ಮ ಸಂಬಂಧಿಯೂ ಆಗಿರುವ ಅಜಿತ್ ಪವಾರ್ ಅವರ ಸಾವನ್ನು ರಾಜಕೀಯಗೊಳಿಸಬೇಡಿ ಎಂದು ಶರದ್ ಪವಾರ್ ಬುಧವಾರ ಭಾವನಾತ್ಮಕ ಮನವಿ ಮಾಡಿದ್ದಾರೆ. ಇದೊಂದು ಆಕಸ್ಮಿಕ ದುರಂತ, ಅವರ ಸಾವಿನಿಂದ ಇಡೀ ರಾಜ್ಯವೇ ದೊಡ್ಡ ಆಘಾತವನ್ನು ಅನುಭವಿಸಿದೆ ಮತ್ತು ಈ ಘಟನೆಯನ್ನು ಕೇವಲ ಅಪಘಾತವೆಂದು ನೋಡಬೇಕು ಎಂದು ಅವರು ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ