
ಜೈಪುರ/ನವದೆಹಲಿ (ಜೂನ್ 27, 2023): ಪ್ರತಿಕೂಲ ಹವಾಮಾನ ಹಾಗೂ ಪೈಲಟ್ ಕರ್ತವ್ಯದ ಸಮಯ ಮುಗಿದ ಪರಿಣಾಮವಾಗಿ ಲಂಡನ್‌ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸುತ್ತಿದ್ದ 300 ಪ್ರಯಾಣಿಕರು ಪಡಿಪಾಟಲು ಅನುಭವಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆಯಿತು. ಬಳಿಕ ದೆಹಲಿಯಲ್ಲಿ ಇಳಿಸಲು ನಿಶಾನೆ ಸಿಕ್ಕಿತಾದರೂ, ಕಾರ್ಯನಿರ್ವಹಣಾ ಅವಧಿ ಮುಗಿದಿದ್ದ ಕಾರಣ ವಿಮಾನ ಚಾಲನೆಗೆ ಪೈಲಟ್ ನಿರಾಕರಿಸಿದ. ಹೀಗಾಗಿ ಪ್ರಯಾಣಿಕರು ಜೈಪುರದಲ್ಲೇ ಸಿಲುಕುವಂತಾಯಿತು.
ಆಕ್ರೋಶಗೊಂಡ ಪ್ರಯಾಣಿಕರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಏರ್ ಇಂಡಿಯಾಗೆ ಟ್ವಿಟ್ಟರ್ ಮೂಲಕ ದೂರು ನೀಡಿದರು. ಬಳಿಕ ಬದಲಿ ಪೈಲಟ್‌ನನ್ನು ಕಳುಹಿಸಿ ಪ್ರಯಾಣಿಕರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.
ಇದನ್ನು ಓದಿ: ಜಮ್ಮುಗೆ ಹೋಗೋ ಬದ್ಲು ಪಾಕ್ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ: ಕಾರಣ ಹೀಗಿದೆ..
ಆಗಿದ್ದೇನು?:
ಲಂಂಡನ್‌ನಿಂದ ದೆಹಲಿಗೆ 300 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಬೆಳಗಿನ ಜಾವ ದೆಹಲಿಗೆ ಆಗಮಿಸಿತು. ಆದರೆ ಪ್ರತಿಕೂಲ ಹವಾಮಾನ ಇದ್ದ ಕಾರಣ ದೆಹಲಿಯ ಆಗಸದಲ್ಲೇ 10 ನಿಮಿಷ ಹಾರಾಟ ನಡೆಸುವಂತೆ ಪೈಲಟ್‌ಗೆ ಸೂಚಿಸಲಾಯಿತು. ಹವಾಮಾನ ಸುಧಾರಿಸದ ಹಿನ್ನೆಲೆಯಲ್ಲಿ ಬೆಳಗಿನ ಜಾವ 4ಕ್ಕೆ ವಿಮಾನವನ್ನು ಜೈಪುರದಲ್ಲಿ ಇಳಿಸಲಾಯಿತು.
ಕೆಲ ಹೊತ್ತಿನ ಬಳಿಕ ದೆಹಲಿಯಲ್ಲಿ ವಿಮಾನ ಲ್ಯಾಂಡ್ ಮಾಡಲು ಅನುಮತಿ ಬಂತಾದರೂ ವಿಮಾನ ಹಾರಿಸಲು ಪೈಲಟ್ ನಿರಾಕರಿಸಿದರು. ಪೈಲಟ್‌ಗಳಿಗೆ ನಿರ್ದಿಷ್ಟ ಕರ್ತವ್ಯದ ಮಿತಿ ಇರುತ್ತದೆ. ಏರ್ ಇಂಡಿಯಾ ಪೈಲಟ್ ಆ ಮಿತಿಯನ್ನು ಮೀರಿದ್ದರು. ಹೀಗಾಗಿ ಅವರು ಒಪ್ಪಲಿಲ್ಲ. ಇದೊಂದು ಸುರಕ್ಷತಾ ಕ್ರಮವಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ: ನೀವು ಪೋಕೆಮಾನ್ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'
ಪಾಕ್ ವಾಯು ಪ್ರದೇಶ ಪ್ರವೇಶಿಸಿದ್ದ ಶ್ರೀನಗರ - ಜಮ್ಮು ವಿಮಾನ
ಪ್ರತಿಕೂಲ ಹವಾಮಾನದ ಕಾರಣ ಶ್ರೀನಗರದಿಂದ ಜಮ್ಮುವಿಗೆ ಇಂಡಿಗೋ ವಿಮಾನವೊಂದು ಭಾನುವಾರ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿ, "ಇಂಡಿಗೋ 6e-2124 ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು ಮತ್ತು ವಿಮಾನವನ್ನು ಅಮೃತಸರಕ್ಕೆ ಮಾರ್ಗ ಬದಲಾವಣೆ ಮಾಡಲಾಯ್ತು" ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಈ ಘಟನೆ ಕೆಲ ಕಾಲ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತಾದರೂ ಅದೃಷ್ಟವಶಾತ್ ವಿಮಾನ ಯಶಸ್ವಿಯಾಗಿ ಅಮೃತಸರದ ಕಡೆಗೆ ಮಾರ್ಗ ಬದಲಾವಣೆಯಾಗಿ ಅಲ್ಲೇ ಲ್ಯಾಂಡ್ ಆಗಿದೆ. ಇನ್ನು, ಈ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಪರಿಸ್ಥಿತಿಯ ಬಗ್ಗೆ ವಿಮಾನಯಾನ ಸಂಸ್ಥೆಯು ಎರಡೂ ದೇಶಗಳಲ್ಲಿನ ಅಧಿಕಾರಿಗಳಿಗೆ ತಿಳಿಸಿತ್ತು ಎಂದೂ ತಿಳಿದುಬಂದಿದೆ. ಹಾಗೆ, ವಿಮಾನದ ತಿರುವಿನ ಬಗ್ಗೆ ಜಮ್ಮು ಮತ್ತು ಲಾಹೋರ್ ಎಟಿಸಿ ನಡುವೆ ಸಮನ್ವಯ ಸಾಧಿಸಲಾಗಿತ್ತು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 14000 ರೂ. ತಲುಪಿದ ದೆಹಲಿ - ಮುಂಬೈ ವಿಮಾನ ದರ: ವಿಶ್ವದಲ್ಲೇ ದುಬಾರಿ ಬೆಲೆಗೆ ಕಾರಣ ಇಲ್ಲಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ