ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಉದ್ಯಮಿಯೊಬ್ಬ ಮೂತ್ರ ವಿಸರ್ಜನೆ ಬಳಿಕ ಭಾರಿ ಸುದ್ದಿಯಾಗಿದ್ದ ಏರ್ ಇಂಡಿಯಾ ಈಗ ಲವ್ ಪ್ರಪೋಸಲ್‌ನ ಕಾರಣಕ್ಕೆ ಸುದ್ದಿಯಾಗಿದೆ.
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಉದ್ಯಮಿಯೊಬ್ಬ ಮೂತ್ರ ವಿಸರ್ಜನೆ ಬಳಿಕ ಭಾರಿ ಸುದ್ದಿಯಾಗಿದ್ದ ಏರ್ ಇಂಡಿಯಾ ಈಗ ಲವ್ ಪ್ರಪೋಸಲ್‌ನ ಕಾರಣಕ್ಕೆ ಸುದ್ದಿಯಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಯುವಕನೋರ್ವ ಮಧ್ಯ ಆಗಸದಲ್ಲಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ರಮೇಶ್ ಕೊತ್ನಾನ್ ಎಂಬುವವರು ಲಿಂಕ್ಡಿನ್‌ನಲ್ಲಿ (LinkedIn)ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಮಧ್ಯ ಆಗಸದಲ್ಲಿ ಹಾರುತ್ತಿರುವ ವಿಮಾನದಲ್ಲಿ ಪೋಸ್ಟರ್ ಒಂದನ್ನು ಹಿಡಿದುಕೊಂಡು ಬಂದು ಯುವಕ ವಿಮಾನದಲ್ಲಿ ಕುಳಿತಿದ್ದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡುತ್ತಾನೆ. ವಿಮಾನದಲ್ಲೇ ಮಂಡಿಯೂರಿ ಕುಳಿತು ಆತ ಆಕೆಗೆ ಉಂಗುರ ತೊಡಿಸುತ್ತಾನೆ. ನಂತರ ಇಬ್ಬರು ಪರಸ್ಪರ ತಬ್ಬಿಕೊಳ್ಳುತ್ತಾರೆ.
ಅಂದಹಾಗೆ ಈ ಯುವಕ ತನ್ನ ಗೆಳತಿಗೆ ಸರ್‌ಪ್ರೈಸ್ ನೀಡುವ ಸಲುವಾಗಿ ಮುಂಬೈಗೆ ಪ್ರಯಾಣಿಸುವ ವಿಮಾನದಲ್ಲಿಯೇ ಆಕೆಗೆ ತಿಳಿಯದಂತೆ ಟಿಕೆಟ್ ಬುಕ್ ಮಾಡಿದ್ದ. ನಂತರ ವಿಮಾನ ಮಧ್ಯ ಆಗಸದಲ್ಲಿ ಹಾರಲು ಶುರು ಮಾಡಿದಾಗ ಆತ ತನ್ನ ಸೀಟಿನಿಂದ ಎದ್ದು ಪಿಂಕ್ ಬಣ್ಣದ ಪೋಸ್ಟರೊಂದನ್ನು ಹಿಡಿದುಕೊಂಡು ಬಂದಿದ್ದಾನೆ. ಇದನ್ನು ನೋಡಿ ಈತನ ಗೆಳತಿಗೆ ಅಚ್ಚರಿಯಾಗಿದ್ದು, ಆಕೆ ಅಚ್ಚರಿಯಿಂದ ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದಾಳೆ. ನಂತರ ತನ್ನ ಸೀಟಿನಿಂದ ಎದ್ದು ಬಂದ ಆಕೆಗೆ ಹುಡುಗ ಮಂಡಿಯೂರಿ ನಿಂತು ಪ್ರೇಮ ನಿವೇದನೆ ಮಾಡಿದ್ದೇನೆ. ನಂತರ ಇಬ್ಬರು ತಬ್ಬಿಕೊಂಡಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರೆಲ್ಲ ಈ ಯುವ ಜೋಡಿಗೆ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈತ ಹಿಡಿದಿದ್ದ ಗುಲಾಬಿ ಬಣ್ಣದ ಪೋಸ್ಟರ್‌ನಲ್ಲಿ ಇಬ್ಬರು ಜೊತೆಗಿರುವ ತಮ್ಮ ಕಾಲೇಜು ದಿನಗಳ ಹಲವು ಫೋಟೋಗಳನ್ನು ಆತ ಅಂಟಿಸಿದ್ದ.
ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಕಲ್ಲು: ಫೋಟೋ ವೈರಲ್
ಈ ವಿಡಿಯೋ ನೋಡಿದ ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಹಲವು ದಿನಗಳಿಂದ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಈಗ ಈ ಯುವಜೋಡಿಗಳ ಪ್ರೇಮ ನಿವೇದನೆಯ ಕಾರಣದಿಂದ ಮತ್ತೆ ಸುದ್ದಿಯಲ್ಲಿದೆ.
ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ (New York-Delhi flight) ಬರುತ್ತಿದ್ದ ವಿಮಾನದಲ್ಲಿ 70 ವರ್ಷದ ಮಹಿಳೆ ಮೇಲೆ ಉದ್ಯಮಿ ಶಂಕರ್ ಮಿಶ್ರಾ ಎಂಬಾರ ಮೂತ್ರ ವಿಸರ್ಜನೆ ಮಾಡಿದ್ದ. ಇದಾದ ಬಳಿಕ ಏರ್ ಇಂಡಿಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ನೀಚ ಕೃತ್ಯದ ಬಳಿಕವೂ ಶಂಕರ್ ಮಿಶ್ರಾ ಯಾವುದೇ ಶಿಕ್ಷೆಗೆ ಗುರಿಯಾಗದೇ ವಿಮಾನ ನಿಲ್ದಾಣದಿಂದ ಹೊರಟು ಹೋಗಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ನವಂಬರ್ 26ರಂದು ಘಟನೆ ನಡೆದಿದ್ದರೂ ಈ ಪ್ರಕರಣವನ್ನು ಇಬ್ಬರು ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆದರೆ ಈ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದ ನಂತರ ಜನವರಿ ನಾಲ್ಕರಂದು ಪ್ರಕರಣ ದಾಖಲಿಸಲಾಗಿತ್ತು.
ಆಕಾಶದಲ್ಲಿ ವಿಮಾನ ಹಾರಾಟ: ವಿಮಾನದೊಳಗೆ ಪ್ರಯಾಣಿಕರ ಹೋರಾಟ
ಪ್ರಕರಣದ ಬಳಿಕ ಉದ್ಯಮಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ಆದರೆ ಜನವರಿ 6 ರಂದು ಆತನನ್ನು ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಆತ ಮುಂಬೈನಿಂದ ಪರಾರಿಯಾಗಿದ್ದ. ಆತನ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಗಳಿಸಲಾಗಿತ್ತು. ಬಳಿಕ ಶಂಕರ್ ಮಿಶ್ರಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇರುವಿಕೆಯ ಬಗ್ಗೆ ಸುಳಿವುಗಳನ್ನು ಪಡೆದ ನಂತರ ದೆಹಲಿ ಪೊಲೀಸರು ಆತನನ್ನು ಹಿಡಿಯಲು ಬೆಂಗಳೂರಿನಲ್ಲಿ ತಂಡವನ್ನು ನಿಯೋಜಿಸಿ ಬಂಧಿಸಿದ್ದರು. ನಂತರ ದೆಹಲಿಯ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.