ಕ್ಯಾಬಿನ್‌ ಸಿಬ್ಬಂದಿ ಮೇಲೆ ಪ್ರಯಾಣಿಕನ ಹಲ್ಲೆ, ಲಂಡನ್‌ಗೆ ಹೋಗಬೇಕಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್‌!

By Santosh Naik  |  First Published Apr 10, 2023, 3:54 PM IST

ವಿಮಾನದಲ್ಲಿ ಸಹ ಪ್ರಯಾಣಿಕ ಮೇಲೆ ಹಾಗೂ ಕ್ಯಾಬಿನ್‌ ಸಿಬ್ಬಂದಿಯ ಮೇಲಿನ ಹಲ್ಲೆಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಸೋಮವಾರ ಇದೇ ರೀತಿಯ ಘಟನೆ ನವದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸಬೇಕಿದ್ದ ಏರ್‌ಇಂಡಿಯಾ ವಿಮಾನದಲ್ಲಿ ನಡೆದಿದೆ. ಇದರಿಂದಾಗಿ 4 ಗಂಟೆಯ ಬಳಿಕ ನವದೆಹಲಿಗೆ ವಾಪಸಾಗಿದೆ.


ನವದೆಹಲಿ (ಏ.10): ವಿಮಾನದಲ್ಲಿ ಪ್ರಯಾಣಿಕನ ದುಂಡಾವರ್ತನೆಯ ಕಾರಣದಿಂದಾಗಿ, ಸೋಮವಾರ ಮುಂಜಾನೆ ಏರ್‌ ಇಂಡಿಯಾ ವಿಮಾನ ನವದೆಹಲಿ ಏರ್‌ಪೋರ್ಟ್‌ಗೆ ವಾಪಸಾಗಿದೆ. ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಎಐ-111 ವಿಮಾನದಲ್ಲಿ ಪ್ರಯಾಣಿಕನೊಬ್ಬ, ಕ್ಯಾಬಿನ್‌ ಸಿಬ್ಬಂದಿಯ ಜೊತೆ ಜಗಳ ಆರಂಭಿಸಿದ ಎಂದು ಏರ್‌ಲೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಗಳ ಮಾಡಿದ್ದಲ್ಲದೆ, ಸಿಬ್ಬಂದಿಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದಾಗಿ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ ಎಂದು ಮಾಹಿತಿ ಲಭಿಸಿದೆ. ಸೋಮವಾರ ಬೆಳಗ್ಗೆ 6.30ಕ್ಕೆ ಲಂಡನ್‌ನ ಹೀಥ್ರೂಗೆ ವಿಮಾನ ಟೇಕ್ ಆಫ್ ಆಗಿತ್ತು ಎಂದು ಏರ್‌ಲೈನ್ಸ್ ಮಾಹಿತಿ ನೀಡಿದೆ. ವಿಮಾನ ಟೇಕ್‌ಆಫ್‌ ಆದ ಬಳಿಕ ಪ್ರಯಾಣಿಕ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಲು ಆರಂಭ ಮಾಡಿದ. ವಿಮಾನದಲ್ಲಿದ್ದ ಸಿಬ್ಬಂದಿ ಪದೇ ಪದೇ ಎಚ್ಚರಿಕೆ ನೀಡಿದರೂ ಸಹ ಪ್ರಯಾಣಿಕ ತನ್ನ ದುಂಡಾವರ್ತನೆಯನ್ನು ಮುಂದುವರಿಸಿದ್ದು ಮಾತ್ರವಲ್ಲದೆ, ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಸಹ ಗಾಯಗೊಳಿಸಿದ್ದ. ಆ ಬಳಿಕ 10.30ಕ್ಕೆ ದೆಹಲಿಗೆ ವಾಪಸಾಯಿತು. ವಿಮಾನಯಾನ ಸಂಸ್ಥೆಯು ಪ್ರಯಾಣಿಕನ ವಿರುದ್ಧ ದೆಹಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ವ್ಯಕ್ತಿಯನ್ನು ಜಸ್ಕಿರತ್‌ ಸಿಂಗ್‌ ಎಂದು ಗುರುತಿಸಲಾಗಿದ್ದು, 25 ವರ್ಷದ ವ್ಯಕ್ತಿ ಕಪಪುರ್ತಲಾ ಪಂಜಾಬ್‌ನ ನಿವಾಸಿಯಾಗಿದ್ದ. ಈತ ತನ್ನ ತಂದೆ-ತಾಯಿಯ ಜೊತೆ ಲಂಡನ್‌ಗೆ ಹೋಗುತ್ತಿದ್ದ ಎನ್ನಲಾಗಿದೆ. ಇಡೀ ಘಟನೆಗೆ ಸಂಬಂಧಿಸಿದಂತೆ ಉಳಿದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ ಮತ್ತು ಅದೇ ವಿಮಾನವನ್ನು ಲಂಡನ್‌ಗೆ ಹೋಗಲು ಮರು ನಿಗದಿಪಡಿಸಲಾಗಿದೆ ಎಂದು ಹೇಳಿದೆ.

ಪೇಶಾವರದ ಮೇಲೆ ಹಾರುತ್ತಿದ್ದ ವಿಮಾನ: ನೈಜ-ಸಮಯದ ಫ್ಲೈಟ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಫ್ಲೈಟ್‌ರಾಡಾರ್ 24 ಪ್ರಕಾರ, ಏರ್ ಇಂಡಿಯಾ ವಿಮಾನವು ಪಾಕಿಸ್ತಾನದ ಪೇಶಾವರ ಬಳಿ ಹಾರುತ್ತಿತ್ತು, ಆ ಬಳಿಕ ದೆಹಲಿಗೆ ವಾಪಾಸ್‌ ಆಗಲು ನಿರ್ಧಾರ ಮಾಡಲಾಯಿತು.

ಪ್ರತಿ ದಿನ ದೂರು ಸ್ವೀಕರಿಸುತ್ತೇವೆ: ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಸಂದರ್ಶನದಲ್ಲಿ ವಿಮಾನದ ಕ್ಯಾಬಿನ್‌ ಸಿಬ್ಬಂದಿ ಸಾಮಾನ್ಯವಾಗಿ ಪ್ರಯಾಣಿಕರಿಂದ ದುರ್ವರ್ತನೆಯನ್ನು ಎದುರಿಸುತ್ತಾರೆ ಎಂದು ಹೇಳಿದರು. ಅಂತಹ ವರದಿಗಳು ನಮಗೆ ಸಿಗದ ದಿನವೇ ಇಲ್ಲ. ವಿಮಾನದಲ್ಲಿ ಪ್ರಯಾಣಿಕರ ದುಡಾವರ್ತನೆ ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತಿದೆ ಎಂದಿದ್ದರು.

Tap to resize

Latest Videos

Air India Urination Row: ಶಂಕರ್‌ ಮಿಶ್ರಾಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌!

ಕಳೆದ ಜನವರಿಯಲ್ಲಿ ನಡೆದ ಘಟನೆಯಲ್ಲಿ ಸ್ಪೈಸ್‌ಜೆಟ್‌ ವಿಮಾನದಲ್ಲಿ ಅಬ್ಸಾರ್‌ ಆಲಂ ಎನ್ನುವ ಪ್ರಯಾಣಿಕ ಗಗನಸಖಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಘಟನೆಯ ವಿಡಿಯೋ ಕೂಡ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು. ಅಬ್ಸಾರ್‌ ಆಲಂ, ಗಗನಸಖಿಯ ಮೇಲೆ ದೊಡ್ಡ ಸ್ವರದಲ್ಲು ಕೂಗಾಡುತ್ತಿರುವುದು ಕಂಡು ಬಂದಿತ್ತು. ಆ ನಂತರ ಆಲಂ ಹಾಗೂ ಆತನ ಜೊತೆಗೆ ಪ್ರಯಾಣ ಮಾಡಿದ್ದ ವ್ಯಕ್ತಿಗಳನ್ನು ವಿಮಾನದಿಂದ ಹೊರಹಾಕಲಾಗಿತ್ತು. ದೆಹಲಿಯ ಜಾಮಿಯಾ ನಗರದ ನಿವಾಸಿಯಾಗಿದ್ದ ಅಬ್ಸಾರ್‌, ಕುಟುಂಬ ಸಮೇತ ಹೈದರಾಬಾದ್‌ಗೆ ತೆರಳುತ್ತಿದ್ದ. ದೂರಿನ ಬಳಿಕ ಆತನನ್ನು ಬಂಧಿಸಲಾಗಿತ್ತು. 

ನಾವು ಸ್ಪಷ್ಟವಾಗಿ ಕೆಲವು ಪಾಠ ಕಲಿಯಬೇಕು: ಸಿಬ್ಬಂದಿಗೆ ಏರ್‌ ಇಂಡಿಯಾ ಸಿಇಒ ಕ್ಲಾಸ್‌..!

ನವೆಂಬರ್ 26 ರಂದು ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಪ್ರಯಾಣಿಕ ಶಂಕರ್ ಮಿಶ್ರಾ ಅವರು ವಯಸ್ಸಾದ ವೃದ್ಧೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ನಡೆದಿತ್ತು. ಈ ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ವಿಮಾನಯಾನ ಸಂಸ್ಥೆ ದೆಹಲಿ ಪೊಲೀಸ್‌ರಲ್ಲಿ ಎಫ್‌ಐಆರ್‌ ಕೂಡ ದಾಖಲು ಮಾಡಿತ್ತು. ವೃದ್ಧ ಮಹಿಳೆ ಟಾಟಾ ಸಮೂಹದ ಅಧ್ಯಕ್ಷರಿಗೆ ದೂರು ನೀಡಿದಾಗ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 30 ಲಕ್ಷ ದಂಡ ವಿಧಿಸಿದ್ದರೆ,  ಡಿಜಿಸಿಎ ಪೈಲಟ್ ಪರವಾನಗಿಯನ್ನು 3 ತಿಂಗಳ ಕಾಲ ಅಮಾನತುಗೊಳಿಸಿದೆ. ಆರೋಪಿ ಶಂಕರ್ ಮಿಶ್ರಾ ಅವರಿಗೂ 4 ತಿಂಗಳ ಕಾಲ ವಿಮಾನ ಪ್ರಯಾಣ ನಿಷೇಧಿಸಲಾಗಿದೆ.

click me!