
ನವದೆಹಲಿ: ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಹೃದಯಾಘಾತಕ್ಕೀಡಾಗಿ 28 ವರ್ಷದ ಯುವ ಪೈಲಟ್ ಸಾವನ್ನಪ್ಪಿದ ಮನಕಲುಕುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಈ ಪೈಲಟ್‌ಗೆ ಮದುವೆಯಾಗಿತ್ತು. ವಿಮಾನದ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿದ ಪೈಲಟ್ ನಂತರ ಕಾಕ್‌ಫಿಟ್‌ನಲ್ಲೇ ವಾಂತಿ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಜೀವ ಹೋಗಿದೆ. ಹೀಗೆ ಕರ್ತವ್ಯದಲ್ಲಿದ್ದಾಗಲೇ ಸಾವಿಗೀಡಾದ ಪೈಲಟ್ ಹೆಸರನ್ನು ಗೌಪ್ಯವಾಗಿಡಲಾಗಿದೆ. ಯಾವ ಏರ್‌ಪೋರ್ಟ್‌ನಲ್ಲಿ ಯಾವಾಗ ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ಈ ವಿಚಾರ ಖಚಿತಪಡಿಸಿದ್ದಾರೆ.
ಈ ಯುವ ಪೈಲಟ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಈ ವಿಚಾರವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ಖಚಿತಪಡಿಸಿದ್ದಾರೆ. ನಮ್ಮ ಅಮೂಲ್ಯವಾದ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಈ ತೀವ್ರ ದುಃಖದ ಸಮಯದಲ್ಲಿ ನಮ್ಮ ಆಲೋಚನೆಗಳು ಅವರ ಕುಟುಂಬದೊಂದಿಗೆ ಇವೆ. ಈ ಅಪಾರ ನಷ್ಟವನ್ನು ನಾವೆಲ್ಲರೂ ನಿಭಾಯಿಸುತ್ತಿರುವಾಗ ನಾವು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ ಎಂದು ಇಂಡಿಯನ್ ಏರ್‌ಲೈನ್ಸ್ ಎಕ್ಸ್‌ಪ್ರೆಸ್ ವಕ್ತಾರರು ಹೇಳಿದ್ದಾರೆ. ಈ ಸಮಯದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಮತ್ತು ಅನಗತ್ಯ ಊಹಾಪೋಹಗಳನ್ನು ತಪ್ಪಿಸುವಂತೆ ಸಂಬಂಧಪಟ್ಟ ಎಲ್ಲರನ್ನೂ ನಾವು ವಿನಂತಿಸುತ್ತೇವೆ ಮತ್ತು ಸೂಕ್ತ ಪ್ರಕ್ರಿಯೆಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ಹೇಳಿದ್ದಾರೆ.
ಪೈಲಟ್‌ಗಳ ವಿಶ್ರಾಂತಿ ಸುಧಾರಣೆಗಳಿಗೆ ಡಿಜಿಸಿಎ ಒತ್ತಾಯ
ಪೈಲಟ್‌ಗಳಿಗೆ ವಿಮಾನ ಕರ್ತವ್ಯದ ಸಮಯ ಮತ್ತು ಕಡ್ಡಾಯ ವಿಶ್ರಾಂತಿ ಸಮಯದ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕೆಲಸ ಮಾಡುತ್ತಿರುವ ಈ ಸಮಯದಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯ ಪ್ರಕಾರ ಜುಲೈ 1, 2025 ರಿಂದ ಪೈಲಟ್‌ಗಳಿಗೆ ವಾರದ ವಿಶ್ರಾಂತಿ ಅವಧಿಯನ್ನು 36 ರಿಂದ 48 ಗಂಟೆಗಳಿಗೆ ಹೆಚ್ಚಿಸುವ ಹಂತ ಹಂತದ ಯೋಜನೆಯನ್ನು ಡಿಜಿಸಿಎ ರೂಪಿಸಿದೆ. ಹೆಚ್ಚುವರಿಯಾಗಿ, ನವೆಂಬರ್ 1, 2025 ರಿಂದ ರಾತ್ರಿ ಹಾರಾಟದ ಮೇಲಿನ ಮಿತಿಗಳನ್ನು ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆಸಿದೆ.
ಫೆಬ್ರವರಿ 24 ರಂದು, ನ್ಯಾಯಾಲಯವು ಡಿಜಿಸಿಎಗೆ ತಾನು ಪ್ರಸ್ತಾಪ ಮಾಡಿದ ವೇಳಾಪಟ್ಟಿಯನ್ನು ವಿಳಂಬವಿಲ್ಲದೆ ಅನುಸರಿಸಲು ಸೂಚಿಸಿತು. 22 ಪರಿಷ್ಕೃತ ನಾಗರಿಕ ವಿಮಾನಯಾನ ಅಗತ್ಯತೆ (CAR) ಷರತ್ತುಗಳಲ್ಲಿ 15 ಅನ್ನು ಜುಲೈ 1 ರೊಳಗೆ ಜಾರಿಗೆ ತರಲಾಗುವುದು ಮತ್ತು ಉಳಿದವು ನವೆಂಬರ್ 1 ರೊಳಗೆ ಜಾರಿಗೆ ಬರಲಿವೆ ಎಂದು ನ್ಯಾಯಮೂರ್ತಿ ತಾರಾ ವಿಟಾಸ್ತ ಗಂಜು ಅವರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಲಾಯಿತು.
ಪೈಲಟ್‌ಗಳ ಸಂಘಗಳನ್ನು ಪ್ರತಿನಿಧಿಸುವ ವಕೀಲರು ಈ ಗಡುವುಗಳ ಒಳಗಾಗಿ ಈ ನಿಯಮಗಳು ಜಾರಿಗೆ ಬರುವಂತೆ ಮಾಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಇದೇ ವೇಳೆ ಡಿಜಿಸಿಎ ತನ್ನ ವಕೀಲರ ಮೂಲಕ ಪ್ರತಿಕ್ರಿಯಿಸಿ, ನಾವು ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದೇವೆ ಮತ್ತು ನಾವು ಅಫಿಡವಿಟ್‌ಗೆ ಬದ್ಧರಾಗಿದ್ದೇವೆ. ಅರ್ಜಿಗಳಲ್ಲಿ ಈಗ ಏನೂ ಉಳಿದಿಲ್ಲದ ಕಾರಣ ನ್ಯಾಯಾಲಯವು ರಿಟ್ ಅರ್ಜಿಗಳನ್ನು ವಿಲೇವಾರಿ ಮಾಡಲು ಮುಂದಾಗಬಹುದು ಎಂದು ಹೇಳಿತ್ತು.
ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೂತಲ್ಲೇ, ನಿಂತಲೇ, ವಾಕ್ ಮಾಡುವಾಗ ಡಾನ್ಸ್ ಮಾಡುವಾಗ ಜಿಮ್‌ನಲ್ಲಿ ಹೀಗೆ ಎಲ್ಲೆಂದರಲ್ಲಿ ಮಕ್ಕಳು ದೊಡ್ಡವರು ಎಂಬ ವಯಸ್ಸಿನ ಬೇಧವಿಲ್ಲದೇ ಅನೇಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ