ಎಲ್ಲಾ ಹಳೆ ಸಿಮ್ ಕಾರ್ಡ್ ಬದಲಿಸಿಕೊಳ್ಳಬೇಕಾ? ಸರ್ಕಾರದಿಂದ ತಯಾರಿ, ಸ್ಟೋರ್ ಮುಂದೆ ಲೈನ್ ಫಿಕ್ಸ್!

Published : Apr 10, 2025, 03:14 PM ISTUpdated : Apr 10, 2025, 03:15 PM IST
ಎಲ್ಲಾ ಹಳೆ ಸಿಮ್ ಕಾರ್ಡ್ ಬದಲಿಸಿಕೊಳ್ಳಬೇಕಾ? ಸರ್ಕಾರದಿಂದ ತಯಾರಿ, ಸ್ಟೋರ್ ಮುಂದೆ ಲೈನ್ ಫಿಕ್ಸ್!

ಸಾರಾಂಶ

SIM Card News: ಭಾರತ ಸರ್ಕಾರವು ಹಳೆಯ ಸಿಮ್ ಕಾರ್ಡ್‌ಗಳನ್ನು ಬದಲಾಯಿಸಲು ಸಿದ್ಧತೆ ನಡೆಸುತ್ತಿದೆ.ಯಾಕೆ ಈ ಸಿಮ್ ಕಾರ್ಡ್ ಬದಲಾವಣೆ ಮಾಡಿಕೊಳ್ಳಬೇಕು? ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ನವದೆಹಲಿ: ನೀವು ತುಂಬಾ ವರ್ಷಗಳಿಂದ ಒಂದೇ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಭಾರತ ಸರ್ಕಾರ ಎಲ್ಲಾ ಹಳೆಯ ಸಿಮ್ ಬದಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಹಾಗಾಗಿ ಗ್ರಾಹಕರು ಹೊಸ ಸಿಮ್ ಕಾರ್ಡ್ ತೆಗೆದುಕೊಳ್ಳೋದು ಕಡ್ಡಾಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕೆಲವರು ಸುಮಾರು 7-8 ವರ್ಷಗಳಿಂದ ಒಂದೇ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುತ್ತಾರೆ. ಇನ್ನೊಂದಿಷ್ಟು ಮಂದಿ ಎಂಎನ್‌ಪಿ ಮೂಲಕ ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಪದೇ ಪದೇ ಬದಲಾಗುತ್ತಿರುತ್ತಾರೆ. ಅಂತಹವರು ಸಹ ಸಿಮ್ ಬದಲಿಸಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ ಎನ್ನಲಾಗುತ್ತಿದೆ. ಯಾಕೆ ಈ ಬದಲಾವಣೆ ಎಂಬುದರ ಈ ಲೇಖನದಲ್ಲಿದೆ. 

ಕೆಲ ಸಿಮ್‌ ಕಾರ್ಡ್‌ಗಳಲ್ಲಿ ಬಳಸಲಾಗುವ ಚಿಪ್ ಸೆಟ್‌ ಚೀನಾದಿಂದ ಬಂದಿದೆ ಎಂಬ ಅನುಮಾನ ಬಂದಿದೆ. ಈ ಸಂಬಂಧ ರಾಷ್ಟ್ರೀಯ ಭದ್ರತಾ ಸಂಸ್ಥೆ ತನಿಖೆ ನಡೆಸಿದ್ದು, ಭಾರತ ಸರ್ಕಾರದಿಂದಲೇ ಸಿಮ್ ಬದಲಾವಣೆಗೆ ಸೂಚನೆ ನೀಡಬಹುದು ಎಂದು ವರದಿಯಾಗುತ್ತಿದೆ. ಆದರೆ ಈವರೆಗೆ ಈ ಸಂಬಂಧ ಅಧಿಕೃತ ಹೇಳಿಕೆ ಬಂದಿಲ್ಲ. 

ತನಿಖಾ ವರದಿಯಲ್ಲಿ ಆತಂಕಕಾರಿ ಮಾಹಿತಿ

ಈ ಕುರಿತು ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕರು (NCSC) ಮತ್ತು ಗೃಹ ಸಚಿವಾಲಯ ಜಂಟಿಯಾಗಿ ತನಿಖೆ ನಡೆಸಿವೆ. ಕೆಲ ಚಿಪ್ ಸೆಟ್‌ ಬಳಕೆ ಬಗ್ಗೆ ತನಿಖಾ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆಯಂತೆ. ಈ ತನಿಖಾ ವರದಿಯನ್ನು ಸರ್ಕಾರ ಮುಂದೆ ಸಲ್ಲಿಕೆ ಮಾಡಲಾಗಿದ್ದು, ಎಲ್ಲಾ ಮಾಹಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರೋದರಿಂದ ಸಾರ್ವಜನಿಕ ಹಳೆ ಸಿಮ್ ಕಾರ್ಡ್ ಬದಲಾವಣೆ ಮಾಡಿಸಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ. 

ಮಿಂಟ್ ವರದಿ ಪ್ರಕಾರ, ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕರು ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು  ವೊಡಾಫೋನ್ ಐಡಿಯಾಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಈ ವೇಳೆ ದೂರಸಂಪರ್ಕ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಸಿಮ್ ಕಾರ್ಡ್‌ ವಿತರಣೆಯಲ್ಲಿನ ನ್ಯೂನತೆ ಮತ್ತು ಸಿಮ್ ಕಾರ್ಡ್ ಬದಲಿಸಲು  ಸಾಧ್ಯವೇ? ಸಾಧ್ಯವಾದ್ರೇ ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆಗಳು ನಡೆದಿವೆ. 

ಇದನ್ನೂ ಓದಿ: 63,000 ಕೋಟಿ ರೂಪಾಯಿಗೆ 26 ರಫೇಲ್ ಎಂ: ಭಾರತ ಯಾಕೆ 25 ವಿಮಾನಗಳಿಗೆ ಖರೀದಿ ನಿಲ್ಲಿಸಿಲ್ಲ?

ರಾಷ್ಟ್ರೀಯ ಭದ್ರತಯೆನ್ನು ಮತ್ತಷ್ಟು ಹೆಚ್ಚಿಸಲು ಹುವಾವೇ ಮತ್ತು ZTEಯಂತಹ ಚೀನಾದ ಉತ್ಪನ್ನಗಳನ್ನು ಕೆಲ ವರ್ಷಗಳ ಹಿಂದೆಯೇ ನಿಷೇಧಿಸಿತ್ತು. ಇದೀಗ ಯಾವುದೇ ರೀತಿಯ ದೂರಸಂಪರ್ಕ ಉಪಕರಣಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಮುನ್ನ ಅವುಗಳನ್ನು ಪರೀಕ್ಷಿಸಿ ಪ್ರಮಾಣೀಕರಿಸಬೇಕು ಎಂಬ ಕಡ್ಡಾಯ ನಿಯಮವನ್ನು ಭಾರತ ಸರ್ಕಾರ ಮಾಡಿದೆ. ಭಾರತದಲ್ಲಿ ಬಳಸಲಾಗುವ ಎಲ್ಲಾ ದೂರಸಂಪರ್ಕ ಉತ್ಪನ್ನ/ಸಾಮಾಗ್ರಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭದ್ರತೆ,  ಕಾರ್ಯಕ್ಷಮೆ, ಗುಣಮಟ್ಟ ಮತ್ತು ರಕ್ಷಣಾ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲನೆ ಮಾಡಬೇಕಾಗುತ್ತದೆ.

ಚೀನಾದ ಚಿಪ್‌ಸೆಟ್ ಭಾರತ ತಲುಪಿದ್ದೇಗೆ?

ಟೆಲಿಕಾಂ ಕಂಪನಿಗಳು ಸಾಮಾನ್ಯವಾಗಿ ವಿಶ್ವಾಸರ್ಹ ಮತ್ತು ಪ್ರಮಾಣೀಕೃತ ಮಾರಾಟಗಾರರಿಂದ ಸಿಮ್ ಕಾರ್ಡ್ ಖರೀದಿ ಮಾಡಲಾಗುತ್ತದೆ. ವಿಯೆಟ್ನಾಂ ಅಥವಾ ತೈವಾನ್‌ಗಳಿಂದ ಚಿಪ್‌ಸೆಟ್ ಖರೀದಿಸಿ, ಭಾರತದಲ್ಲಿ ಅವುಗಳನ್ನು ಜೋಡಿಸಲಾಗುತ್ತದೆ.  ಆದ್ರೆ ಕೆಲ ಮಾರಾಟಗಾರರು ವಿಶ್ವಾಸರ್ಹ ಮೂಲ ಪ್ರಮಾಣೀಕರಣ ದುರುಪಯೋಗಪಡಿಸಿಕೊಂಡಿರೋದು ಬೆಳಕಿಗೆ ಬಂದಿದೆ. ವಿಶ್ವಾಸರ್ಹ ಮೂಲಗಳಿಂದ ಹೇಳಿಕೊಂಡು, ವಾಸ್ತವವಾಗಿ ಚೀನಾದಿಂದ ಚಿಪ್‌ ಸೆಟ್ ಆಮದು ಮಾಡಿಕೊಂಡಿರೋದು ತಿಳಿದು ಬಂದಿದೆ. 

ಯಾವ ಸಿಮ್ ಕಾರ್ಡ್ ಮೇಲೆ ಪರಿಣಾಮ?

ಮಾರ್ಚ್ 2021 ರಲ್ಲಿ, ದೂರಸಂಪರ್ಕ ಇಲಾಖೆ (DoT) ಏಕೀಕೃತ ಪ್ರವೇಶ ಸೇವಾ ಪರವಾನಗಿಯನ್ನು ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯ ಪ್ರಕಾರ, ಭಾರತದ ಟೆಲಿಕಾಂ ಕಂಪನಿಗಳು ವಿಶ್ವಾಸಾರ್ಹವಲ್ಲದ ಮಾರಾಟಗಾರರಿಂದ ಯಾವುದೇ ಉತ್ಪನ್ನ ಖರೀದಿಸುವಂತಿಲ್ಲ. NCSCಗೆ ವಿಶ್ವಾಸಾರ್ಹ ಪೂರೈಕೆದಾರರನ್ನು ಅನುಮೋದಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದ್ರೆ ಕೆಲ ಮಾರಾಟಗಾರು ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೂರೈಕೆದಾರರು ನೀಡಿದ ಚಿಪ್‌ಗಳು ಚೀನಿ ಘಟಕಗಳಿಂದ ಪೂರೈಕೆಯಾಗಿವೆ. 2021ರ ಮೊದಲು ಮತ್ತು ನಂತರದ ಸಿಮ್ ಕಾರ್ಡ್‌ ಮೇಲೆ ಪರಿಣಾಮ ಬೀರಲಿವೆ. 

ಇದನ್ನೂ ಓದಿ: ಹೊಸ ಆಧಾರ್ ಕಾರ್ಡ್ ಆಪ್ ಬಿಡುಗಡೆ: ಇನ್ಮುಂದೆ ಆಧಾರ್ ಕಾರ್ಡ್ ಕೊಂಡೊಯ್ಯುವ ಅಗತ್ಯವಿಲ್ಲ, ಅದು ಹೇಗೆ ಕೆಲಸ ಮಾಡುತ್ತೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!