
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವೈರಿ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲವನ್ನು ನೀಡಿದೆ. ಭಾರತದ ತೀವ್ರ ವಿರೋಧದ ನಡುವೆಯೂ ಐಎಂಎಫ್ ಪಾಕಿಸ್ತಾನಕ್ಕೆ ಹೊಸ ಸಾಲ ನೀಡಿದೆ. ಈ ಸಂಬಂಧ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಜೊತೆಯಲ್ಲಿ ಸಾಲ ನೀಡಿರುವ ಐಎಂಎಫ್ ವಿರುದ್ಧಅಸಾದುದ್ದೀನ್ ಓವೈಸಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಭೂಮಿ, ಮನೆ ಮತ್ತು ಸೈನಿಕರ ಮೇಲೆ ದಾಳಿ ನಡೆಯುತ್ತಿದೆ. ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ 1 ಬಿಲಿಯನ್ ಡಾಲರ್ ಹಣದ ನೆರವು ಸಿಗುತ್ತಿದೆ. ಇದ್ಯಾವ ಅಂತರಾಷ್ಟ್ರೀಯ ನ್ಯಾಯ ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಸರ್ಕಾರ ನಡೆಸಲು ಮತ್ತು ಆರ್ಥಿಕ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ಬರಲ್ಲ. ಇವರು ಕೇವಲ ಭಾರತದ ಶಾಂತಿಯನ್ನು ಕದಡಲು ಮತ್ತು ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಲು ಪ್ರಯತ್ನಿಸುತ್ತಿರುತ್ತಾರೆ ಎಂದು ಪಾಕ್ ವಿರುದ್ಧ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದಕ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನೆಯ ಮುಖ್ಯಸ್ಥರು ಮತ್ತು ಪೊಲೀಸರು ಭಾಗಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಓವೈಸಿ, ಆಪರೇಷನ್ ಸಿಂದೂರ್‌ನಲ್ಲಿ ಲಷ್ಕರ್ ಮತ್ತು ಜೈಶ್ ಭಯೋತ್ಪಾದಕರು ಕೊಲ್ಲಲ್ಪಟ್ಟದ್ದರು. ಈ ಉಗ್ರರು ಭಾರತದಲ್ಲಿ ನಡೆದ ಹಲವು ದಾಳಿಗೆ ಕಾರಣರಾಗಿದ್ದರು. ಈ ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಐಜಿ ಭಾಗಿಯಾಗಿದ್ದಾರೆ. ಹಾಗಾದ್ರೆ ಪಾಕಿಸ್ತಾನ ಯಾವ ರಾಜತಾಂತ್ರಿಕ ನೀತಿಗಳ ಮೇಲೆ ನಡೆಯುತ್ತಿದೆ? ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿ ನಡೆದ ಭಯೋತ್ಪಾದಕ ಸಭೆಗಳನ್ನು ಉಲ್ಲೇಖಿಸಿದ ಅವರು, ಅಮೆರಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ವ್ಯಕ್ತಿಯೂ ಅಲ್ಲಿ ನಮಾಜ್ ಮಾಡುತ್ತಿದ್ದಾನೆ. ಇದು ಭಯೋತ್ಪಾದಕರಿಗೆ ರಕ್ಷಣೆ ನೀಡಿದಂತೆ ಅಲ್ಲವಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: 'ಇಸ್ ಬಾರ್ ಘರ್ ಮೇ ಗುಸ್ ಕೇ ಬೈಠ್ ಜಾನಾ': ಕೇಂದ್ರ ಸರ್ಕಾರಕ್ಕೆ POK ವಶಕ್ಕೆ ಪಡೆಯಲು ಓವೈಸಿ ಟಿಪ್ಸ್
ನಾಗರೀಕರನ್ನು ಗುರಿಯಾಗಿಸಿ ದಾಳಿ
ಭಾರತ ಉಗ್ರರ ತಾಣಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಅದರೆ ಪಾಕಿಸ್ತಾನ ಡ್ರೋನ್‌ಗಳ ಮೂಲಕ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಪೂಂಛ್, ರಜೌರಿ ಮತ್ತು ಶ್ರೀನಗರದಲ್ಲಿ ದಾಳಿಗಳು ನಡೆದಿವೆ. ಪೂಂಛ್ ದಾಳಿಯಲ್ಲಿ ನಾಲ್ಕು ಮುಸ್ಲಿಂ ಮಕ್ಕಳು ಸಾವನ್ನಪ್ಪಿವೆ. ಇಸ್ಲಾಂ ಅನ್ನು ಭಯೋತ್ಪಾದನೆಯೊಂದಿಗೆ ಸಂಯೋಜಿಸಲು ನಿಮಗೆ ಯಾರು ಹಕ್ಕು ನೀಡಿದ್ದಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು. ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಇಸ್ಲಾಂ ಬಗೆಗಿನ ನಿಮ್ಮ ಉದ್ದೇಶಗಳು ಅನುಮಾನಸ್ಪದವಾಗಿರುತ್ತವೆ. ಕ್ಸಿನ್‌ಜಿಯಾಂಗ್‌ನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಯಾಕೆ ನೀವುಗಳು ಮಾತನಾಡಲ್ಲ ಎಂದು ಕೇಳಿದರು.
ಅಂತರರಾಷ್ಟ್ರೀಯ ಉಗ್ರಗಾಮಿ ನಿಧಿ: ಅಂತರರಾಷ್ಟ್ರೀಯ ಹಣಕಾಸು ನಿಧಿಯಾಗಿ ಉಳಿದಿಲ್ಲ, ಅಂತರರಾಷ್ಟ್ರೀಯ ಉಗ್ರಗಾಮಿ ನಿಧಿಯಾಗಿ ಮಾರ್ಪಟ್ಟಿದೆ. ಇದು ನಮ್ಮ ಸೈನಿಕರು ಹುತಾತ್ಮರಾಗುತ್ತಿರುವಾಗ ಭಯೋತ್ಪಾದಕ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ದೂಷಿಸುವುದನ್ನು ನಿಲ್ಲಿಸಿ, ಜಗತ್ತಿಗೆ ಅಪಾಯಕಾರಿಯಾಗಿರುವ ಪಾಕಿಸ್ತಾನದಂತಹ ದೇಶದ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕು. ಪಾಕಿಸ್ತಾನದ ಪರಮಾಣು ಬಾಂಬ್ ಅನ್ನು ನಿಷೇಧಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Operation Sindoor: 'ಜೈ ಹಿಂದ್, ಪಾಕಿಸ್ತಾನ ಸಂಪೂರ್ಣ ನಾಶ ಮಾಡಿ': ಓವೈಸಿ ಟ್ವೀಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ