
ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆ ವೇಳೆ, ತಮ್ಮ ಕುಟುಂಬ ವಕ್ಫ್ ಆಸ್ತಿ ಕಬಳಿಸಿದೆ ಗಂಭೀರ ಆರೋಪಗಳನ್ನು ಮಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. ನನ್ನ ಮೇಲಿನ ಆರೋಪ ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡುವೆ, ಸಾಬೀತುಪಡಿಸಲಾಗದೇ ಹೋದಲ್ಲಿ ಸಚಿವ ರಾಕೂರ್ ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹ ಮಾಡಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಠಾಕೂರ್, ‘ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ದೇವಸ್ಥಾನಗಳಿಂದ ವಾರ್ಷಿಕ 450 ಕೋಟಿ ರು. ಸಂಗ್ರಹವಾಗುತ್ತದೆ. ಆದರೆ ಅದನ್ನು ಎಲ್ಲಿ ಖರ್ಚು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಬೇಕು. ಹೀಗೆ ಎಂದಾದರೂ ಮಸೀದಿ ಅಥವಾ ವಕ್ಫ್ ಮಂಡಳಿಯ ಹಣ ತೆಗೆದುಕೊಂಡಿದ್ದೀರಾ? ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಅನೇಕ ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ. ಕರ್ನಾಟಕದಲ್ಲಿ ನಡೆದ ಭೂ ಅಕ್ರಮದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ (ಖರ್ಗೆ) ಹೆಸರೂ ಕೇಳಿಬರುತ್ತಿದೆ’ ಎಂದು ಆರೋಪಿಸಿದ್ದರು.
ಥಾಯ್ಲೆಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಹೆಸರು ಹೇಳದೆಯೇ ಚಾಟಿ!
ಈ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಠಾಕೂರ್ ತಮ್ಮ ಹೇಳಿಕೆ ಹಿಂಪಡೆದಿದ್ದರು.
ಈ ಕುರಿತು ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ‘60 ವರ್ಷದ ರಾಜಕೀಯ ಜೀವನದಲ್ಲಿ ಯಾರೂ ಹೀಗೆ ನನ್ನತ್ತ ಬೆರಳು ತೋರಿಸಿಲ್ಲ. ನಿನ್ನೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ಬಳಿಕ ಠಾಕೂರ್ ತಮ್ಮ ಹೇಳಿಕೆಯನ್ನು ಹಿಂಪಡೆದರಾದರೂ ಅದು ಎಲ್ಲೆಡೆ ಪ್ರಸಾರವಾಗಿದೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಅಂತೆಯೇ, ‘ನಾನು ಸಂಸದರಿಂದ ಕ್ಷಮೆ ಬಯಸುತ್ತೇನೆ. ಠಾಕೂರ್ ಮಾಡಿದ ಆರೋಪ ಸಾಬೀತುಪಡಿಸಲು ಆಗದಿದ್ದಲ್ಲಿ ಅವರು ಸಂಸತ್ತಿನಲ್ಲಿರಲು ಅರ್ಹರಲ್ಲಿ. ಒಂದೊಮ್ಮೆ ಅದು ಸಾಬೀತಾದಲ್ಲಿ ನಾನು ರಾಜೀನಾಮೆ ನೀಡುವೆ. ನಾನೆಂದೂ ಬಾಗುವುದಿಲ್ಲ’ ಎಂದರು.
ಖರ್ಗೆ ಹೇಳಿದ್ದೇನು?
- ನನ್ನ ಕುಟುಂಬ ವಕ್ಫ್ ಭೂಮಿ ಕಬಳಿಸಿದೆ ಎಂದು ಬಿಜೆಪಿಗ ಠಾಕೂರ್ ಆರೋಪ
- ನನ್ನ ಗೌರವಕ್ಕೆ ಧಕ್ಕೆ ಆಗಿದೆ, ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ
- ಠಾಕೂರ್ ಆರೋಪ ಸಾಬೀತು ಮಾಡಲಿ, ಇಲ್ಲವೇ ಅವರೆ ರಾಜೀನಾಮೆ ನೀಡಲಿ
- ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಚರ್ಚೆ ವೇಳೆ ಪ್ರತಿಪಕ್ಷ ನಾಯಕನ ಆಕ್ರೋಶ
ಠಾಕೂರ್ ಆರೋಪವೇನು?
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಅನೇಕ ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ. ಕರ್ನಾಟಕದಲ್ಲಿ ನಡೆದ ಭೂ ಅಕ್ರಮದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ (ಖರ್ಗೆ) ಹೆಸರೂ ಕೇಳಿಬರುತ್ತಿದೆ.
- ಅನುರಾಗ್ ಠಾಕೂರ್, ಬಿಜೆಪಿ ಸಂಸದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ