
ಆಗ್ರಾ: ದೂರ ತೆರಳುತ್ತಿದ್ದ ಮಗಳನ್ನು ರೈಲು ಹತ್ತಿಸಲು ಹೋದ ತಂದೆ ಮಗಳನ್ನು ಬಿಟ್ಟು ರೈಲಿನಿಂದ ಇಳಿಯುವ ವೇಳೆ ಚಲಿಸುವ ರೈಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ಸಮೀಪದ ಆಗ್ರಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಮೃತ ವ್ಯಕ್ತಿಯನ್ನು ಡಾ. ಲಖನ್ ಸಿಂಗ್ ಗಲವ್ ಎಂದು ಗುರುತಿಸಲಾಗಿದೆ. ಇವರು ಲ್ಯಾಪರೊಸ್ಕೋಪಿಕ್ ಸರ್ಜನ್ (Laparoscopic surgeon) ಆಗಿದ್ದಾರೆ. ಇವರ ನಿಧನಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
ಮಗಳನ್ನು ಬಿಡಲು ರೈಲು ನಿಲ್ದಾಣಕ್ಕೆ ತೆರಳಿದ ತಂದೆ ಡಾಕ್ಟರ್ ಲಖನ್ ಸಿಂಗ್ ಗಲವ್ ಅವರು ರೈಲು ಚಲಿಸಲು ಆರಂಭಿಸಿದ ನಂತರ ಗಡಿಬಿಡಿಯಾಗಿ ರೈಲಿನಿಂದ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ರೈಲಿನ ಚಲನೆ ವೇಗ ಪಡೆದುಕೊಂಡಿದ್ದು, ಲಖನ್ ಸಿಂಗ್ ಇಳಿಯುವ ವೇಳೆ ಕೆಳಗೆ ಬಿದ್ದು, ಫ್ಲಾಟ್‌ಫಾರ್ಮ್ ಹಾಗೂ ರೈಲಿನ ಮಧ್ಯೆ ಇರುವ ಸ್ವಲ್ಪ ಜಾಗದಲ್ಲಿ ಕೆಳಗೆ ಬಿದ್ದಿದ್ದು, ಅವರ ಮೇಲೆ ರೈಲು ಚಲಿಸಿದೆ. ಪರಿಣಾಮ ಅವರ ದೇಹ ಎರಡು ತುಂಡಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ಈ ದುರಂತ ನಡೆದಿದ್ದು, ಘಟನೆಯ ದೃಶ್ಯ ಸ್ಟೇಷನ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸಿ ವೈದ್ಯ ಲಖನ್ ಸಿಂಗ್ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಮಧ್ಯೆ ಇರುವ ಸಣ್ಣ ಜಾಗದಲ್ಲಿ ಕೆಳಗೆ ಬೀಳುವುದನ್ನು ಕಾಣಬಹುದಾಗಿದೆ. ಈ ವೇಳೆ ರೈಲು ವೈದ್ಯರ ಮೇಲೆ ಚಲಿಸಿದ್ದು ಅವರ ದೇಹ ಎರಡು ತುಂಡಾಗಿದೆ.
ಡಾ. ಲಖನ್ ಸಿಂಗ್ ಗಲವ್ ಅವರು ನಗರದ ಖ್ಯಾತ ವೈದ್ಯರಾಗಿದ್ದು, ಅವರು ಈ ರೀತಿ ಆಕಾಲಿಕವಾಗಿ ನಿಧನರಾದ ಸುದ್ದಿ ತಿಳಿದು ಅಲ್ಲಿನ ಜನ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ದುರಂತ ಸಾವಿಗೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸೂಚಿಸಿದ್ದಾರೆ. ಚಲಿಸುವ ರೈಲನ್ನು ಹತ್ತಬೇಡಿ ಹಾಗೂ ಇಳಿಯಬೇಡಿ ಎಂದು ರೈಲ್ವೆ ಇಲಾಖೆ ರೈಲು ನಿಲ್ದಾಣಗಳಲ್ಲಿ ಮೈಕ್‌ನ ಮೂಲಕ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಸಹ ಹೀಗೆ ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಹೋಗಿ ಜನ ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಇಲ್ಲಿ ಸುಶಿಕ್ಷಿತರೆನಿಸಿದ ವೈದ್ಯರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ