ಸದಾ ಪರಸ್ಪರ ಆರೋಪ ಪ್ರತ್ಯಾರೋಪಗಳಿಂದಲೇ ಒಬ್ಬರ ಮೇಲೊಬ್ಬರು ಕೆಸರೆರುಚುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ನಿಯೋಜಿತ ವಿಪಕ್ಷ ನಾಯಕ ರಾಹುಲ್ ಗಾಂಧಿ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಅಚ್ಚರಿಗೆ ಕಾರಣವಾದರು.
ನವದೆಹಲಿ: ಇಂದು ಲೋಕಸಭೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು, ಸದನದ ಹೊರಗೆ ಚುನಾವಣಾ ಸಮಾವೇಶಗಳಲ್ಲಿ ಸದಾ ಪರಸ್ಪರ ಆರೋಪ ಪ್ರತ್ಯಾರೋಪಗಳಿಂದಲೇ ಒಬ್ಬರ ಮೇಲೊಬ್ಬರು ಕೆಸರೆರುಚುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ನಿಯೋಜಿತ ವಿಪಕ್ಷ ನಾಯಕ ರಾಹುಲ್ ಗಾಂಧಿ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಅಚ್ಚರಿಗೆ ಕಾರಣವಾದರು. ಹೊಸದಾಗಿ ಲೋಕಸಭಾ ಸ್ಪೀಕರ್ ಆಗಿ ನೇಮಕವಾಗಿರುವ ಓಂ ಬಿರ್ಲಾ ಅವರ ನೇಮಕದ ವೇಳೆ ಈ ಅಚ್ಚರಿ ಘಟನೆ ನಡೆಯಿತು.
18ನೇ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್‌ನಲ್ಲಿ ಪರಸ್ಪರ ಶೇಕ್ ಹ್ಯಾಂಡ್ ಮಾಡಿದ್ದರು. ಇಬ್ಬರು ಜೊತೆಯಾಗಿ ನೂತನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ವಾಗತಿಸುವ ವೇಳೆ ಈ ಘಟನೆ ನಡೆಯಿತು. ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕನಾಗಿರುವ ಗಾಂಧಿ ಕುಟುಂಬದ ಮೂರನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ 1999ರಿಂದ 2004ರವರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕಿಯಾಗಿದ್ದರು. ಅದಕ್ಕೂ ಮೊದಲು ರಾಹುಲ್ ತಂದೆ ರಾಜೀವ್ ಗಾಂಧಿ 1989ರಿಂದ 1990ರವರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು.
ಇತ್ತ ಲೋಕಸಭೆ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ಎಂಪಿ ಕೆ ಸುರೇಶ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ ಧ್ವನಿಮತಕ್ಕೆ ಮತ ಹಾಕಲು ಮುಂದಾಗದ ಕಾರಣ ಹಂಗಾಮಿ ಸ್ಪೀಕರ್ ಭತೃಹರಿ ಮಹ್ತಾಬ್ ಅವರು ಸ್ಪೀಕರ್ ಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡಿದರು. ಇದಾದ ನಂತರ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಅವರು ಲೋಕಸಭೆಯ ಮೊದಲ ಸೀಟಿನಲ್ಲಿ ಕುಳಿತಿದ್ದ ಓಂ ಬಿರ್ಲಾ ಅವರ ಬಳಿಗೆ ಬಂದು ಅವರನ್ನು ಲೋಕಸಭೆ ಸ್ಪೀಕರ್ ಕುಳಿತುಕೊಳ್ಳುವ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ರಾಹುಲ್ ಗಾಂಧಿ ಈ ನಾಯಕರಿಗೆ ಸಾಥ್ ನೀಡಿದರು.
ಈ ಸ್ಥಾನಕ್ಕೆ 2ನೇ ಬಾರಿ ನೀವು ಆಯ್ಕೆ ಆಗಿರುವುದು ಬಹಳ ಗೌರವದ ವಿಚಾರ ಎಂದು ಪ್ರಧಾನಿ ಮೋದಿ ಹೊಸದಾಗಿ ಆಯ್ಕೆಯಾದ ಓಂ ಬಿರ್ಲಾ ವರಿಗೆ ಅಭಿನಂದನೆ ಸಲ್ಲಿಸುವ ವೇಳೆ ಹೇಳಿದರು. ನಿಮಗೆ ಇಡೀ ಸದನದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಮುಂದಿನ ಐದು ವರ್ಷಗಳ ಕಾಲ ನಿಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿರುತ್ತೇವೆ ನಿಮ್ಮ ಸಿಹಿಯಾದ ನಗು ಇಡೀ ಸದನವನ್ನು ಖುಷಿಯಾಗಿಡುತ್ತದೆ ಎಂದು ಹೇಳಿದರು. ಓಂ ಬಿರ್ಲಾ ಅವರು ಪ್ರಧಾನಿ ಮೋದಿ ಎರಡನೇ ಅವಧಿ ವೇಳೆ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಆಗಿ ನೇಮಕವಾಗಿದ್ದರು.
ಇತ್ತ ರಾಹುಲ್ ಗಾಂಧಿ ಕೂಡ ನೂತನ ಸ್ಪೀಕರ್‌ಗೆ ಅಭಿನಂದನೆ ಸಲ್ಲಿಸಿದ್ದು, ಸಂಪೂರ್ಣ ವಿರೋಧ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ರಾಹುಲ್ ಹೇಳಿದರು. ನೀವು ಜನರ ಧ್ವನಿಯ ಕೊನೆಯ ತೀರ್ಪುಗಾರ ಸರ್ಕಾರ ರಾಜಕೀಯ ಶಕ್ತಿಯನ್ನು ಹೊಂದಿರಬಹುದು. ಆದರೆ ವಿರೋಧ ಪಕ್ಷ ಕೂಡ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ವಿರೋಧಪಕ್ಷವೂ ನಿಮಗೆ ಕೆಲಸದಲ್ಲಿ ಸಹಾಯ ಮಾಡಲಿದೆ. ನೀವು ನಮಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡುವಿರಿ ಎಂಬ ವಿಶ್ವಾಸ ನನಗಿದೆ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.
ಭಾರತದಲ್ಲಿ ವಿರೋಧಪಕ್ಷದ ನಾಯಕನ ಸ್ಥಾನವೂ 1969ರಿಂದ ಆರಂಭವಾಗಿದ್ದು, ರಾಮ್ ಸುಹಾಗ್ ಸಿಂಗ್ ಮೊದಲ ಬಾರಿ ವಿರೋಧ ಪಕ್ಷದ ಹುದ್ದೆಯನ್ನು ಅಲಂಕರಿಸಿದ್ದರು. ಅದಾದ ನಂತರ ಸಂಸದೀಯ ಪ್ರಜಾಪ್ರಭುತ್ವದ ಮೂಲಾಧಾರವಾಗಿ ಬೆಳೆದು ಬಂದಿದ್ದು, ನಿರಂತರವಾಗಿ ಮುಂದುವರೆದಿದೆ. ವಿರೋಧ ಪಕ್ಷದ ನಾಯಕರು ಸರ್ಕಾರದ ಪ್ರಮುಖ ತನಿಖಾ ಸಂಸ್ಥೆಗಳಾದ ಸಿಬಿಐ, ಕೇಂದ್ರ ಚುನಾವಣಾ ಆಯೋಗ, ಕೇಂದ್ರ ವಿಚಕ್ಷಣ ದಳ, ಮಾನವ ಹಕ್ಕುಗಳ ಆಯೋಗ, ಲೋಕಾಯುಕ್ತ ಮುಂತಾದ ಅಧಿಕಾರಿಗಳ ನೇಮಕದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
| BJP MP Om Birla occupies the Chair of Lok Sabha Speaker after being elected as the Speaker of the 18th Lok Sabha.
Prime Minister Narendra Modi, LoP Rahul Gandhi and Parliamentary Affairs Minister Kiren Rijiju accompany him to the Chair. pic.twitter.com/zVU0G4yl0d