ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ಇದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ (ಮೇ.10): ಉತ್ತರ ಭಾರತೀಯರು ಬಿಳಿಯರ ರೀತಿ ಹಾಗೂ ದಕ್ಷಿಣ ಭಾರತೀಯರು ಆಫ್ರಿಕನ್ನರ ರೀತಿ ಇದ್ದಾರೆಂಬ ವರ್ಣಭೇದದ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಸಾಗರೋತ್ತರ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ಇದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷವೇ ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರೂ ಅಧೀರ್ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಮ್ಮಲ್ಲಿ ಪ್ರೋಟೋ ಆಸ್ಟ್ರೇಲಾಯ್ಡ್ಸ್, ಮೊಂಗೋಲಾಯ್ಡ್ಸ್, ನೆಗ್ರಿಟಾ (ನೀಗ್ರೋ) ಹೀಗೆ ಬೇರೆ ಬೇರೆ ರೀತಿಯ ಜನರಿದ್ದಾರೆ. ಇದು ಇರುವುದೇ ಹೀಗೆ. ನಮ್ಮ ದೇಶದ ಪ್ರಾದೇಶಿಕ ಲಕ್ಷಣಗಳು ಬೇರೆ ಬೇರೆ ರೀತಿ ಇವೆ. ಅದರ ಬಗ್ಗೆ ಯಾರಾದರೂ ಮಾತನಾಡಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಕೆಲವರು ಬಿಳಿ, ಕೆಲವರು ಕಪ್ಪು ಎಂಬುದು ವಾಸ್ತವ’ ಎಂದು ಅಧೀರ್ ರಂಜನ್ ಹೇಳಿದ್ದಾರೆ.
ಚುನಾವಣೆ ಕೃತಪ್ಪುತ್ತಿದೆ, 4 ದಿನದಲ್ಲಿ ಮೋದಿ ಹೊಸ ನಾಟಕ: ರಾಹುಲ್ ಗಾಂಧಿ
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ಅಧೀರ್ ರಂಜನ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಬಯಲಾಗಿದೆ. ಪದಗಳು ಸ್ಯಾಮ್ ಪಿತ್ರೋಡಾ ಅವರದ್ದಾದರೂ ಯೋಚನೆ ಕಾಂಗ್ರೆಸ್‌ನದು. ಭಾರತೀಯರನ್ನು ಚೀನೀಯರು, ಆಫ್ರಿಕನ್ನರು, ನೆಗ್ರಿಟಾಗಳು, ಕರಿಯರು ಎಂದು ಕರೆಯುವುದು ಅಂಕಲ್ ಸ್ಯಾಮ್ ಅವರ ಹೇಳಿಕೆಯನ್ನು ಬೆಂಬಲಿಸಿದಂತೆ ಅಲ್ಲವೇ? ಹಿಂದೆ ರಾಷ್ಟ್ರಪತಿಯನ್ನು ಅಧೀರ್ ರಂಜನ್ ರಾಷ್ಟ್ರಪತ್ನಿ ಎಂದು ಕರೆದಿದ್ದರು. ಸ್ಯಾಮ್ ಪಿತ್ರೋಡಾರನ್ನು ವಜಾಗೊಳಿಸಿದಂತೆ ಇವರನ್ನೂ ಕಾಂಗ್ರೆಸ್ ಪಕ್ಷ ವಜಾಗೊಳಿಸುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.