Padma Awards 2024: ಚಿರಂಜೀವಿ, ವೈಜಯಂತಿಮಾಲಾ ಸೇರಿ ಐವರು ಕನ್ನಡಿಗರಿಗೆ ರಾಷ್ಟ್ರಪತಿಯಿಂದ ಪದ್ಮ ಪ್ರಶಸ್ತಿ ಪ್ರದಾನ

By Kannadaprabha NewsFirst Published May 10, 2024, 8:25 AM IST
Highlights

2024ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದ 9 ಮಂದಿ ಕನ್ನಡಿಗರ ಪೈಕಿ ಐವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಪ್ರಶಸ್ತಿ ಪ್ರದಾನ ಮಾಡಿದರು. 

ನವದೆಹಲಿ (ಮೇ.10): 2024ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದ 9 ಮಂದಿ ಕನ್ನಡಿಗರ ಪೈಕಿ ಐವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಪ್ರಶಸ್ತಿ ಪ್ರದಾನ ಮಾಡಿದರು. ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನುಪಮಾ ಹೊಸಕೆರೆ, ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಧರ ಮಕ್ಕಂ ಕೃಷ್ಣಮೂರ್ತಿ, ಕೆ.ಎಸ್‌. ರಾಜಣ್ಣ ಅವರಿಗೆ ಸಾಮಾಜಿಕ ಸೇವೆ, ಸೋಮಣ್ಣ ಅವರಿಗೆ ಸಮಾಜಕಾರ್ಯ ಹಾಗೂ ಶಶಿ ಸೋನಿ ಅವರಿಗೆ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಪರಿಗಣಿಸಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಚಿರಂಜೀವಿ, ವೈಜಯಂತಿ ಮಾಲಾ ಸೇರಿ ಗಣ್ಯರಿಗೆ ಪದ್ಮಪ್ರಶಸ್ತಿ ಪ್ರದಾನ: ಇನ್ನು ಹಿರಿಯ ನಟಿ ವೈಜಯಂತಿಮಾಲಾ, ತೆಲುಗು ನಟ ಚಿರಂಜೀವಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ಇದರ ಜೊತೆಗೆ, ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ. ಫಾತಿಮಾ ಬೀವಿ ಮತ್ತು 'ಬಾಂಬೆ ಸಮಾಚಾರ್' ಮಾಲೀಕ ಹೊರ್ಮುಸ್ಜಿ ಎನ್ ಕಾಮಾ ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 90 ವರ್ಷದ ವೈಜಯಂತಿಮಾಲಾ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ ನೀಡಿದರೆ, ಬೀವಿ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.  

ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮ ಪ್ರಶಸ್ತಿಗಳನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ವಿಭಾಗಗಳು ಅಥವಾ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 

Padma Awards 2024: ವೆಂಕಯ್ಯನಾಯ್ಡು, ನಟ ಮಿಥುನ್‌ ಚಕ್ರವರ್ತಿ, ಗಾಯಕಿ ಉಷಾ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ ಮತ್ತು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. 2024ರಲ್ಲಿ ಎರಡು ಜೋಡಿ ಪ್ರಕರಣಗಳು ಸೇರಿದಂತೆ 132 ಪದ್ಮ ಪ್ರಶಸ್ತಿಗಳ ಆಯ್ಕೆಯನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಈ ಪಟ್ಟಿಯು 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದವರಲ್ಲಿ ಮೂವತ್ತು ಮಂದಿ ಮಹಿಳೆಯರಿದ್ದಾರೆ.

click me!