
ನವದೆಹಲಿ (ಅ.3): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಂಸದ ಹೇಮಂತ್ ಪಾಟೀಲ್ ಮಂಗಳವಾರ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 31 ರೋಗಿಗಳು ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಶೌಚಾಲಯ ಕ್ಲೀನ್ ಆಗಿರದೇ ಇದ್ದದ್ದನ್ನು ಕಂಡ ಅವರು, ಆಸ್ಪತ್ರೆಯ ಡೀನ್‌ಗೆ ಪೊರಕೆ ಹಿಡಿದು ಕ್ಲೀನ್ ಮಾಡುವಂತೆ ತಿಳಿಸಿದ್ದಾರೆ. ಹೇಮಂತ್ ಪಾಟೀಲ್ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ಇತರ ಸದಸ್ಯರು ನೋಡುತ್ತಿರುವಂತೆ, ಡೀನ್ ಪೊರಕೆ ಹಿಡಿದು ಶೌಚಾಲಯ ಗುಡಿಸಿದ ವಿಡಿಯೋ ವೈರಲ್ ಆಗಿದೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರೇ ಹೊಣೆಗಾರರಾಗಬೇಕು ಮತ್ತು ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಪಾಟೀಲ್ ಒತ್ತಾಯಿಸಿದರು.
ಪಾಟೀಲ್ ಭೇಟಿ ವೇಳೆ ಆಡಳಿತ ಮಂಡಳಿ ಸದಸ್ಯರು ಮತ್ತು ಪೊಲೀಸರೊಂದಿಗೆ ಆಸ್ಪತ್ರೆ ಸುತ್ತು ಹಾಕಿದರು. ಅವರು ಕೆಲವು ರೋಗಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಡೀನ್‌ನ ಶೌಚಾಲಯದ ಬ್ಲಾಕ್‌ಗೆ ಭೇಟಿ ನೀಡಿದಾಗ ಅಲ್ಲಿನ ಟಾಯ್ಲೆಟ್‌ಗಳು ತಿಂಗಳುಗಟ್ಟಲೆ ಬಳಕೆಯಾಗದೆ ಕೊಳಚೆ ತುಂಬಿರುವುದು ಕಂಡು ಬಂದಿದೆ. ನಂತರ ಮಾತನಾಡಿದ ಅವರು, ಮಕ್ಕಳ ಬ್ಲಾಕ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಮಹಿಳೆಯರ ಬ್ಲಾಕ್‌ನಲ್ಲಿ ಮದ್ಯದ ಬಾಟಲಿಗಳು ಬಿದ್ದುಕೊಂಡಿದ್ದವು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಾಟೀಲ್ ಮಾತನಾಡಿ, ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ಬಿದ್ದಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಆಸ್ಪತ್ರೆಯ ಡೀನ್ ಹಾಗೂ ವಿಭಾಗದ ಮುಖ್ಯಸ್ಥರ ವಿರುದ್ಧ ಮುಖ್ಯಮಂತ್ರಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. "ಯಾವುದೇ ಕ್ರಮವಿಲ್ಲದೆ, ಆಸ್ಪತ್ರೆಗೆ ಯಾವುದೇ ಸುಧಾರಣೆ ಮಾಡಲು ಸಾಧ್ಯವಿಲ್ಲ" ಎಂದು ಶಿವಸೇನೆ ಸಂಸದ ಹೇಳಿದ್ದಾರೆ.
24 ಗಂಟೆಯ ಒಳಗೆ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಸೇರಿದಂತೆ 24 ಮಂದಿ ಸಾವು!
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಔಷಧದ ಕೊರತೆ ಇಲ್ಲ. ಸಾವನ್ನಪ್ಪಿದ ರೋಗಿಗಳಾದ ಐವರು ಪುರುಷರು ಹಾಗೂ ಏಳು ಮಹಿಳೆಯರು ತಮ್ಮ ಕೊನೆ ದಿನಗಳಲ್ಲಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಐವರು ಪುರುಷರು ಹಾಗೂ 7 ಮಹಿಳೆಯರು ಸೇರಿ 12 ಮಂದಿ ವಯಸ್ಕರರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ನಾಲ್ವರು ಹೃದಯಾಘಾತದಿಂದ ಬಳಲುತ್ತಿದ್ದರೆ, ಇನ್ನೊಬ್ಬರು ಹಾವು ಕಡಿತದಿಂದ, ಇನ್ನಿಬ್ಬರು ಮೂತ್ರಪಿಂಡ ಕಾಯಿಲೆಯಿಂದ ಮತ್ತು ಮೂರು ಅಪಘಾತ ಪ್ರಕರಣಗಳಲ್ಲಿ ದಾಖಲಾಗಿದ್ದರು. ಇವರೆಲ್ಲರೂ ಕೊನೆಯ ಹಂತದಲ್ಲಿದ್ದರು. ಇನ್ನು ನಾಲ್ವರು ಮಕ್ಕಳನ್ನು ಸಹ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಬಂದಿದ್ದರು ಎಂದು ನಾಂದೇಡ್‌ನ ಶಂಕರರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಹೇಳಿಕೆ ನೀಡಿದೆ.
ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ
ಸಾವಿನ ಬಗ್ಗೆ ವಿವರವಾದ ತನಿಖೆ ನಡೆಸುವುದಾಗಿ ಶಿಂಧೆ ಭರವಸೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ನಡುವೆ ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರೀಫ್ ಮಾತನಾಡಿ, ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ