
ನವದೆಹಲಿ (ಆ. 25): ಸುಮಾರು 30 ವರ್ಷಗಳ ಕಾಯುವಿಕೆಯ ನಂತರ ಕಾಶ್ಮೀರವು ತನ್ನ ಮೊದಲ ಮಲ್ಟಿಪ್ಲೆಕ್ಸ್ ಅನ್ನು ಹೊಂದಲು ಸಿದ್ಧವಾಗಿದೆ. ಶ್ರೀನಗರದಲ್ಲಿ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚಿ ಮೂರು ದಶಕಗಳು ಕಳೆದಿವೆ. ಇಷ್ಟು ವರ್ಷಗಳವರೆಗೆ ಕಣಿವೆ ರಾಜ್ಯದ ಜನರಿಗೆ ಸಿನಿಮಾ ಮಂದಿರಕ್ಕೆ ಹೊಕ್ಕು ಚಿತ್ರವನ್ನು ವೀಕ್ಷಣೆ ಮಾಡುವ ಮನರಂಜನೆಯೇ ಇಲ್ಲದಂತಾಗಿತ್ತು. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸಿದ ಮೂರು ವರ್ಷಗಳ ನಂತರ ಕಾಶ್ಮೀರದಲ್ಲಿ ಮಲ್ಟಿಪ್ಲೆಕ್ಸ್ ಸ್ಥಾಪನೆಯಾಗಿದೆ. ಭಯೋತ್ಪಾದನೆ ಹಾಗೂ ಇತರ ದಾಳಿಗಳ ಕಾರಣದಿಂದಾಗಿ 1990ರಲ್ಲಿ ಕಣಿವೆ ರಾಜ್ಯದಲ್ಲಿನ ಎಲ್ಲಾ ಸಿನಿಮಾ ಥಿಯೇಟರ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹೊಸ ಮಲ್ಟಿಪ್ಲೆಕ್ಸ್ ಅನ್ನು ಸೆಪ್ಟೆಂಬರ್‌ನಿಂದ ಸಾರ್ವಜನಿಕರಿಗೆ ತೆರೆಯಲಾಗುವುದು. ಇದು ಮೂರು ಪರದೆಗಳನ್ನು ಹೊಂದಿದ್ದು, ಪ್ರತಿಯೊಂದೂ ಇತ್ತೀಚಿನ ಧ್ವನಿ ವ್ಯವಸ್ಥೆಗಳು ಮತ್ತು ಆರಾಮದಾಯಕ ಆಸನ ಸೌಲಭ್ಯಗಳನ್ನು ಹೊಂದಿದೆ. “ನಾವು ಕಾಶ್ಮೀರ ಕಣಿವೆಯಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಅನ್ನು ಪ್ರಾರಂಭಿಸುತ್ತಿದ್ದೇವೆ, ಇದರಲ್ಲಿ ಮೂರು ಆಡಿಟೋರಿಯಂಗಳು ತಲಾ 520 ಆಸನಗಳನ್ನು ಹೊಂದಿವೆ. ಬೆಳ್ಳಿತೆರೆಯನ್ನೂ ಬಳಸಲಾಗುತ್ತಿದೆ. ರಿಕ್ಲೈನರ್ ಸೀಟುಗಳು ಮತ್ತು ಸಾಮಾನ್ಯ ಕುರ್ಚಿಗಳನ್ನು ಸಹ ಅದರಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಮಲ್ಟಿಪ್ಲೆಕ್ಸ್ ಮಾಲೀಕ ವಿಕಾಸ್ ಧರ್ ಹೇಳಿದ್ದಾರೆ.
ಕಾಶ್ಮೀರದ ಹೊರಗೆ ಬೇರೆಡೆ ಜನರಿಗೆ ಸಿಗುವ ಸೌಲಭ್ಯಗಳನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಅಳವಡಿಸಲಾಗಿದೆ. ಇಲ್ಲಿ ವಾಸಿಸುವ ಜನರಿಗೆ ದಶಕಗಳಿಂದ ಮನರಂಜನೆಯ ಮಾರ್ಗಗಳಿಲ್ಲ ಎಂದು ನಾನು ಗಮನಿಸಿದ್ದೇನೆ. ಆದ್ದರಿಂದ ನನ್ನ ಮನಸ್ಸಿಗೆ ಇಲ್ಲಿ ಮಲ್ಟಿಫ್ಲೆಕ್ಸ್ ಅನ್ನು ತೆರೆಯುವ ಯೋಚನೆ ಬಂದಿತ್ತು. ಅದರ ಬೆನ್ನಲ್ಲಿಯೇ ಈ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಧರ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಲಡಾಖ್ ಪ್ರವಾಸಕ್ಕೆ ಹೋಗ್ಲೇ ಬೇಕು!
ಮಲ್ಟಿಪ್ಲೆಕ್ಸ್‌ನಲ್ಲಿ ರಿಯಾಯಿತಿ ಕೌಂಟರ್‌ಗಳು, ಫುಡ್ ಕೋರ್ಟ್‌ಗಳು ಮತ್ತು ಇತರ ಮನರಂಜನಾ ಸೌಲಭ್ಯಗಳು ಇರಲಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಸೆಪ್ಟೆಂಬರ್‌ನಲ್ಲಿ ಜನರು ದಶಕಗಳ ನಂತರ ಶ್ರೀನಗರದ ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. "ನಾವು ಕಾಶ್ಮೀರಿ ಜನರ ಅಭಿರುಚಿಯ ಚಿತ್ರಗಳನ್ನು ನಾವು ಆಯ್ಕೆ ಮಾಡುತ್ತೇವೆ, ಜೊತೆಗೆ ಅದು ಯಶಸ್ವಿ ಉದ್ಯಮವಾಗಲಿದೆ ಎಂಬ ಭರವಸೆಯಲ್ಲಿದ್ದೇನೆ. ನಾನು ಮಲ್ಟಿಪ್ಲೆಕ್ಸ್ ಅನ್ನು ನಿರ್ಮಿಸುತ್ತಿರುವುದರಿಂದ 10 ಕ್ಕೂ ಹೆಚ್ಚು ಜನರು ಅದರ ಬಗ್ಗೆ ವಿಚಾರಿಸಿದ್ದಾರೆ ಮತ್ತು ಯೋಚಿಸುತ್ತಿದ್ದಾರೆ ಎಂದು ಧರ್ ಹೇಳಿದರು. ಇನ್ನಷ್ಟು ಹೊಸ ಸಿನಿಮಾ ಮಂದಿರಗಳು ಆರಂಭವಾಗಬಹುದು ಎಂದು ಮಾಲೀಕರು ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಸಾಕಷ್ಟು ಸಹಾಯ ಮಾಡಿದೆ. ಇದು ಬಾಲಿವುಡ್ ಮತ್ತು ಕಾಶ್ಮೀರದ ನಡುವೆ ಹೊಸ ಸಂಪರ್ಕವನ್ನು ಪ್ರಾರಂಭಿಸಲಿದೆ ಎಂದು ಧರ್ ಹೇಳಿದರು. ಇದು ಕಾಶ್ಮೀರದಲ್ಲಿ ಹೊಸ ಯುಗದ ಆರಂಭವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ
ಕಾಶ್ಮೀರವು 1990 ರ ಆರಂಭದವರೆಗೂ ಡಜನ್‌ಗಟ್ಟಲೆ ಸಿನಿಮಾ ಹಾಲ್‌ಗಳನ್ನು ಹೊಂದಿತ್ತು, ಆದರೆ ಭಯೋತ್ಪಾದನೆಯ ಆಗಮನದೊಂದಿಗೆ ಕಣಿವೆಯಲ್ಲಿನ ಎಲ್ಲಾ ಚಿತ್ರಮಂದಿರಗಳನ್ನು ಮುಚ್ಚಲಾಯಿತು. 1999-2000 ರ ಅವಧಿಯಲ್ಲಿ ಸರ್ಕಾರವು ಕೆಲವು ಚಿತ್ರಮಂದಿರಗಳನ್ನು ಪುನಃ ತೆರೆಯಲು ಪ್ರಯತ್ನಿಸಿತು ಆದರೆ ನಂತರದ ಭಯೋತ್ಪಾದಕ ದಾಳಿಗಳು ಚಿತ್ರಮಂದಿರಗಳನ್ನು ಮುಚ್ಚುವಂತೆ ಮಾಡಿದವು. ಧಾರ್ ಕುಟುಂಬವು ಕಣಿವೆಯಲ್ಲಿ 'ಬ್ರಾಡ್‌ವೇ' ಎಂಬ ಹಳೆಯ ಚಿತ್ರಮಂದಿರಗಳಲ್ಲಿ ಒಂದನ್ನು ಹೊಂದಿತ್ತು. ಇದನ್ನು ಸ್ವಲ್ಪ ಸಮಯದವರೆಗೆ ತೆರೆಯಲಾಯಿತು ಮತ್ತು ನಂತರ ಶಾಶ್ವತವಾಗಿ ಮುಚ್ಚಲಾಯಿತು. ಈ ಸಿನಿಮಾ ಹಾಲ್‌ಗಳಿಗೆ ಭದ್ರತೆಯೇ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಮಲ್ಟಿಪ್ಲೆಕ್ಸ್ ಮಾಲೀಕರು ಯುವಕರ ಮನರಂಜನೆಗಾಗಿ ಈ ರೀತಿ ಮಾಡುತ್ತಿರುವುದರಿಂದ ತಮಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ