ಭೂಮಿ ಮೇಲೆ ಬದುಕಿದ್ದು ಬರೀ 16 ತಿಂಗಳು, ಅಂಗಾಂಗ ದಾನದಿಂದ ಇಬ್ಬರ ಬಾಳಿಗೆ ಬೆಳಕಾಯ್ತು!

By Santosh NaikFirst Published Aug 25, 2022, 9:08 PM IST
Highlights

ಹುಟ್ಟಿ ಬರೀ 16 ತಿಂಗಳಷ್ಟೇ ಆಗಿದ್ದ ಆ ಮಗು, ಇನ್ನೂ ಪ್ರಪಂಚವನ್ನೇ ಸರಿಯಾಗಿ ಕಂಡಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ಭೂಮಿಯ ಮೇಲೆ ಪುಟ್ಟ ಮಗುವಿನ ದಿನ ಮುಗಿದು ಹೋಗಿತ್ತು. ಆದರೆ, ತನ್ನ ಬದುಕು ಮುಗಿದರೂ ಅಂಗಾಂಗವನ್ನು ದಾನ ಮಾಡುವ ಮೂಲಕ, ಹಲವು ಜನರ ಬಾಳಿಗೆ ಬೆಳಕಾಗಿದ್ದಾನೆ.

ನವದೆಹಲಿ (ಆ.25): ರಾಜಧಾನಿ ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ಭಾವುಕ ಕ್ಷಣ ನಿರ್ಮಾಣವಾಯಿತು. ಈ ಸುದ್ದಿ ಖಂಡಿತವಾಗಿ ಬೇಸರ ಮೂಡಿಸುವಂಥದ್ದೇ ಆದರೂ, ಬರೀ 16 ತಿಂಗಳಷ್ಟೇ ಭೂಮಿಯ ಮೇಲಿದ್ದ ಪುಟ್ಟ ಬಾಲಕನ ಸಾವು ವರ್ಷಗಳ ಕಾಲ ನೆನಪಿಡುವಂತೆ ಮಾಡಿದೆ. ಏಮ್ಸ್‌ ಆಸ್ಪತ್ರೆಯಲ್ಲಿ 16 ತಿಂಗಳ ಪುಟ್ಟ ಮಗು ರಿಶಾಂತ್‌, ಚಿಕಿತ್ಸೆ ಫಲಿಕಾರಿಯಾಗದೇ ಸಾವು ಕಂಡಿತು. ಆದರೆ, ದುಃಖದ ಸಂದರ್ಭದಲ್ಲೂ ಪುಟ್ಟ ಮಗುವಿನ ಪಾಲಕರು ಅತ್ಯಂತ ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಂಡು, ಪುಟ್ಟ ಶಿಶುವಿನ ಅಂಗಾಂಗವನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಪುಟ್ಟ ಬಾಲಕನ ದೇಹದ ಅಂಗಾಂಗಗಳು ಈಗಾಗಲೇ ಇಬ್ಬರಿಗೆ ಜೋಡಿಸಲಾಗಿದೆ. ಇನ್ನೂ ಕೆಲವು ಭಾಗಗಳನ್ನು ಏಮ್ಸ್‌ ಬ್ಯಾಂಕ್‌ನಲ್ಲಿಯೇ ಇಡಲಾಗಿದ್ದು, ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಆಗಸ್ಟ್‌ 17 ರಂದು ಮನೆಯಲ್ಲಿ ಆಟವಾಡುವ ವೇಳೆ ರಿಶಾಂತ್‌ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದ. ರಿಶಾಂತ್‌ನ ತಂದೆ ಉಪಿಂದರ್‌ ಮೊದಲಿಗೆ ರಿಶಾಂತ್‌ನಲ್ಲಿ ಯಮುನಾ ಪಾರ್ಕ್‌ನ ಬಳಿಯೇ ಇದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಗು ಬಿದ್ದ ರಭಸಕ್ಕೆ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ಖಾಸಗಿ ಆಸ್ಪತ್ರೆಯವರು ಮಗುವನ್ನು ತಕ್ಷಣವೇ ಏಮ್ಸ್‌ನ ಟ್ರುಮಾ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದರು.

ದೆಹಲಿಯ ಯಮುನಾ ಪಾರ್ಕ್‌ನ ನಿವಾಸಿಯಾಗಿದ್ದ ಉಪಿಂದರ್‌ಗೆ ಮಗನನ್ನು ಖಾಸಗಿ ಆಸ್ಪತ್ರೆಗ ಸೇರಿಸುವಾಗಲೇ ಇದು ಗಂಭೀರ ಪ್ರಮಾಣದ ಪೆಟ್ಟು ಎನ್ನುವುದು ಅರಿವಾಗಿತ್ತು. ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದ ನಡುವೆಯೇ ಮಗುವನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಈ ವೇಳೆ ಮಗು ಬದುಕಬಹುದು ಎನ್ನುವ ಸಣ್ಣ ವಿಶ್ವಾಸವನ್ನು ಉಪಿಂದರ್‌ ಹೊಂದಿದ್ದರು. ಆದರೆ, ತಲೆಗೆ ಬಿದ್ದ ಪೆಟ್ಟು ಗಂಭೀರವಾದ ಕಾರಣದಿಂದ, ಮಗು ಉಳಿದುಕೊಳ್ಳುವುದು ಬಹುತೇಕ ಅನುಮಾನವಾಗಿತ್ತು.

ಆ.24 ರಂದು ಸಾವು ಕಂಡಿದ್ದ ಮಗು: ಆದರೆ, ಆಗಸ್ಟ್‌ 24 ರ ವೇಳೆಗೆ ಏಮ್ಸ್‌ನ ವೈದ್ಯರು ಮಗುವಿನ ಮೆದುಳು ನಿಷ್ಕ್ರೀಯವಾಗಿದೆ ಎಂದು ಘೋಷಣೆ ಮಾಡಿದರು. ಹಾಗೇನಾದರೂ ನಿಮ್ಮ ಸಹಮತಿ ಇದ್ದಲ್ಲಿ ಮಗುವಿನ ಅಂಗಾಂಗವನ್ನು ನೀವು ದಾನ ಮಾಡಬಹುದು. ಯಾವೆಲ್ಲಾ ಭಾಗವನ್ನು ದಾನ ಮಾಡಬಹುದು ಎನ್ನುವುದನ್ನೂ ವೈದ್ಯರು ಕುಟುಂಬಕ್ಕೆ ವಿವರಣೆ ನೀಡಿದ್ದರು. ಇನ್ನೇನು ಕಾಲಿಡಲು ಅಭ್ಯಾಸ ಮಾಡುತ್ತಿದ್ದ ಪುಟ್ಟ ಮಗು ಇಡೀ ಮನೆಯ ಪ್ರೀತಿ ಪಾತ್ರವಾಗಿತ್ತು. ಜಗತ್ತನ್ನು ಕಾಣುವ ಮೊದಲೇ ಮಗುವಿನ ದಿನ ಭೂಮಿಯ ಮೇಲೆ ಮುಕ್ತಾಯವಾಗಿತ್ತು.

ಅಂಗಾಂಗ ದಾನ ಮಾಡಿದ ಮೊದಲ ಸಿಎಂ ಬೊಮ್ಮಾಯಿ: ದೇಶಕ್ಕೆ ಮಾದರಿಯಾದ ನಡೆ

ರಿಶಾಂತ್‌ನ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಶಾಂತ್‌ಗೆ ಐವರು ಹಿರಿಯ ಸಹೋದರಿಯರೂ ಇದ್ದಾರೆ. ಇಡೀ ಮನೆಯಲ್ಲಿ ಸೂತಕದ ವಾತಾವರಣ ಇದ್ದರೂ, ಉಪಿಂದರ್‌ ವೈದ್ಯರ ಸಲಹೆಯನ್ನು ಪರಿಗಣಿಸಿದರು. ಅಂಗಾಂಗ ದಾನಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ರಿಶಾಂತ್‌ನ ಕಿಡ್ನಿಯನ್ನು ಏಮ್ಸ್‌ನಲ್ಲಿಯೇ ದಾಖಲಾಗಿದ್ದ 5 ವರ್ಷದ ಬಾಲಕನಿಗೆ ಜೋಡಿಸಲಾಗಿದ್ದರೆ, ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿದ್ದ 6 ತಿಂಗಳ ಹೆಣ್ಣು ಮಗುವಿಗೆ ಲಿವರ್‌ ಅನ್ನು ಜೋಡಿಸಲಾಗಿದೆ. ಅದರೊಂದಿಗೆ ಮಗುವಿನ ಕಣ್ಣು, ಹೃದಯ ಸೇರಿದಂತೆ ಇನ್ನಿತರ ಭಾಗಗಳನ್ನು ಏಮ್ಸ್‌ ಬ್ಯಾಂಕ್‌ನಲ್ಲಿ ಜೋಪಾನವಾಗಿ ಇಡಲಾಗಿದೆ.

ಚಾಮರಾಜನಗರ: ಸಾವಿನಲ್ಲೂ ಸಾರ್ಥಕತೆ, ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ

ಏಮ್ಸ್‌ನ ಅಂಗಾಗ ದಾನದ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ಆರತಿ ವಿಜ್‌ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇದೊಂದು ಕಠಿಣ ಕೆಲಸವಾಗಿತ್ತು. ಅದು ಪುಟ್ಟ ಮಗು. ಮೊದಲಿಗೆ ಕುಟುಂಬವನ್ನು ಒಪ್ಪಿಸುವುದು ನಮ್ಮ ಕೆಲಸವಾಗಿದ್ದರೆ, ನಂತರ ದಾನವಾದ ಅಂಗಾಂಗವನ್ನು ನಿಗದಿತ ಸಮಯದಲ್ಲಿ ಬೇಕಾದವರಿಗೆ ಜೋಡಿಸುವುದು ಸವಾಲಾಗಿತ್ತು. ಏಮ್ಸ್‌ನ ಹಲವು ಇಲಾಖೆಗಳು ಸಹಯೋಗದೊಂದಿಗೆ ಕೆಲಸ ಮಾಡಿದ್ದರಿಂದ ಇಂದು ಇಬ್ಬರು ಮಕ್ಕಳು ಹೊಸ ಜೀವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

click me!