ಆಫ್ಘನ್‌ ಸೇನಾನಿ ಸಾವಿಗೆ ಕೇರಳದಲ್ಲಿ ಕಣ್ಣೀರು! ಏನಿದು ನಂಟು?

By Kannadaprabha NewsFirst Published Mar 1, 2020, 7:42 AM IST
Highlights

ಆಷ್ಘಾನಿಸ್ತಾನದಲ್ಲಿ ಬಾಂಬ್‌ ಸ್ಫೋಟವೊಂದು ಸಂಭವಿಸಿ ಆ ದೇಶದ ಯೋಧನೊಬ್ಬ ವೀರ ಮರಣವನ್ನಪ್ಪಿದ್ದಾನೆ. ಆತನ ಸಾವಿಗೆ ಕೇರಳದಲ್ಲಿ ಕಂಬನಿ ಮಿಡಿಯಲಾಗುತ್ತಿದೆ. 

ಕೊಚ್ಚಿ [ಮಾ.01]: ದೂರದ ಆಷ್ಘಾನಿಸ್ತಾನದಲ್ಲಿ ಬಾಂಬ್‌ ಸ್ಫೋಟವೊಂದು ಸಂಭವಿಸಿ ಆ ದೇಶದ ಯೋಧನೊಬ್ಬ ವೀರ ಮರಣವನ್ನಪ್ಪಿದ್ದಾನೆ. ಆತನನ್ನು, ಅದರಲ್ಲೂ ವಿಶೇಷವಾಗಿ ಆತನ ಕೈಗಳನ್ನು ನೆನೆದು ಕೇರಳದಲ್ಲಿ ಕುಟುಂಬವೊಂದು ಕಣ್ಣೀರಿಡುತ್ತಿದೆ. ಯಾಕೆಂದರೆ ಆ ಕೈಗಳು ಕೇರಳದವು!

ನಂಬಲು ತುಸು ಕಷ್ಟವಾದರೂ ಇದು ನಿಜ. ಆಷ್ಘಾನಿಸ್ತಾನ ಸೇನೆಯಲ್ಲಿ ಮೇಜರ್‌ ಅಬ್ದುಲ್‌ ರಹೀಮ್‌ (35) ಎಂಬುವರು ಬಾಂಬ್‌ ನಿಷ್ಕಿ್ರಯ ತಜ್ಞರಾಗಿದ್ದರು. ತಾಲಿಬಾನ್‌ ಉಗ್ರರ ಆಡುಂಬೊಲವಾಗಿದ್ದ ಆಷ್ಘಾನಿಸ್ತಾನದಲ್ಲಿ ಬಾಂಬ್‌ಗಳನ್ನು  ನಿಷ್ಕ್ರೀಯಗೊಳಿಸಿ ನೂರಾರು ಜನರ ಪ್ರಾಣ ಉಳಿಸಿದ್ದರು. ಆದರೆ 2012ರಲ್ಲಿ  ಕಾರ್ಯಾಚರಣೆ ವೇಳೆ ಬಾಂಬ್‌ ಸ್ಫೋಟಗೊಂಡು ಅಬ್ದುಲ್‌ ಅವರು ಎರಡೂ ಕೈಗಳನ್ನೂ ಕಳೆದುಕೊಂಡಿದ್ದರು. ಮೂರು ವರ್ಷಗಳ ಕಾಲ ಅವರು ತೀವ್ರ ಕಷ್ಟಪಟ್ಟಿದ್ದರು.

ಈ ನಡುವೆ, 2015 ಮೇ 10ರಂದು ಕೇರಳದ ಎರ್ನಾಕುಲಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಿ.ಜಿ. ಜೋಸೆಫ್‌ ಎನ್ನುವವರ ಮಿದುಳು ನಿಷ್ಕಿ್ರಯಗೊಂಡಿತ್ತು. ಬಳಿಕ ಜೋಸೆಫ್‌ ಕುಟುಂಬ ಅಂಗಾಂಗ ದಾನಕ್ಕೆ ಮುಂದಾಗಿತ್ತು. ಈ ಸುದ್ದಿ ತಿಳಿದ ಅಬ್ದುಲ್‌ ಅವರು ಜೋಸೆಫ್‌ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಕೈಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಜೋಸೆಫ್‌ ಕುಟುಂಬ ಒಪ್ಪಿಗೆ ನೀಡಿತ್ತು. ಬಳಿಕ ಅಮೃತಾ ಮೆಡಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಅಬ್ದುಲ್‌ಗೆ ಜೋಸೆಫ್‌ ಅವರು ಕೈಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಅಂದು ಈ ಸುದ್ದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.

ಫಲಿಸದ ಪ್ರಾರ್ಥನೆ: ನಾಪತ್ತೆಯಾದ 6 ವರ್ಷದ ದೇವಾನಂದ ಶವವಾಗಿ ಪತ್ತೆ!...

ಕೇರಳಿಗನ ಕೈಗಳನ್ನು ಪಡೆದ ಅಬ್ದುಲ್‌ ಅಷ್ಘಾನಿಸ್ತಾನ ಸೇನೆಯಲ್ಲಿ ಬಾಂಬ್‌ ನಿಷ್ಕ್ರೀಯಗೊಳಿಸುವ ಕೆಲಸಕ್ಕೆ ಪುನಃ ಸೇರಿಕೊಂಡಿದ್ದರು. ಕೈಗಳು ಮೊದಲಿನಂತೆ ಕೆಲಸ ಮಾಡದೇ ಇದ್ದರೂ ಭಾಗಶಃ ಕಾರ್ಯನಿರ್ವಹಿಸುತ್ತಿದ್ದವು. ಅಬ್ದುಲ್‌ ಅವರನ್ನು ಕಾಬೂಲ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರು ತಮ್ಮ ಜೀವನದಲ್ಲಿ ಈವರೆಗೆ ಸುಮಾರು 2000ಕ್ಕೂ ಹೆಚ್ಚು ಬಾಂಬ್‌ಗಳನ್ನು ನಿಷ್ಕಿ್ರಯಗೊಳಿಸಿದ್ದರು. ಆದರೆ ಫೆ.19ರಂದು ಉಗ್ರರು ಸೇನಾ ವಾಹನದಲ್ಲಿ ಇಟ್ಟಿದ್ದ ಬಾಂಬ್‌ ಸ್ಫೋಟಗೊಂಡು ಮೃತಪಟ್ಟಿದ್ದಾರೆ.

ಅಬ್ದುಲ್‌ ಕೇರಳ ಪ್ರೇಮ :  ತಮ್ಮ ಕೈಗಳಿಗೆ ಮರು ಜೀವ ನೀಡಿದ ಕೇರಳದ ಕುಟುಂಬದ ಜೊತೆ ಅಬ್ದುಲ್‌ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರು. ತಮಗೆ ಕೈಗಳನ್ನು ನೀಡಿದ್ದಕ್ಕೆ ಜೋಸೆಫ್‌ ಕುಟುಂಬಕ್ಕೆ ಕೃತಜ್ಞತೆ ಸೂಚಿಸಲು ಪ್ರತಿವರ್ಷ ಕೇರಳಕ್ಕೆ ಬರುತ್ತಿದ್ದರು. ಅಬ್ದುಲ್‌ ಅವರ ಕೈಗಳನ್ನು ನೋಡಿ ಜೋಸೆಫ್‌ ಕುಟುಂಬ ನೆಮ್ಮದಿಪಡುತ್ತಿತ್ತು.

ಜೋಸೆಫ್‌ ಕುಟುಂಬವಲ್ಲದೇ ಅಮೃತಾ ಆಸ್ಪತ್ರೆಯಲ್ಲಿ ಮೊದಲ ಬಾರಿ ಕೈಗಳ ಕಸಿ ಮಾಡಿಸಿಕೊಂಡಿದ್ದ ಕೇರಳಿಗ ಟಿ.ಆರ್‌. ಮನು ಎಂಬಾತನ ಜೊತೆಗೂ ಅಬ್ದುಲ್‌ ಸ್ನೇಹ ಬೆಳೆಸಿಕೊಂಡಿದ್ದರು. ಕೈ ಕಸಿಯ ಬಗ್ಗೆ ಅಬ್ದುಲ್‌ಗೆ ಇದ್ದ ಅನುಮಾನವನ್ನು ಮನು ಬಗೆಹರಿಸಿದ್ದರು. ಈ ಸಲಹೆ ಅಬ್ದುಲ್‌ ಕೈ ಕಸಿ ಚಿಕಿತ್ಸೆಗೆ ಒಳಪಡಲು ದಾರಿ ಮಾಡಿಕೊಟ್ಟಿತ್ತು. ಅಲ್ಲದೇ ಸೇನೆಯಿಂದ ನಿವೃತ್ತಿ ಆದ ಬಳಿಕ ಭಾರತದಲ್ಲೇ ನೆಲೆ ವಾಸಿಸುವ ಬಗ್ಗೆಯೂ ಅಬ್ದುಲ್‌ ಬಯಸಿದ್ದರು. ಆದರೆ ಈಗ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ.

click me!