
ರಾಯ್‌ಪುರ: ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ವಿವಾಹಿತ ಮಹಿಳೆಯರಿಗೆ ತಾಯಂದಿರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂಪಾಯಿ ಗೌರವಧನ ನೀಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಇದನ್ನು ಕೆಲ ಮಹಿಳೆಯರು ಕೂಡಿಟ್ಟು ತಮ್ಮ ಕೆಲ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ. ಒಬ್ಬರು ಮಹಿಳೆ ಇತ್ತೀಚೆಗೆ ಈ ಹಣದಲ್ಲಿ ಚಿನ್ನದ ತಾಳಿ ಸರ ಕೊಂಡರೆ ಮತ್ತೊಬ್ಬರು ಅದೇ ಹಣದಲ್ಲಿ ಪತಿಗೆ ಸ್ಕೂಟರ್ ಕೊಡಿಸಿದ್ದರು. ಮತ್ತೊಬ್ಬರು ಮಹಿಳೆ ಸಣ್ಣದಾದ ಶಾಪೊಂದನ್ನು ತೆರೆದಿದ್ದರು. ಹೀಗಾಗಿ ಈ ಯೋಜನೆಗಳು ಅನೇಕ ಮಹಿಳೆಯರಿಗೆ ಬಹಳ ಪ್ರಿಯವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆ ಯಶಸ್ಸು ಕಂಡ ನಂತರ ಬೇರೆ ಬೇರೆ ರಾಜ್ಯಗಳಲ್ಲೂ ಚುನಾವಣಾ ಪೂರ್ವ ಕೆಲ ಗ್ಯಾರಂಟಿ ಯೋಜನೆಗಳನ್ನು ಆಡಳಿತಕ್ಕೆ ಬಂದ ಸರ್ಕಾರಗಳು ಜಾರಿಗೊಳಿಸಿವೆ.
ಅದೇ ರೀತಿ ಛತ್ತೀಸ್‌ಗಢದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ಮಹ್ತರಿ ವಂದನಾ ಯೋಜನೆಯಡಿ ತಿಂಗಳಿಗೆ ಒಂದು ಸಾವಿರ ರೂಪಾಯಿ ಗೌರವಧನವನ್ನು ನೀಡುತ್ತಿದೆ. ಎಲ್ಲಾ ಸರ್ಕಾರಿ ಯೋಜನೆಗಳು ದುರುಪಯೋಗವಾಗುವಂತೆ ಈ ಯೋಜನೆಯೂ ಕೂಡ ದುರುಪಯೋಗವಾಗಿದೆ. ಕೆಲ ಖದೀಮರು ಇದರಲ್ಲೂ ಹಣ ಮಾಡುವ ತಂತ್ರ ಹೂಡಿದ್ದಾರೆ. ಇದರ ಪರಿಣಾಮ ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಹೆಸರಲ್ಲೂ ಖಾತೆಯೊಂದನ್ನು ತೆರೆಯಲಾಗಿದ್ದು, ಪ್ರತಿ ತಿಂಗಳು ಈ ಖಾತೆಗೆ ಒಂದು ಸಾವಿರ ರೂಪಾಯಿಯಂತೆ ಡಿಪಾಸಿಟ್ ಆಗಿದೆ.
ಅಂದಹಾಗೆ ವೀರೇಂದ್ರ ಜೋಶಿ ಎಂಬಾತ ಈ ರೀತಿ ಸನ್ನಿ ಲಿಯೋನ್ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದು, ಆತನ ವಿರುದ್ಧ ಈಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲ್ಲದೇ ಯೋಜನೆಯ ಅರ್ಹ ಫಲಾನುಭವಿಗಳ ಪರಿಶೀಲನೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ.
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ತಾಲೂರ್ ಗ್ರಾಮದಲ್ಲಿ ಈ ರೀತಿಯ ನಕಲಿ ಖಾತೆ ತೆರೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸಿ ಬ್ಯಾಂಕ್ ಖಾತೆಗೆ ಹಾಕಿದ ಹಣ ವಸೂಲಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಧಿಕಾರಿ ಹಾರಿಸ್ ಎಸ್. ಸೂಚಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಅಧಿಕಾರಿಗಳಿಗೆ ಈ ವಿಚಾರ ಬೆಳಕಿಗೆ ಬಂದಿದೆ.
ಈ ಸಂಗತಿಯು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಮಹತಾರಿ ವಂದನ್ ಯೋಜನೆಯಡಿ ಶೇಕಡಾ 50 ರಷ್ಟು ಫಲಾನುಭವಿಗಳು ನಕಲಿಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಆರೋಪಿಸಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಅರುಣ್ ಸಾವೋ ಅವರು, ಕಾಂಗ್ರೆಸ್ ತನ್ನ ಹಿಂದಿನ ಅವಧಿಯಲ್ಲಿ ನೀಡಲಾಗದ ಮಾಸಿಕ ಸಹಾಯವನ್ನು ಈಗ ರಾಜ್ಯದ ಮಹಿಳೆಯರು ಪಡೆಯುತ್ತಿರುವುದರಿಂದ ಕಾಂಗ್ರೆಸ್‌ಗೆ ನೋವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ