ಉತ್ತರ ಭಾರತದಲ್ಲಿ ತೀವ್ರ ಚಳಿ ಮುಂದುವರೆದಿದ್ದು, ಶ್ರೀನಗರದಲ್ಲಿ 50 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲಾಗಿದೆ. ಹಿಮಾಚಲ ಪ್ರದೇಶದ ಟಬೋದಲ್ಲಿ ಭಾನುವಾರ ಮೈನಸ್ 11.6 ಡಿ.ಸೆ. ತಾಪಮಾನ ದಾಖಲಾಗಿದ್ದು, ದಾಲ್ ಸರೋವರ ಭಾಗಶಃ ಹೆಪ್ಪುಗಟ್ಟಿದೆ. ಪ್ರಧಾನಿ ಮೋದಿ 71,000 ಜನರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಶ್ರೀನಗರ/ ಶಿಮ್ಲಾ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತ ಮಾರುತ ಮುಂದುವರೆದಿದ್ದು, ಹಿಮಾಚಲ ಪ್ರದೇಶದ ಟಬೋದಲ್ಲಿ ಭಾನುವಾರ ಮೈನಸ್ 11.6 ಡಿ.ಸೆ. ತಾಪಮಾನ ದಾಖಲಾಗಿದೆ. ಇದು ಭಾನುವಾರ ದೇಶದಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇನ್ನು ಶುಕ್ರವಾರ ರಾತ್ರಿ ಶ್ರೀನಗರದಲ್ಲಿ ಮೈನಸ್ 8 ಡಿ.ಸೆ. ದಾಖಲಾಗಿದ್ದು ಇದು 50 ವರ್ಷಗಳ ದಾಖಲೆ ಕನಿಷ್ಠವಾಗಿದೆ. 1974ರಲ್ಲಿ ಮೈನಸ್ 10.3 ಡಿ.ಸೆ ದಾಖಲಾಗಿದ್ದು ಇದುವರೆಗಿನ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ. ಇನ್ನು ದಕ್ಷಿಣ ಕಾಶ್ಮೀರದ ಉಷ್ಣಾಂಶ ಶೂನ್ಯಕ್ಕಿಂತ ಕೆಳಗೆ ಇಳಿದ ಪರಿಣಾಮ ಪ್ರಸಿದ್ಧ ದಾಲ್ ಸರೋವರ ಭಾಗಶಃ ಹೆಪ್ಪುಗಟ್ಟಿದೆ. ಆದರೆ ಭಾನುವಾರ ಕೊಂಚ ಏರಿಕೆ ಕಂಡು ಮೈನಸ್ 4.6 ಡಿ.ಸೆ.ಗೆ ತಲುಪಿದೆ.
ಚಳಿ ಹೆಚ್ಚಳದ ಬೆನ್ನಲ್ಲೇ ದಿಲ್ಲಿ ಮಾಲಿನ್ಯ ಮತ್ತೆ ಗಂಭೀರದ ಮಟ್ಟಕ್ಕೆ
undefined
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತು ಮಂಜು ಕವಿದ ವಾತಾವರಣ ಹೆಚ್ಚಿದ ಬೆನ್ನಲ್ಲೇ ವಾಯುಮಾಲಿನ್ಯ ಪ್ರಮಾಣ ಮತ್ತೆ ಗಂಭೀರಕ್ಕೆ ತಲುಪಿದೆ. ಭಾನುವಾರ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಕಳಪೆ ಎಂದು ಪರಿಗಣಿಸಲಾಗುವ 406 ಅಂಕಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಚಳಿಯೂ ವಿಪರೀತವಿದ್ದು, ಇಲ್ಲಿನ ಜನ ಪರದಾಡುವಂತಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣದಂತಹ ಕಾರ್ಯಗಳನ್ನು ನಿರ್ಬಂಧಿಸುವ ಗ್ರಾಪ್ -4 ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
71,000 ಜನರಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯಿಂದ ನೇಮಕಾತಿ ಪತ್ರ ವಿತರಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹೊಸದಾಗಿ ನೇಮಕಗೊಂಡ 71,000 ಉದ್ಯೋಗಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮವು ದೇಶದ 45 ಕಡೆಗಳಲ್ಲಿ ನಡೆಯಲಿದ್ದು, ಈ ವೇಳೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಯುವಕರಿಗೆ ಉದ್ಯೋಗ ಒದಗಿಸುವ ರೋಜ್‌ಗಾರ್ ಮೇಳದ ಅಡಿಯಲ್ಲಿ ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಹಣಕಾಸು ಸೇವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಹಾಗೂ ಇಲಾಖೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಎಂದು ಪ್ರಧಾನಿಯವರ ಕಚೇರಿ ಮಾಹಿತಿ ನೀಡಿದೆ.