ಅಚ್ಛೆ ದಿನ್ ಅನಾವರಣ, ಮುಸುಕುಧಾರಿ ನಾಯಕರ ರಾಜಕಾರಣ!

By Suvarna NewsFirst Published Feb 3, 2023, 11:00 AM IST
Highlights

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿದೆ. ಈ ನಡುವೆ ಕಾಂಗ್ರೆಸ್‌ ಪಕ್ಷ ತನ್ನ ಪ್ರಚಾರದ ವೈಖರಿಯಲ್ಲಿ ವಿಭಿನ್ನವಾದ ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ಎರಡು ಬಾರಿ ಲೋಕಸಭೆ ಚುನಾವಣೆಲ್ಲಿ ಅಚ್ಚೇದಿನ ಎನ್ನುವುದು ಬಿಜೆಪಿ ಘೋಷಣೆಯಾಗಿದ್ದರೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇದು ಕಾಂಗ್ರೆಸ್‌ ಪಕ್ಷದ ಘೋಷಣೆಯಾಗಿದೆ.
 

ನವದೆಹಲಿ (ಫೆ.3): ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಭಾರಿ ಪ್ರಚಾರ ಪಡೆದ ಘೋಷಣೆಯಿದು. ಬಿಜೆಪಿಯ ಪ್ರಧಾನ ಘೋಷಣೆಯಾದ ಈ ಅಚ್ಛೆ ದಿನ ಈ ಬಾರಿ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಪ್ರಚಾರದಲ್ಲಿದೆ. ಆದರೆ, ಈ ಬಾರಿ ಅಚ್ಛೆ ದಿನ್ ಅನ್ನು ಬಳಸಿಕೊಳ್ಳುತ್ತಿರುವುದು ಬಿಜೆಪಿಯಲ್ಲ. ಬದಲಿಗೆ ಕಾಂಗ್ರೆಸ್! ಈ ಬಾರಿಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಕಾರ್ಯತಂತ್ರ ರೂಪಿಸುತ್ತಿರುವ ಸುನೀಲ್ ಕುನಗೋಳು ತಂಡವು ಅಚ್ಛೆ ದಿನ್ ಬಳಸಿ ದೊಡ್ಡ ಮಟ್ಟದ ಪ್ರಚಾರಾಂದೋಲನವನ್ನು ರೂಪಿಸಿದೆ.  ಈ ಪದ ಬಳಕೆ ಮಾಡಿ ಹತ್ತಾರು ಪ್ರಶ್ನಾವಳಿಗಳನ್ನು ರೂಪಿಸಿರುವ ಈ ತಂಡವು ಅದನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಸೂಚನೆ ನೀಡಿದೆ.

ಅದು- ಎಲ್ಲಿಗೆ ಬಂತು, ಯಾರಿಗೆ ಬಂತು ಅಚ್ಛೆ ದಿನ್ ಎಂಬುದೇ ಈ ಪ್ರಶ್ನಾವಳಿ. 'ಪೆಟ್ರೋಲ್ ದರ 100 ದಾಟಿತ್ತಲ್ಲ, ನಿಮಗೆ ಬಂದಿದೆಯೇ ಅಚ್ಛೆ ದಿನ್?, ಅಡುಗೆ ಅನಿಲ ದರ 1000 ರೂಪಾಯಿ ದಾಟಿದೆಯಲ್ಲ, ನಿಮಗೆ ಬಂತೇ ಅಚ್ಛೆ ದಿನ್. ಜಿಎಸ್‌ಟಿ ಭೀಕರವಾಗಿ ಕಾಡುತ್ತಿದೆಯಲ್ಲ ನಿಜಕ್ಕೂ ಬಂತೇ ಅಚ್ಛೆ ದಿನ್.  ಭ್ರಷ್ಟಾಚಾರ ಮಿತಿ ಮೀರಿದೆಯಲ್ಲ ಇದೆಯೇನು ನಿಮಗೆ ದೊರಕಿದ ಅಚ್ಛೆ ದಿನ್ ಎಂದು ಜನರನ್ನು ಪ್ರಶ್ನಿಸುವಂತೆ ತಂಡ ಆಕಾಂಕ್ಷಿಗಳಿಗೆ ಪಾಠ ಮಾಡಿದೆ. ಅದನ್ನು ಅಕ್ಷರಶಃ ಪಾಲಿಸುತ್ತಿರುವ ಕಾಂಗ್ರೆಸ್ ಆಕಾಂಕ್ಷಿಗಳು ಬೀದಿ ಬೀದಿಗಳಲ್ಲಿ ಜನರನ್ನು ಸೇರಿಸಿ ಹೇಳಿ ಬಂತಾ ಅಚ್ಛೆ ದಿನ್? ಎಂದು ಜನರನ್ನು ಪ್ರಶ್ನೆ ಮಾಡಿಸಿ ಅವರಿಂದಲೇ ಇನ್ನೂ ಬಂದಿಲ್ಲ ಎಂದು ಹೇಳಿಸುತ್ತಿದ್ದಾರೆ. ತನ್ಮೂಲಕ ಜನರ ಮನಸ್ಸಿನಲ್ಲಿ ಈ ಅಚ್ಛೆ ದಿನ್ ವಿರುದ್ಧ ಜಾಗೃತಿ ಮೂಡಿಸತೊಡಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಯಾವ ರೀತಿಯ ಪ್ರಚಾರಾಂದೋಲನ ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕು!

ಮುಸುಕುಧಾರಿ ನಾಯಕರು: ಕಳ್ಳರು ಕಳ್ಳತನ ಮಾಡುವಾಗ ಮಾತ್ರ ಮುಸುಕು ಹಾಕಿಕೊಳ್ತಾರೆ ಆದ್ರೆ ರಾಜಕಾರಣಿಗಳು ಸದಾ ಮುಸುಕು ಹಾಕಿಕೊಂಡೇ ಇರ್ತಾರೆ. ಅಧಿಕಾರ ತಮಗೆ, ತಮ್ಮ ಮನೆಯ ಬಾಗಿಲಿಗೆ ಬರುತ್ತೇ ಅಂದಾಗ ಮಾತ್ರ ಮುಸುಕು ತೆರೆದು ಒಮ್ಮಲ್ಲೇ ಪಕ್ಷ.. ನೀತಿ.. ಮೌಲ್ಯ ಗಳ ಜಪ ಅಂತ ಶುರುಮಾಡ್ತಾರೆ. ಸಿದ್ದಾಂತ, ಪಕ್ಷ  ಅಂತೆಲ್ಲಾ ಮಾತಾಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ತಾರೆ. ಆದ್ರೆ ಅಧಿಕಾರ ಬರಲ್ಲ ಅಂದಾಗ ಸಿದ್ದಾಂತಗಳು ಮೇಲೆ ಪ್ರಬಂಧ ಬರೆದು ಲೆಟರ್  ಪೋಸ್ಟ್ ಬಾಕ್ಸಿಗೆ ಹಾಕ್ತಾರೆ.. ಹೀಗೆ ಬಂದ ಲೆಟರ್ ಗಳನ್ನು ಓದಿಕೊಳ್ಳುವ ಸರದಿ ಈಗ ರಾಹುಲ್ ಗಾಂಧಿಯವರದ್ದು.

India Gate: ಭಾರತದ ಭವಿಷ್ಯದ 'ಟ್ಯಾಬ್ಲೆಟ್‌', ಶತ್ರುಘ್ನ ಸಿನ್ಹಾ ಲೇಟ್‌ ಎಂಟ್ರಿ!

ದ್ವೇಷ ಬೇಡ, ಶಾಂತಿ ಹಾಗೂ ಸಹೋದರತೆಯೊಂದಿಗೆ ಬಾಳೋಣ. ವಿಭಜನೆ ಬೇಡ ಎಲ್ಲರೂ ಒಟ್ಟಾಗಿ ಹೋಗೋಣ ಅಂತಾ 3,500 ಕಿಲೋಮೀಟರ್ ಪಾದಯಾತ್ರೆ ಮಾಡಿ ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಅಂತಿಮಗೊಳಿಸಿದ್ದ ವೇಳೆ ರಾಹುಲ್ ಗಾಂಧಿ ಮತ್ತವರ ತಂಡದ ಒಮ್ಮತದ ಮಾತಾಗಿತ್ತು. ಆದರೆ, ಇತ್ತ ಪ್ರಾದೇಶಿಕ ಪಕ್ಷಗಳು ಅಥವಾ ಜಾತ್ಯಾತೀತತೆಯನ್ನು ಮುಸುಕು ಹಾಕಿರುವ ಪಕ್ಷಗಳು ಮತ್ತು  ಅವುಗಳ  ಸೂತತ್ರಧಾರರು ಈಗ ಪತ್ರ ಬರೆದು ಬೆಂಬಲ ಸೂಚಿಸುತ್ತಿದ್ದಾರೆ. ಯಾತ್ರೆ ರಾಜ್ಯಗಳಿಗೆ ಬಂದಾಗ ಫೀಲ್ಡ್ ಗೆ ಬಂದು ಬೆಂಬಲಿಸಿದ್ದೇ ಕಡಿಮೆ. 

From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ಬರೀ ಟಿವಿಗಳ ಮುಂದೆ ಅಥವಾ ಕಾರ್ಯಕರ್ತರ ಸಭೆಗಳಲ್ಲಿ ಪುಂಖಾನುಪುಂಖವಾಗಿ ಮಾತಾಡುವ ನಾಯಕರು ಅರ್ಥಾತ್ ಮುಸುಕುಧಾರಿಗಳು  ಜೋಡೋ ಯಾತ್ರೆ ಶ್ರೀನಗರ ತಲುಪಿದಾಗ ಹೊಸ ವರಸೆ ಶುರು ಮಾಡಿದ್ದಾರೆ. ಪತ್ರ ಬರೆದು ಬೆಂಬಲ ಕೊಟ್ಟಿದೇವೆ ಅಂತಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಾಹುಲ್ ಯಾತ್ರೆಗೆ ಶಹಬ್ಬಾಸ್‌ ಅಂತ ಪತ್ರ ಬರೆದಿದ್ದಾರೆ. ಇನ್ನೂ ಕೆಲ ನಾಯಕರು ಅವರ ಪಕ್ಷದ ಪರವಾಗಿ ಸೋತು ಸುಣ್ಣ ಆಗಿರುವ ಮುಖಂಡರನ್ನು ಕಳುಹಿಸಿ ಹನ್ನೊಂದರಲ್ಲಿ ನಮ್ಮದೂ ಒಂದು ಕಲ್ಲು ಹೊಡೆಯುತ್ತಿದ್ದಾರೆ. ಯಾತ್ರೆಯ ಉದ್ದೇಶದ ಹೆಸರಲ್ಲಿ ಬರೋ ಓಟು ಬೇಕು. ಆದ್ರೆ ಗಟ್ಟಿಯಾಗಿ ನಿಂತು  ಸಿದ್ದಾಂತಕ್ಕೆ ಬದ್ದವಾಗಿ ಮಾತ್ರ ಮಾತಾಡಲ್ಲ. ಇದನ್ನೇ ಬಹುಶಃ ರಾಜಕೀಯದ ವಿಚಿತ್ರ ಅಥವಾ ಮುಸುಕುಧಾರಿಗಳ ಮರ್ಮ ಎನ್ನಬಹುದು ಅನ್ನಿಸುತ್ತೆ...
 

click me!