ದೆಹಲಿಯ ಆಪ್ ಸಚಿವ ಹಿಂದೂ ವಿರೋಧಿ ಪ್ರಮಾಣ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಹಿಂದೂ ದೇವರಲ್ಲಿ ನಂಬಿಕೆ ಇಲ್ಲ ಎಂದು ಗೌತಮ್ ಹೇಳಿದ್ದು ವಿವಾದ ಸೃಷ್ಟಿಯಾಗಿದೆ. ಸಚಿವರನ್ನು ವಜಾ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ನವದೆಹಲಿ: ದಿಲ್ಲಿಯಲ್ಲಿ ನಡೆದ ಮತಾಂತರ ಸಮಾರಂಭವೊಂದರಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಸಚಿವ ರಾಜೇಂದ್ರ ಪಾಲ್ ಗೌತಮ್ ಪಾಲ್ಗೊಂಡಿದ್ದು ಹಾಗೂ ಅವರು ಇತರರ ಜತೆ ಸೇರಿ ‘ಹಿಂದೂ ದೇವರಲ್ಲಿ ನಂಬಿಕೆ ಇಲ್ಲ’ ಎಂದು ಪ್ರಮಾಣ ಸ್ವೀಕರಿಸಿರುವುದು ಭಾರಿ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ‘ಆಪ್‌ನಿಂದ ಹಿಂದೂಗಳ ಅವಮಾನ ಆಗುತ್ತಿದೆ. ಹಿಂದೂ ದೇವರ ಮೇಲೆ ನಂಬಿಕೆ ಇದ್ದರೆ ಕೂಡಲೇ ಗೌತಮ್‌ರನ್ನು ವಜಾ ಮಾಡಿ’ ಎಂದು ಆಪ್ ನೇತಾರ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬಿಜೆಪಿ ಒತ್ತಾಯಿಸಿದೆ.
ಗೌತಮ್ ಅವರೇ ಸ್ಥಾಪಿಸಿರುವ ‘ಜೈ ಭೀಮ್ ಮಿಷನ್’ ಎಂಬ ಸಂಸ್ಥೆ ಪ್ರತಿವರ್ಷ ಅಕ್ಟೋಬರ್‌ನಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾದ ದಿನ ಆಚರಿಸುತ್ತದೆ. ಅಂತೆಯೇ ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸಲ 10 ಸಾವಿರ ಹಿಂದೂಗಳು (ಬಹುತೇಕರು ದಲಿತರು) ಬೌದ್ಧ ಧರ್ಮೀಯರಾಗಿ ಮತಾಂತರಗೊಂಡರು.
ಇದನ್ನು ಓದಿ: ಮಂಡ್ಯ ಯುವಕನ ಬಲವಂತದ ಮತಾಂತರ; ಪ್ರಕರಣ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆ
ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೌತಮ್ ‘ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ನಂಬಿಕೆ ಇಲ್ಲ’ ಎಂದು 10 ಸಾವಿರ ಜನರ ಜತೆ ಸೇರಿ ಪ್ರಮಾಣ ಸ್ವೀಕಾರ ಮಾಡಿದರು. ಇದರ ವಿಡಿಯೋ ವೈರಲ್ ಆಗಿದೆ.
ಏನು ಪ್ರಮಾಣ?:
ವೇದಿಕೆಯ ಮೇಲೆ ಕೇಸರಿ ವಸ್ತ್ರ ಧರಿಸಿದ್ದ ಬೌದ್ಧ ಬಿಕ್ಕುವೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿಂದೂಗಳಿಗೆ ‘ನೀವು ನಿಮ್ಮ ಮೂಲಧರ್ಮದಿಂದ ಬೇರೆಯಾಗಿ ಮತ್ತು ದೇವರನ್ನು ಪೂಜಿಸುವುದನ್ನು ಬಿಟ್ಟುಬಿಡಿ. ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಯಾವುದೇ ನಂಬಿಕೆ ಇಲ್ಲ ಮತ್ತು ಅವರನ್ನು ನಾನು ಪೂಜಿಸುವುದೂ ಇಲ್ಲ. ದೇವರ ಪುನರವತಾರ ಎಂದು ಹೇಳಲಾಗುವ ರಾಮ ಮತ್ತು ಕೃಷ್ಣನಲ್ಲೂ ನನಗೆ ನಂಬಿಕೆ ಇಲ್ಲ ಹಾಗೂ ಅವರನ್ನು ನಾನು ಪೂಜಿಸುವುದಿಲ್ಲ.
ಬುದ್ಧ ವಿಷ್ಣುವಿನ ಪುನರವತಾರ ಎಂಬುದನ್ನು ನಾನು ಒಪ್ಪುವುದಿಲ್ಲ. ಇಂಥ ವಾದ ಶುದ್ಧ ಹುಚ್ಚುತನ ಮತ್ತು ಸುಳ್ಳಿನ ಅಪಪ್ರಚಾರ ಎಂದು ನಾನು ನಂಬಿದ್ದೇನೆ. ನಾನು ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡುವುದಿಲ್ಲ. ಬ್ರಾಹ್ಮಣರು ಯಾವುದೇ ಆಚರಣೆ ಮಾಡಲು ನಾನು ಬಿಡುವುದಿಲ್ಲ. ನಾನು ಈ ಮೂಲಕ ಮಾನವ ಕುಲಕ್ಕೆ ಹಾನಿಕಾರಕವಾದ, ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಅಡ್ಡಿಯಾಗಿರುವ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ, ಏಕೆಂದರೆ ಹಿಂದೂ ಧರ್ಮ ಅಸಮಾನತೆಯನ್ನು ಆಧರಿಸಿದೆ ಮತ್ತು ನಾನು ಬುದ್ಧಿಸಂ ಅನ್ನು ನನ್ನ ಧರ್ಮವಾಗಿ ಸ್ವೀಕರಿಸುತ್ತಿದ್ದೇನೆ’ ಎಂದು ಬೋಧಿಸುವ ಅಂಶಗಳು ವಿಡಿಯೋದಲ್ಲಿದೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾನೂನು ಜಾರಿಗೆ ಬಂದಿದ್ರೂ, ಮರ್ಮಾಂಗದ ತುದಿ ಕತ್ತರಿಸಿ ಬಲವಂತದ ಮತಾಂತರ!
ಬಿಜೆಪಿ ಟೀಕೆ: ಈ ಬಗ್ಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ‘ಕೇಜ್ರಿವಾಲ್‌ರ ಆಪ್‌ನಿಂದ ಹಿಂದೂಗಳಿಗೆ ಅವಮಾನ ಆಗಿದೆ. ಒಂದೆಡೆ ದೇವಸ್ಥಾನಕ್ಕೆ ತೆರಳಿ ಕೇಜ್ರಿವಾಲ್ ನಾಟಕ ಮಾಡುತ್ತಾರೆ. ಇನ್ನೊಂದು ಕಡೆ ಅವರದ್ದೇ ಸಚಿವ ಹಿಂದೂ ದೇವರ ವಿರುದ್ಧ ಪ್ರತಿಜ್ಞೆ ಸ್ವೀಕರಿಸುತ್ತಾರೆ. ಕೇಜ್ರಿವಾಲ್‌ಗೆ ಹಿಂದೂಗಳ ಪರ ನಿಜವಾಗಿಯೂ ಕಳಕಳಿ ಇದ್ದರೆ ಗೌತಮ್ ವಜಾ ಮಾಡಬೇಕು’ ಎಂದು ಆಗ್ರಹಿಸಿದೆ.
ಆದರೆ ಇದಕ್ಕೆ ಗೌತಮ್ ತಿರುಗೇಟು ನೀಡಿದ್ದು, ‘ಜಾತಿ-ಧರ್ಮಗಳ ಮಧ್ಯೆ ಬಿಜೆಪಿ ಒಡಕು ಮೂಡಿಸುತ್ತದೆ. ಅವರಿಂದ ನಾನು ಪಾಠ ಕಲಿಯಬೇಕಿಲ್ಲ. ಧರ್ಮದ ಅಯ್ಕೆಯಲ್ಲಿ ಭಾರತೀಯರು ಸ್ವತಂತ್ರರು’ ಎಂದಿದ್ದಾರೆ.