ಲಾಲೂ ಪ್ರಸಾದ್ ಯಾದವ್ ರೈಲ್ವೇ ಮಂತ್ರಿಯಾಗಿದ್ದ ನೇಮಕಾತಿಗಾಗಿ ಜಮೀನು ಲಂಚ ಪಡೆದ ಹಗರಣ ಇದೀಗ ಬಿಗಿಯಾಗಿದೆ. ಲಾಲೂ ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ ಸೇರಿದಂತೆ 14 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ.
ಪಟನಾ(ಅ.07): ನಿತೀಶ್ ಕುಮಾರ್ ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಅಧಿಕಾರಕ್ಕೇರಿರುವ ಆರ್‌ಜೆಡಿಗೆ ಸಂಕಷ್ಟ ಹೆಚ್ಚಾಗಿದೆ. ಲಾಲು ಪ್ರಸಾದ್ ಯಾದವ್ ರೈಲ್ವೇ ಮಂತ್ರಿಯಾಗಿದ್ದ ವೇಳೆ ನೇಮಕಾತಿಗಾಗಿ ಜಮೀನು ಲಂಚ ಪ್ರಕರಣ ಇದೀಗ ಲಾಲೂ, ಲಾಲೂ ಕುಟುಂಬ ಹಾಗೂ ಆಪ್ತರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಪ್ರಕರಣದಡಿಯಲ್ಲಿ ಲಾಲೂ ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರಿ ಮಿಸಾ ಭಾರ್ತಿ ಸೇರಿದಂತೆ 14 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಇದೀಗ ಅಧಿಕಾರಕ್ಕೇರಿದ ಬೆನ್ನಲ್ಲೇ ಹಳೇ ಪ್ರಕರಣದ ಕುಣಿಕೆ ಬಿಗಿಯಾಗುತ್ತಿದೆ.
ಕಳೆದ ತಿಂಗಳು ಸಿಬಿಐ ಈ ಪ್ರಕರಣ ಸಂಬಂಧ ದಾಳಿ ನಡೆಸಿತ್ತು. ಈ ವೇಳೆ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿತ್ತು. ಈ ಎಲ್ಲಾ ಮಾಹಿತಿಗಳನ್ನು ಹಾಗೂ ಹಲವು ಸಾಕ್ಷ್ಯಗಳನ್ನಿಟ್ಟುಕೊಂಡು ಇದೀಗ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಇಲಾಖೆಯಲ್ಲಿ ನೌಕರಿ ನೀಡಲು ಅಭ್ಯರ್ಥಿಗಳಿಂದ ಭೂಮಿಯನ್ನು ಲಂಚವಾಗಿ ಪಡೆದ ಹಗರಣದಲ್ಲಿ ಸಿಬಿಐಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿತ್ತು. ಲಾಲು ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ನಲ್ಲಿ ನೌಕರಿಗಾಗಿ ಭೂಮಿ ಲಂಚ ನೀಡಿದವರ 1458 ಹೆಸರುಗಳು ಪತ್ತೆಯಾಗಿತ್ತು.
Fodder Scam: ಲಾಲೂ ಪ್ರಸಾದ್ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ
ಕುತೂಹಲಕರ ಸಂಗತಿಯೆಂದರೆ, ಲಾಲು ಕುಟುಂಬದ ಸದಸ್ಯರಿಗೆ ಭೂಮಿ ಲಂಚ ನೀಡಿದವರ ಹೆಸರನ್ನು ತೇಜಸ್ವಿಯೇ ಪಟ್ಟಿಮಾಡಿ ಹಾರ್ಡ್‌ಡಿಸ್‌್ಕನಲ್ಲಿ ಸಂಗ್ರಹಿಸಿಟ್ಟಿದ್ದಾರೆ. 1458 ಪ್ರಕರಣಗಳ ಪೈಕಿ 16 ಪ್ರಕರಣದಲ್ಲಿ ಅಭ್ಯರ್ಥಿಗಳು ನೌಕರಿಗಾಗಿ ಭೂಮಿ ಲಂಚ ನೀಡಿರುವುದು ಸಿಬಿಐ ತನಿಖೆಯಲ್ಲಿ ಈಗಾಗಲೇ ಸಾಬೀತಾಗಿದೆ. ಹೀಗಾಗಿ ಇನ್ನುಳಿದ ಅಭ್ಯರ್ಥಿಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಈ ಕುರಿತು ರೈಲ್ವೆ ಇಲಾಖೆಯಿಂದ ಮಾಹಿತಿ ಕೇಳಿದೆ. ತೇಜಸ್ವಿ ವಿರುದ್ಧ ‘ಅತ್ಯಂತ ನಿಖರ’ ಸಾಕ್ಷ್ಯಗಳು ಲಭ್ಯವಾಗಿದೆ.
ಪ್ರಕರಣದ ವಿವರ
2004ರಿಂದ 2009ರವರೆಗೆ ಯುಪಿಎ-1 ಸರ್ಕಾರದಲ್ಲಿ ಲಾಲು ರೈಲ್ವೆ ಮಂತ್ರಿಯಾಗಿದ್ದರು. ಆಗ ರೈಲ್ವೆಯ ವಿವಿಧ ವಲಯಗಳಲ್ಲಿ ‘ಡಿ ಗ್ರೂಪ್’ ನೌಕರಿ ನೀಡಲು ಬಿಹಾರಿಗಳಿಂದ ಪಟನಾದ ಸುತ್ತಮುತ್ತ ಭೂಮಿಯನ್ನು ತಮ್ಮ ಕುಟುಂಬ ಹಾಗೂ ಆಪ್ತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಒಟ್ಟು 1,05,292 ಚದರಡಿ ಜಾಗವನ್ನು ಅವರು ಲಂಚವಾಗಿ ಪಡೆದಿದ್ದು, ಅದರ ಇಂದಿನ ಮಾರುಕಟ್ಟೆಮೌಲ್ಯ 4.39 ಕೋಟಿ ರು. ಆಗುತ್ತದೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಹೇಳಿದೆ.
ಬಿಹಾರ:ಆರ್‌ಜೆಡಿ ಸಚಿವರಿಗೆ ಹೊಸ ಕಾರು ಖರೀದಿಗೆ ಕೊಕ್
ಸಿಬಿಐ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಆರ್‌ಜೆಡಿ
100% ಉದ್ದೇಶಪೂರ್ವಕ ದಾಳಿ’ ಎಂದು ದಾಳಿಗೊಳಗಾದ ಆರ್‌ಜೆಡಿ ಎಂಎಲ್‌ಸಿ ಸಿಂಗ್ ಕಿಡಿಕಾರಿದ್ದರು. ಆರ್‌ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್, ‘ನನಗೇನೂ ಆಶ್ಚರ್ಯವಾಗಿಲ್ಲ. ಸಿಬಿಐ, ಇ.ಡಿ., ಐ.ಟಿ. ಅಧಿಕಾರಿಗಳು ಬಿಹಾರದಲ್ಲಿ ದಾಳಿಗೆ ಪ್ಲಾನ್ ಮಾಡುತ್ತಿದ್ದಾರೆಂದು ನಾನು ಮೊದಲೇ ಟ್ವೀಟ್ ಮಾಡಿದ್ದೆ’ ಎಂದಿದ್ದಾರೆ. ‘ಇ.ಡಿ.ಯಾದರೂ ಸರಿ, ಸಿಬಿಐ ಆದರೂ ಸರಿ, ಎಲ್ಲಾ ದಾಳಿಗಳೂ ಬಿಜೆಪಿಗೆ ಅನುಕೂಲ ಮಾಡಿಕೊಡಲು ನಡೆಯುತ್ತವೆ’ ಎಂದು ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಹೇಳಿದ್ದರು.