Bhagwant Mann ಪಂಜಾಬ್ ನಲ್ಲಿ ಪ್ರತಿ ಮನೆಗೆ 300 ಯುನಿಟ್ ಗಳ ಉಚಿತ್ ವಿದ್ಯುತ್!

By Suvarna NewsFirst Published Apr 16, 2022, 10:30 AM IST
Highlights

ಪಂಜಾಬ್ ರಾಜ್ಯದಲ್ಲಿ ಅಧಿಕಾರ ಹಿಡಿದು ಒಂದು ತಿಂಗಳಾದ ಬೆನ್ನಲ್ಲಿಯೇ ಚುನಾವಣೆಯ ವೇಳೆ ಘೋಷಣೆ ಮಾಡಿದ್ದ ಪ್ರಮುಖ ಆಶ್ವಾಸನೆಯನ್ನು ಈಡೇರಿಸಲು ಆಮ್ ಆದ್ಮಿ ಪಾರ್ಟಿ ಮುಂದುವರಿದಿದೆ. ಮುಂದಿನ ಜುಲೈನಿಂದ ರಾಜ್ಯದಲ್ಲಿ ಪ್ರತಿ ಮನೆಗೂ 300 ಯುನಿಟ್ ಗಳ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಣೆ ಮಾಡಿದ್ದಾರೆ.
 

ಚಂಡೀಗಢ (ಏ.16): ಪಂಜಾಬ್ (Punjab) ರಾಜ್ಯದಲ್ಲಿ ಅಧಿಕಾರ ಹಿಡಿದು ಒಂದು ತಿಂಗಳಾದ ಕಾರಣ, ಆಮ್ ಆದ್ಮಿ ಪಾರ್ಟಿ (Aam Aadmi Party) ಚುನಾವಣೆಯ ವೇಳೆ ತಾನು ಘೋಷಣೆ ಮಾಡಿದ್ದ ಪ್ರಮುಖ ಆಶ್ವಾಸನೆಯನ್ನು ಈಡೇರಸುವುದಾಗಿ ಹೇಳಿದೆ. ಮುಂದಿನ ಜುಲೈನಿಂದ ಪ್ರತಿ ಮನೆಗೂ 300 ಯುನಿಟ್ ಗಳ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagwant Mann) ಘೋಷಣೆ ಮಾಡಿದ್ದಾರೆ. ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯದಲ್ಲಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಶನಿವಾರ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಬಂದಿದೆ. ಪಂಜಾಬ್ ಸರ್ಕಾರವು ಈ ವಾರ ಉಚಿತ ವಿದ್ಯುತ್ ಘೋಷಣೆ (Free Power) ಮಾಡಬಹುದೆಂದು ಬಹುತೇಕ ಅಂದಾಜು ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಜನತೆಗೆ ಶೀಘ್ರದಲ್ಲೇ "ಒಳ್ಳೆಯ ಸುದ್ದಿ" ನೀಡುವುದಾಗಿ ಹೇಳಿದ್ದರು.  "ನಮ್ಮ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರೊಂದಿಗೆ ಅದ್ಭುತವಾದ ಸಭೆ ನಡೆಸಿದ್ದೇವೆ. ಶೀಘ್ರದಲ್ಲೇ, ಪಂಜಾಬ್ ಜನರಿಗೆ ಒಳ್ಳೆಯ ಸುದ್ದಿ ನೀಡುತ್ತೇನೆ" ಎಂದು ಭಗವಂತ್ ಮಾನ್ ಟ್ವಿಟರ್ ಸಂದೇಶದ ಮೂಲಕ ತಿಳಿಸಿದ್ದರು.

ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ಪಂಜಾಬ್ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಆಪ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಭರವಸೆ ನೀಡುವ ವೇಳೆ ಮಾತನಾಡಿದ್ದ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ, ದೀರ್ಘ ವಿದ್ಯುತ್ ಕಡಿತವನ್ನು ವಿಧಿಸಲಾಗುತ್ತದೆ ಮತ್ತು ಅನೇಕ ಜನರು ದೊಡ್ಡ ಮೊತ್ತದ ಬಿಲ್ ಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದರು.

ಪಂಜಾಬ್ ನ ಹೆಚ್ಚಿನ ಗ್ರಾಮದಲ್ಲಿ "ತಪ್ಪಾದ" ವಿದ್ಯುತ್ ಬಿಲ್ ಗಳನ್ನು ಪಡೆದವರಿದ್ದಾರೆ. ಬಿಲ್ ಪಾವತಿ ಮಾಡದ ಇಂಥ ಮನೆಗಳ ವಿದ್ಯುತ್  ಸಂಪರ್ಕವನ್ನು ಕಡಿತ ಮಾಡಲಾಗಿದೆ. ಇದೇ ಕಾರಣದಿಂದಾಗಿ ಇವರುಗಳು ವಿದ್ಯುತ್ ಕಳ್ಳತನಕ್ಕೆ ಇಳಿದಿದ್ದರು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ದೆಹಲಿಯಲ್ಲಿ, ಎಎಪಿ ಸರ್ಕಾರವು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ ತಿಂಗಳು ಮನೆ ಬಾಗಿಲಿಗೆ ಪಡಿತರ ವಿತರಣೆ ( doorstep ration delivery scheme) ಯೋಜನೆಯನ್ನು ಘೋಷಿಸಿದರು, ಇದು ಚುನಾವಣೆಯಲ್ಲಿ ಎಎಪಿಯ ಪ್ರಮುಖ ಪ್ರಚಾರ ಕಾರ್ಯಸೂಚಿಯಾಗಿತ್ತು.  ಮಾರ್ಚ್ 19 ರಂದು, ಭಗವಂತ್ ಮಾನ್ ಅವರು ತಮ್ಮ ಮೊದಲ ಕ್ಯಾಬಿನೆಟ್ ಸಭೆಯ ( First Cabinet Meeting ) ಮೊದಲ ನಿರ್ಧಾರದಲ್ಲಿ, ಪೊಲೀಸ್ ಇಲಾಖೆಯಲ್ಲಿ 10,000 ಸೇರಿದಂತೆ ವಿವಿಧ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 25,000 ಉದ್ಯೋಗಗಳ ನೋಟಿಫಿಕೇಶನ್ ಅನ್ನು ಪ್ರಕಟಿಸಿದ್ದರು.

ಕಳೆದ ತಿಂಗಳು ನಡೆದ ಪಂಜಾಬ್ ಅಸೆಂಬ್ಲಿ (Punjab Election ) ಚುನಾವಣೆಯಲ್ಲಿ, ಆಮ್ ಆದ್ಮಿ ಪಾರ್ಟಿ,  ಕಾಂಗ್ರೆಸ್, ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮತ್ತು ಬಿಜೆಪಿ-ಪಂಜಾಬ್ ಲೋಕ ಕಾಂಗ್ರೆಸ್-ಎಸ್‌ಎಡಿ (ಸಂಯುಕ್ತ) ಮೈತ್ರಿಯನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೇರಿತ್ತು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 18 ಸ್ಥಾನಗಳನ್ನು ಪಡೆದರೆ, ಎಎಪಿ 92 ಸ್ಥಾನಗಳನ್ನು ಗೆದ್ದುಕೊಂಡಿದೆ.

click me!