
ಅಲ್ವಾರ: ಇತ್ತೀಚೆಗೆ ಅಕ್ರಮ ಸಂಬಂಧಗಳಿಗೆ ಸಂಬಂಧಿಸಿದಂತೆ ಹೆಂಡ್ತಿ ಗಂಡನನ್ನು ಗಂಡ ಹೆಂಡ್ತಿಯನ್ನು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಇಲ್ಲೊಂದು ಕಡೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರೇಮಿಯ ಜೊತೆ ಸೇರಿ ಅಪ್ರಾಪ್ತ ಮಗನ ಮುಂದೆಯೇ ಗಂಡನ ಹತ್ಯೆ ಮಾಡಿದ್ದಾಳೆ. ಜೂನ್ 7ರಂದು ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ ಅಲ್ವಾರ ಜಿಲ್ಲೆಯ ಖೆರ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಹೆಂಡ್ತಿಯ ಈ ಅಕ್ರಮ ಸಂಬಂಧಕ್ಕೆ ಬಲಿಯಾದ ವ್ಯಕ್ತಿಯನ್ನು ವೀರು ಅಲಿಯಾಸ್ ಮಾನ್ ಸಿಂಗ್ ಜಾತವ್ ಎಂದು ಗುರುತಿಸಲಾಗಿದೆ. ವೀರು ತಮ್ಮ ಮನೆಯಲ್ಲೇ ಹಠಾತ್ ಆಗಿ ಸಾವನ್ನಪ್ಪಿದ್ದರು. ಆತನ ಪತ್ನಿ ಅನಿತಾ ಹಠಾತ್ ಆಗಿ ಆರೋಗ್ಯ ಸಮಸ್ಯೆಯಾಗಿ ಪತಿ ವೀರು ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಳು. ಆದರೆ ಘಟನೆ ನಡೆದು 48ಗಂಟೆಯೊಳಗಡೆ ಪತ್ನಿಯ ಮುಖವಾಡ ಬಯಲಾಗಿದೆ. ಈ ದಂಪತಿಯ 9 ವರ್ಷದ ಮಗನೇ ಪೊಲೀಸರ ಮುಂದೆ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಪೊಲೀಸರು ಆಕೆಯನ್ನು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.
9 ವರ್ಷದ ಮಗು ಹೇಳಿದ ಸಾಕ್ಷ್ಯದ ಪ್ರಕಾರ ಆ ರಾತ್ರಿ ಅವನ ತಾಯಿ ಮನೆಯ ಮುಖ್ಯ ದ್ವಾರವನ್ನು ಉದ್ದೇಶಪೂರ್ವಕವಾಗಿ ತೆರೆದಿಟ್ಟಿದ್ದಳು. ಮಧ್ಯರಾತ್ರಿ ಸುಮಾರಿಗೆ ಮಗು, ಕಾಶಿ ಅಂಕಲ್ ಎಂದು ಗುರುತಿಸಲಾದ ವ್ಯಕ್ತಿ ಇತರ ನಾಲ್ವರು ಪುರುಷರೊಂದಿಗೆ ಮನೆಗೆ ಪ್ರವೇಶಿಸಿದರು. ಈ ವೇಳೆ ನಿದ್ದೆಗೆ ಜಾರಿದ್ದ ವೀರುವನ್ನು ಹಾಸಿಗೆಯಲ್ಲಿ ಅವರು ಮಲಗಿದ್ದಾಗಲೇ ಉಸಿರುಗಟ್ಟಿಸಿ ಹಲ್ಲೆ ಮಾಡಿ ಕೊಂದಿದ್ದಾರೆ. ಆತನ ಹತ್ತಿರದಲ್ಲಿಯೇ ಮಲಗಿ ನಿದ್ದೆ ಮಾಡುತ್ತಿದ್ದಂತೆ ನಟಿಸಿದ ಮಗು ತಾನು ಎಲ್ಲವನ್ನೂ ನೋಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾನೆ. ಘಟನೆಯಲ್ಲಿ ಮಗು ಕಾಶಿ ಅಂಕಲ್ ಎಂದು ಗುರುತಿಸಿದ ವ್ಯಕ್ತಿಯನ್ನು ಕಾಶಿರಾಮ್ ಪ್ರಜಾಪತ್ ಎಂದು ಗುರುತಿಸಲಾಗಿದೆ.
ನಾನು ನಿದ್ರೆಗೆ ಜಾರಿದ್ದಾಗ ಬಾಗಿಲಲ್ಲಿ ಸಣ್ಣ ಶಬ್ದ ಕೇಳಿಸಿತು. ನಾನು ಕಣ್ಣು ತೆರೆದಾಗ ನನ್ನ ತಾಯಿ ಗೇಟ್ ತೆರೆಯುವುದನ್ನು ನೋಡಿದೆ. ಕಾಶಿ ಅಂಕಲ್ ಹೊರಗೆ ನಿಂತಿದ್ದರು. ಅವರೊಂದಿಗೆ ಇನ್ನೂ ನಾಲ್ಕು ಜನರಿದ್ದರು. ನನಗೆ ಭಯವಾಯಿತು, ನಾನು ಎದ್ದೇಳಲಿಲ್ಲ, ನಾನು ಎಲ್ಲವನ್ನೂ ಸದ್ದಿಲ್ಲದೆ ನೋಡಲಾರಂಭಿಸಿದೆ. ಅವರು ನಮ್ಮ ಕೋಣೆಗೆ ಬಂದರು. ನಾನು ಎದ್ದು ನೋಡಿದಾಗ ನನ್ನ ತಾಯಿ ಹಾಸಿಗೆಯ ಮುಂದೆ ನಿಂತಿರುವುದನ್ನು ನೋಡಿದೆ. ಆ ಜನರು ಅಪ್ಪನನ್ನು ಹೊಡೆದರು, ಅವನ ಕಾಲುಗಳನ್ನು ತಿರುಗಿಸಿದರು ಮತ್ತು ಅವನನ್ನು ಉಸಿರುಗಟ್ಟಿಸಿದರು. ಕಾಶಿ ಅಂಕಲ್ ನನ್ನ ಅಪ್ಪನ ಮುಖಕ್ಕೆ ದಿಂಬಿನಿಂದ ಒತ್ತಿ ಬಾಯಿ ಮುಚ್ಚಿದ್ದರು. ನಾನು ನನ್ನ ತಂದೆಯನ್ನು ಹುಡುಕಲು ಕೈ ಚಾಚಿದಾಗ ಕಾಶಿ ಅಂಕಲ್ ನನ್ನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ಗದರಿಸಿ ಬೆದರಿಸಿದರು. ಭಯದಿಂದ ನಾನು ಮೌನವಾದೆ. ಕೆಲವು ನಿಮಿಷಗಳ ನಂತರ, ತಂದೆ ನಿಧನರಾದರು. ನಂತರ ಎಲ್ಲರೂ ಹೊರಟು ಹೋದರು ಎಂದು ಮಗು ಹೇಳಿದೆ.
ಪೊಲೀಸರ ಪ್ರಕಾರ, ಅನಿತಾ ಮತ್ತು ಕಾಶಿರಾಮ್ ಈ ಕೊಲೆಗೆ ಮೊದಲೇ ಯೋಜನೆ ರೂಪಿಸಿದ್ದರು. ಅವರ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣವಾಗಿತ್ತು. ಅನಿತಾ ಖೇರ್ಲಿಯಲ್ಲಿ ಒಂದು ಸಣ್ಣ ಜನರಲ್ ಸ್ಟೋರ್ ನಡೆಸುತ್ತಿದ್ದಳು, ಆಕೆಗೆ ಅದೇ ಬೀದಿಯಲ್ಲಿ ಕಚೋರಿಗಳನ್ನು ಮಾರಾಟ ಮಾಡುವ ಸ್ಥಳೀಯ ಬೀದಿ ವ್ಯಾಪಾರಿ ಕಾಶಿರಾಮ್ ಜೊತೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಹೀಗಾಗಿ ಅನಿತಾಳ ಪತಿ ವೀರುವನ್ನು ಮುಗಿಸುವುದಕ್ಕೆ ಇವರಿಬ್ಬರು ಯೋಜನೆ ರೂಪಿಸಿದ್ದರು. ಇದಕ್ಕಾಗಿ 2 ಲಕ್ಷ ನೀಡಿ ಕಂಟ್ರಾಕ್ಟ್ ಕಿಲ್ಲರ್‌ಗಳನ್ನು ನೇಮಿಸಿದ್ದರು.
ಅದರಂತೆ ಜೂನ್ 7 ರ ರಾತ್ರಿ, ಅನಿತಾ ಮುಖ್ಯ ಬಾಗಿಲಿಗೆ ಚಿಲಕ ಹಾಕದೆಯೇ ತನ್ನ ಯೋಜನೆಯ ಭಾಗವನ್ನು ಕಾರ್ಯಗತಗೊಳಿಸಿದಳು. ಇತ್ತ ಕಾಶಿರಾಮ್ ಬಾಡಿಗೆ ಹಂತಕನೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಬಂದಿದ್ದ, ವೀರು ನಿದ್ರೆಯಲ್ಲಿದ್ದಾಗಲೇ ಹಲ್ಲೆ ಮಾಡಿ ಆತನ ಕತೆ ಮುಗಿಸಿ ಮುಂಜಾನೆ ಬೆಳಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.
ಆರಂಭದಲ್ಲಿ, ವೀರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಎಂದು ಅನಿತಾ ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ವೀರು ದೇಹದಲ್ಲಿದ್ದ ಸ್ಪಷ್ಟವಾದ ಗಾಯದ ಗುರುತುಗಳು, ಮುರಿದ ಹಲ್ಲು ಮತ್ತು ಉಸಿರುಗಟ್ಟಿಸಿದ ಚಿಹ್ನೆಗಳು ಸೇರಿದಂತೆ ದೇಹದ ಸ್ಥಿತಿಗತು ಅನುಮಾನಗಳಿಗೆ ಕಾರಣವಾಯಿತು. ವೈದ್ಯಕೀಯ ಪರೀಕ್ಷೆಯು ವೀರು ಕೊಲೆಯಾಗಿರುವುದನ್ನು ದೃಢಪಡಿಸಿದವು.
ನಂತರ ವೀರುವಿನ ಸೋದರ ಗಬ್ಬರ್ ಜಾತವ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದರು. ನಂತರ ಆ ಪ್ರದೇಶದ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸುವುದರ ಜೊತೆಗೆ ಆರೋಪಿಗಳ ದೂರವಾಣಿ ಕರೆಗಳ ವಿವರವನ್ನು ಕಲೆ ಹಾಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಅನಿತಾ, ಕಾಶಿರಾಮ್ ಮತ್ತು ಗುತ್ತಿಗೆ ಹಂತಕರಲ್ಲಿ ಒಬ್ಬನಾದ ಬ್ರಿಜೇಶ್ ಜಾತವ್ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ