
ಉತ್ತರಪ್ರದೇಶದ ಹಮೀರ್‌ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ತನ್ನ ಕಾಣೆಯಾದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ಕೂಡ ನಡೆಸಿದ್ದರು. ಆದರೆ ಹೀಗೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ತಂದೆಯ ಕಣ್ಣಿಗೆ ಬಿದ್ದಿದ್ದು, ಮಗಳ ಕಳೆದುಕೊಂಡ ದುಃಖದಲ್ಲಿದ್ದ ಅವರೀಗ ಮಗಳನ್ನು ಪ್ರೇಮಿಯ ಜೊತೆ ಜೀವಂತವಾಗಿ ನೋಡಿ ಆಘಾತಕ್ಕೊಳಗಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಜೂನ್ 7ರಂದು ಜರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಾ ಕಚ್ವಾ ಲಿಂಕ್ ರಸ್ತೆಯ ಬಳಿ ಇರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯ ಕೆಳಗೆ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಇದಾದ ಮರುದಿನ ಮುಸ್ಕಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹುನಿ ಗ್ರಾಮದ ನಿವಾಸಿಯೊಬ್ಬರು ಆ ಹುಡುಗಿಯ ಶವವನ್ನು ತನ್ನ 17 ವರ್ಷ ಪ್ರಾಯದ ಕಾಣೆಯಾದ ಮಗಳ ಶವವೆಂದು ಗುರುತಿಸಿದರು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಆ ಹುಡುಗಿಯ ಶವವನ್ನು ಶವ ತನ್ನ ಮಗಳದ್ದು ಎಂದು ಹೇಳಿದ್ದ ವ್ಯಕ್ತಿಗೆ ನೀಡಿದ್ದರು. ಎಳೆಯ ಪ್ರಾಯದ ಮಗಳ ಸಾವನ್ನು ಅರಗಿಸಿಕೊಳ್ಳಲಾಗದೇ ಕೊರಗುತ್ತಲೇ ಆ ತಂದೆ ಮಗಳ ಅಂತಿಮ ಸಂಸ್ಕಾರ ನಡೆಸಿದ್ದರು.
ಇದಾದ ನಂತರ ಜೂನ್ 9ರಂದು ಯುವತಿಯ ತಂದೆ ಗ್ರಾಮದ ಇಬ್ಬರು ತನ್ನ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಜೂನ್ 17ರಂದು ಆ ಹುಡುಗಿ ತನ್ನ ಪ್ರಿಯಕರನ ಜೊತೆ ಹಾಯಾಗಿ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ಇತ್ತ ತಂದೆ ದೈಹಿಕ ಹೋಲಿಕೆಯ ಮೇರೆಗೆ ಶವವನ್ನು ತನ್ನ ಮಗಳದ್ದು ಎಂದು ಗುರುತಿಸಿದ್ದಾಗಿ ತಂದೆ ಹೇಳಿದ್ದಾರೆ. ಇತ್ತ ಪೊಲೀಸರು ಪ್ರಿಯಕರನ ಜೊತೆ ತಿರುಗಾಡುತ್ತಿದ್ದ ಯುವತಿಯೂ ಅಪ್ರಾಪ್ತೆಯಾಗಿರುವುದರಿಂದ ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. ಆಕೆಯ ಹೇಳಿಕೆಯನ್ನು ಕೂಡ ದಾಖಲಿಸಲಾಗುವುದು ಎಂದು ಠಾಣಾಧಿಕಾರಿ ಮಾಯಾಂಕ್ ಚಾಂಡೆಲ್ ಹೇಳಿದ್ದಾರೆ.
ಇತ್ತ ಸುಟ್ಟು ಸ್ಥಿತಿಯಲ್ಲಿ ಸಿಕ್ಕ ಶವ ಯಾರದ್ದು ಎಂಬ ಹೊಸ ಚಿಂತೆ ಈಗ ಪೊಲೀಸರನ್ನು ಕಾಡುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾಗೂ ಸ್ಥಳೀಯವಾಗಿ ಕಾಣೆಯಾದವರ ಪಟ್ಟಿಯ ಜೊತೆ ಹೋಲಿಕೆ ನಡೆಸಿದ್ದಾರೆ. ಆದರೆ ಇತ್ತ ತಾನು ಮೃತಳೆಂದು ಭಾವಿಸಿ ಅಂತ್ಯಸಂಸ್ಕಾರವನ್ನು ನಡೆಸಿದ್ದ ನಂತರ ಪುತ್ರಿ ಜೀವಂತವಾಗಿರುವುದನ್ನು ನೋಡಿ ಅಳಬೇಕು ನಗಬೇಕೋ ಎಂಬುದು ತೋಚದಂತಹ ಸ್ಥಿತಿಯಲ್ಲಿ ಆ ಯುವತಿಯ ತಂದೆಗೆ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ