ನವದೆಹಲಿ(ಡಿ.29): ದೇಶದಲ್ಲಿ ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಮತ್ತೆರಡು ಲಸಿಕೆಗಳು ಮತ್ತು ಔಷಧಕ್ಕೆ ನಿಯಂತ್ರಿತ ತುರ್ತು ಬಳಕೆಗೆ ಅವಕಾಶ ನೀಡಿದೆ. ತನ್ಮೂಲಕ ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಒಟ್ಟಾರೆ 8 ಲಸಿಕೆಗಳು ಮತ್ತು 4 ಚಿಕಿತ್ಸಕ ಮದ್ದುಗಳು ಲಭ್ಯವಿವೆ.
ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್-ವಿ, ಭಾರತದ್ದೇ ಆದ 3 ಡೋಸ್‌ನ ಸೂಜಿರಹಿತ ಲಸಿಕೆ ಝೈಡಸ್ ಕ್ಯಾಡಿಲಾ, ಅಮೆರಿಕದ ಮಾಡೆæರ್ನಾ, ಜಾನ್ಸನ್ ಅಂಡ್ ಜಾನ್ಸನ್, ಕೋವೋವ್ಯಾಕ್ಸ್, ಹೈದರಾಬಾದ್‌ನ ಬಯೋಲಾಜಿಕಲ್-ಇ ಸಂಸ್ಥೆಯ ಕೋರ್ಬೆವ್ಯಾಕ್ಸ್ ಸೇರಿ ಒಟ್ಟಾರೆ 8 ಲಸಿಕೆಗಳು ಲಭ್ಯವಿವೆ.
Covid 19 Variant: ಒಮಿಕ್ರೋನ್ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್!
ಇದಲ್ಲದೆ ಅಮೆರಿಕದ ಮರ್ಕ್ಸ್ ಕಂಪನಿ ಅಭಿವೃದ್ಧಿಪಡಿಸಿದ ಮೊಲ್ನಪಿರಾವಿರ್ ಮಾತ್ರೆಗಳು, ಸ್ವಿಸ್ ಫರ್ಮಾಕ್ಯುಟಿಕಲ್ ಕಂಪನಿಯ ಟೊಸಿಲಿಜುಮ್ಯಾಬ್, ಡಿಆರ್‌ಡಿಒ ಸಹಯೋಗದಲ್ಲಿ ಡಾ. ರೆಡ್ಡೀಸ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ ಮತ್ತು ರಿಜೆನ್-ಕೋವ್-2 ಆ್ಯಂಟಿಬಾಡಿ ಎಂಬ ಮಾತ್ರೆಗಳು ಕೊರೋನಾ ವಿರುದ್ಧದ ಮಾತ್ರೆಗಳಾಗಿವೆ.
ಮಂಗಳವಾರ ದೇಶದಲ್ಲಿ ಕೊರೋನಾ ಕೇಸ್ ಎಷ್ಟು :
ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶಾದ್ಯಂತ 6358 ಮಂದಿಗೆ ಕೊರೋನಾ ಸೋಂಕು ಕಂಡುಬಂದಿದೆ. ಇದೇ ವೇಳೆ 293 ಮಂದಿ ಈ ವ್ಯಾಧಿಗೆ ಬಲಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 75,456ಕ್ಕೆ ಕುಸಿತವಾಗಿದೆ. ಇನ್ನೊಂದೆಡೆ ಮಂಗಳವಾರ 75 ಜನರಲ್ಲಿ ಹೊಸದಾಗಿ ಒಮಿಕ್ರೋನ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 653ಕ್ಕೆ ತಲುಪಿದೆ. ಇದರಲ್ಲಿ 186 ಮಂದಿ ಒಮಿಕ್ರೋನ್ ಸೋಂಕಿತರು ಗುಣಮುಖರಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 167, ದೆಹಲಿ 165, ಕೇರಳ 57, ತೆಲಂಗಾಣ 55, ಗುಜರಾತ್ 49 ಮತ್ತು ರಾಜಸ್ಥಾನದಲ್ಲಿ 46 ಒಮಿಕ್ರೋನ್ ಕೇಸ್‌ಗಳು ಪತ್ತೆಯಾಗಿವೆ.
ಕರ್ನಾಟಕದಲ್ಲಿ ಕೊರೋನಾ :
ರಾಜ್ಯದಲ್ಲಿ ಕೊರೋನಾ (Coronavirus) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಇಂದು (ಮಂಗಳವಾರ) 356 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,05,232ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 38,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಹೊರಡಿಸಿದೆ.
ಇದುವರೆಗೆ ರಾಜ್ಯದಲ್ಲಿ 30,05,23 ಸೋಂಕಿತರ ಪೈಕಿ 2959429 ಜನ ಗುಣಮುಖರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ 7456 ಸಕ್ರಿಯ ಪ್ರಕರಗಳಿವೆ. ಇನ್ನು ಬೆಂಗಳೂರಿನಲ್ಲಿ (Benglauur) ಮಂಗಳವಾರ 269 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,61,997ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ.