ಮಧ್ಯಪ್ರದೇಶದ ಖಂಡ್ವಾದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ 7 ಜನರು ಸೇರಿ ಒಟ್ಟು 8 ಜನ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.
ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 7 ಜನ ಹೋಗಿ ಎಂಟು ಜನ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ ವೇಳೆ ಈ ದುರಂತ ನಡೆದಿದೆ. ಮಧ್ಯಪ್ರದೇಶದ ಖಂಡ್ವಾದಲ್ಲಿ ಈ ಘಟನೆ ನಡೆದಿದ್ದು, ರಕ್ಷಿಸಲು ಹೋದ ಒಬ್ಬರೂ ಹಿಂದಿರುಗಿ ಬಂದಿಲ್ಲ.
ಈ ವಿಚಾರ ತಿಳಿದು ರಕ್ಷಣಾ ತಂದ ಸ್ಥಳಕ್ಕೆ ಹೋಗುವ ವೇಳೆ ಎಲ್ಲರೂ ಬಾವಿಯ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಯುವಕರ ಈ ಹಠಾತ್ ಸಾವಿನಿಂದ ಖಂಡ್ವಾ ಜಿಲ್ಲೆಯ ಕೊಂಡಾವತ್ ಗ್ರಾಮ ಶೋಕದಲ್ಲಿ ಮುಳುಗಿದೆ. ಇಲ್ಲಿ ಗಂಗೌರ್ ಹಬ್ಬದ ಆಚರಣೆ ನಡೆಯುತ್ತಿತ್ತು. ಆದರೆ ಯುವಕರ ಸಾವಿನಿಂದಾಗಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕ ಆವರಿಸಿದೆ. ಮೃತರಾದ 8 ಜನರೂ ಕೂಡ ಗಂಗೌರ್ ಹಬ್ಬದ ಆಚರಣೆಯ ಭಾಗವಾಗಿ ನೀರಿನಲ್ಲಿ ಮುಳುಗುವುದಕ್ಕಾಗಿ ಈ ಬಾವಿಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದ ವೇಳೆ ಈ ದುರಂತ ನಡೆದಿದೆ.
ಕೊಂಡಾವತ್ ಗ್ರಾಮವೂ ಇಂದೋರ್‌ನಿಂದ ದಕ್ಷಿಣಕ್ಕೆ 120 ಕಿಮೀ ದೂರದಲ್ಲಿದ್ದು ಮತ್ತು ಜಿಲ್ಲಾ ಕೇಂದ್ರದಿಂದ 15 ಕಿಮೀ ದೂರದಲ್ಲಿದೆ. ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಹಗ್ಗ ತುಂಡಾಗಿ ಮಧ್ಯಾಹ್ನದ ವೇಳೆ ಒಬ್ಬ ಯುವಕ ಬಾವಿಗೆ ಬಿದ್ದಿದ್ದಾನೆ. ಆದರೆ ಬಾವಿಯ ಕೆಸರಿನಲ್ಲಿ ಸಿಲುಕಿದ ಆತನಿಗೆ ಮೇಲೆ ಬರಲಾಗಲಿಲ್ಲ. ಇದನ್ನು ಕಂಡು ಒಬ್ಬೊಬ್ಬರಾಗಿ ಏಳು ಮಂದಿ ಗ್ರಾಮಸ್ಥರು ಒಬ್ಬರನ್ನೊಬ್ಬರು ರಕ್ಷಿಸಲು ಬಾವಿಗೆ ಧುಮುಕಿ ಸಾವನ್ನಪ್ಪಿದ್ದಾರೆ. ಬಾವಿಯೊಳಗಿದ್ದ ವಿಷಾನಿಲದಿಂದ ಉಸಿರುಗಟ್ಟಿ ಈ ಸರಣಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಖಾಂಡ್ವಾ ಎಸ್ಪಿ ಮನೋಜ್ ರೈ ತಿಳಿಸಿದ್ದಾರೆ.
ಈ ಬಾವಿಯ ನೀರನ್ನು ಕುಡಿಯುವುದಕ್ಕೆ ಬಳಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಇತ್ತ ಬಾವಿಗೆ ಬಿದ್ದ ಒಬ್ಬರೂ ಕೂಡ ಮೇಲೆ ಬಾರದ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ವಿಚಾರ ತಿಳಿಸಿದ್ದಾರೆ. ಕೂಡಲೇ 100 ಜನರ ರಕ್ಷಣಾ ತಂಡವನ್ನು ಘಟನೆ ನಡೆದ ಕೊಂಡಾವತ್ ಗ್ರಾಮಕ್ಕೆ ಕಳುಹಿಸಿಕೊಡಲಾಯ್ತು. ರಾಜ್ಯ ವಿಪತ್ತು ನಿರ್ವಹಣಾ (ಎಸ್‌ಡಿಇಆರ್‌ಎಫ್) ವಿಭಾಗದ ಹದಿನೈದು ಸದಸ್ಯರು ಕೆಸರಿನಲ್ಲಿ ಮುಳುಗಿದ ಯುವಕರ ಪತ್ತೆ ಮಾಡಲು ಗಂಟೆಗಳ ಕಾಲ ಹೆಣಗಾಡಿದ್ದಾರೆ. ಹೀಗೆ ದುರಂತದಲ್ಲಿ ಮೃತರಾದವರನ್ನು ರಾಕೇಶ್, ವಾಸುದೇವ್, ಅರ್ಜುನ್, ಗಜಾನಂದ್, ಮೋಹನ್, ಅಜಯ್, ಶರಣ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾಂಡ್ವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಗ್ರಾಮದ ಒಳಚರಂಡಿ ಕಾಲುವೆಯ ನೀರು ಬಾವಿಗೆ ಹರಿಯುತ್ತಿದ್ದಿದ್ದರಿಂದ ಇದು ಕಾಲಾನಂತರದಲ್ಲಿ ಕೊಳಕು ನೀರಾಗಿ ಬದಲಾಗಿದೆ. ಹೀಗಾಗಿ ಮಾಲಿನ್ಯದಿಂದಾಗಿ ಬಾವಿಯಲ್ಲಿ ವಿಷಕಾರಿ ಅನಿಲಗಳು ಬಿಡುಗಡೆಯಾಗಿವೆ ಎಂದು ನಂಬಲಾಗಿದೆ.ಈ ಬಾವಿಯನ್ನು ಹಬ್ಬ ಹರಿದಿನಗಳಲ್ಲಿ ವಿಗ್ರಹಗಳ ನಿಮಜ್ಜನಕ್ಕೆ ಮಾತ್ರ ಬಳಸಲಾಗುತ್ತಿತ್ತು, ಕುಡಿಯುವ ನೀರಿನ ಮೂಲವಾಗಿ ಬಳಸುತ್ತಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸಂತ್ರಸ್ತ ಯುವಕರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಿಶವ್ ಗುಪ್ತಾ ತಿಳಿಸಿದ್ದಾರೆ.