IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!

Published : Aug 15, 2026, 10:46 PM IST
IAS

ಸಾರಾಂಶ

ಭ್ರಷ್ಟಾಚಾರದಂತಹ ಸವಾಲುಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಿದ ಎಂಟು ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಸ್ಪೂರ್ತಿದಾಯಕ ಕಥೆಯಿದು. ಇದರಲ್ಲಿದ್ದಾರೆ ಒಬ್ಬ ಕನ್ನಡದ ಕಲಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

ಭಾರತದ ಆಡಳಿತ ಯಂತ್ರದಲ್ಲಿ ರಾಜಕೀಯ ಒತ್ತಡ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳ ಭರಾಟೆ ಹೆಚ್ಚಿದ್ದರೂ, ವ್ಯವಸ್ಥೆಯ ಮುಂದೆ ತಲೆಬಾಗದೆ ಸತ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿಯೇ ಜೀವಮಾನವಿಡೀ ಹೋರಾಡಿದ ಅನೇಕ ಐಎಎಸ್ ಅಧಿಕಾರಿಗಳಿದ್ದಾರೆ. ಕೋಟಿ ಕೋಟಿ ಹಣದ ಆಮಿಷಗಳು ಬಂದರೂ, ಸತತ ವರ್ಗಾವಣೆ ಮತ್ತು ಅಮಾನತಿನ ಭೀತಿ ಎದುರಾದರೂ ಕಟಿಬದ್ಧರಾಗಿ ನಿಂತ ಭಾರತದ ೮ ಪ್ರಮುಖ ರಿಯಲ್ ಹೀರೋಗಳ ರೋಚಕ ಕಥೆ ಇಲ್ಲಿದೆ.

1. ಡಿ. ಕೆ. ರವಿ (ಕರ್ನಾಟಕ ಕೇಡರ್ – ನಮ್ಮ ಹೆಮ್ಮೆಯ ಕನ್ನಡಿಗ)

೨೦೦೯ ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಕನ್ನಡಿಗ ಡಿ. ಕೆ. ರವಿ, ಕೋಲಾರ ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಮರಳು ದಂಧೆಕೋರರ ಸಿಂಹಸ್ವಪ್ನವಾಗಿದ್ದರು. ನಂತರ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿ, ಪ್ರಭಾವಿ ಉದ್ಯಮಿಗಳು ಹಾಗೂ ಬೃಹತ್ ಕಂಪನಿಗಳ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯನ್ನು ಬಯಲಿಗೆಳೆದರು. ಮಾರ್ಚ್ ೧೬, ೨೦೧೫ ರಂದು ಅವರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಇಡೀ ಕರ್ನಾಟಕವೇ ಕಣ್ಣೀರಿಟ್ಟಿತ್ತು.

2. ಅಶೋಕ್ ಖೇಮ್ಕಾ (ಹರಿಯಾಣ ಕೇಡರ್)!

೧೯೯೧ ರ ಬ್ಯಾಚ್‌ನ ಈ ಅಧಿಕಾರಿಯ ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವೆಂದರೆ ಸತತ 57 ವರ್ಗಾವಣೆ. 34 ವರ್ಷಗಳ ವೃತ್ತಿಜೀವನದಲ್ಲಿ ರಾಬರ್ಟ್ ವಾದ್ರಾ ಮತ್ತು ಡಿಎಎಲ್ಎಫ್ (DLF) ಭೂ ಹೂಡಿಕೆ ಅಕ್ರಮ ಸೇರಿದಂತೆ ಹತ್ತಾರು ಪ್ರಭಾವಿ ರಾಜಕಾರಣಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದ ಖೇಮ್ಕಾ, ಎಂದಿಗೂ ಯಾರ ಮುಖಕ್ಕೂ ಬಗ್ಗಲಿಲ್ಲ.

3. ದುರ್ಗಾ ಶಕ್ತಿ ನಾಗಪಾಲ್ (ಉತ್ತರ ಪ್ರದೇಶ ಕೇಡರ್)!

ದೇಶದ ಅತ್ಯಂತ ಪ್ರಸಿದ್ಧ ಮಹಿಳಾ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಇವರು, ಉತ್ತರ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆಯ ವಿರುದ್ಧ ಸಮರ ಸಾರಿದ್ದರು. ಇದರ ಪರಿಣಾಮವಾಗಿ ಇವರನ್ನು ಅಮಾನತುಗೊಳಿಸಲಾಯಿತಾದರೂ, ದೇಶಾದ್ಯಂತ ಸಾರ್ವಜನಿಕರ ಬೆಂಬಲ ವ್ಯಕ್ತವಾಗಿ ಸರ್ಕಾರವೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕಾಯಿತು.

4. ಆರ್ಮ್‌ಸ್ಟ್ರಾಂಗ್ ಪೇಮ್ (ಮಣಿಪುರ ಕೇಡರ್ - ಮಿರಾಕಲ್ ಮ್ಯಾನ್)!

ನಾಗಾ ಸಮುದಾಯದಿಂದ ಬಂದ ಮೊದಲ ಐಎಎಸ್ ಅಧಿಕಾರಿಯಾದ ಇವರು, ಮಣಿಪುರದಲ್ಲಿ ಎಸ್‌ಡಿಎಂ ಆಗಿದ್ದಾಗ ರಸ್ತೆ ಸೌಕರ್ಯವಿಲ್ಲದೆ ಪರದಾಡುತ್ತಿದ್ದ ಜನರಿಗಾಗಿ ಸೋಶಿಯಲ್ ಮೀಡಿಯಾ ಮೂಲಕ ಹಣ ಸಂಗ್ರಹಿಸಿ, ಸರ್ಕಾರದ ಬಿಡಿಗಾಸಿನ ನೆರವಿಲ್ಲದೆ ಜನರೇ ಸೇರಿ 100 ಕಿ.ಮೀ ಉದ್ದದ ರಸ್ತೆ ನಿರ್ಮಿಸುವಂತೆ ಮಾಡಿದರು.

5. ತುಕಾರಾಂ ಮುಂಡೆ (ಮಹಾರಾಷ್ಟ್ರ ಕೇಡರ್)!

೨೧ ವರ್ಷಗಳಲ್ಲಿ ೨೫ ಬಾರಿ ವರ್ಗಾವಣೆಗೊಂಡ ಇವರು, ೨೦೨೬ರಲ್ಲೂ ದೇಶದ ಅತ್ಯಂತ ಕಟ್ಟುನಿಟ್ಟಿನ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬೈನ ಪ್ರಸಿದ್ಧ ಕೆ. ರುಸ್ತಮ್ ಐಸ್ ಕ್ರೀಮ್ ಮಳಿಗೆ ಸೇರಿದಂತೆ ಕಲಬೆರಕೆ ಹಾಲು, ಅಕ್ರಮ ಗುಟ್ಕಾ ಹಾಗೂ ಆಹಾರ ಪ ಕಲಬೆರಕೆದಾರರ ವಿರುದ್ಧ ಧಾಳಿ ನಡೆಸಿ ದಂಗೆಯೆಬ್ಬಿಸಿದವರು.

6. ರಾಜು ನಾರಾಯಣ ಸ್ವಾಮಿ (ಕೇರಳ ಕೇಡರ್)!

ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾದ ಇವರು ೨೨ ವರ್ಷಗಳ ಸೇವೆಯಲ್ಲಿ ೨೦ ಬಾರಿ ವರ್ಗಾವಣೆಯಾದರು. ಕೇರಳದ ಪ್ರಭಾವಿ ಸಚಿವರೊಬ್ಬರ ಭ್ರಷ್ಟಾಚಾರ ತನಿಖೆ ನಡೆಸಿ, ಆ ಸಚಿವರೇ ರಾಜೀನಾಮೆ ನೀಡುವಂತೆ ಮಾಡಿದ್ದ ಧೀರ ಅಧಿಕಾರಿ.

7. ಅನ್ಶುಲ್ ಮಿಶ್ರಾ (ತಮಿಳುನಾಡು ಕೇಡರ್)!

ಮಧುರೈ ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಗ್ರಾನೈಟ್ ಗಣಿಗಾರಿಕೆಗೆ ಸಂಪೂರ್ಣ ತಡೆ ಒಡ್ಡಿದರು. ಆಡಳಿತದಲ್ಲಿ ಪಾರದರ್ಶಕತೆ ತರಲು ಸಾರ್ವಜನಿಕರಿಗಾಗಿ ಸೋಶಿಯಲ್ ಮೀಡಿಯಾ ದೂರು ಕೋಶ ಹಾಗೂ ಅಂಗನವಾಡಿ ನೇಮಕಾತಿಯಲ್ಲಿ ಪಾರದರ್ಶಕ ನಿಯಮಗಳನ್ನು ಜಾರಿಗೆ ತಂದರು.

8. ಯು. ಸಗಾಯಂ (ತಮಿಳುನಾಡು ಕೇಡರ್)!

ತಮ್ಮ ಕಚೇರಿಯ ಮುಂಭಾಗದಲ್ಲೇ "ಲಂಚ ಬೇಡ ಎಂದು ಹೇಳಿ, ತಲೆ ಎತ್ತಿ ಹಿಡಿದುಕೊಳ್ಳಿ" ಎಂಬ ಫಲಕ ತಗಲಿಸಿದ್ದ ಸಗಾಯಂ, ಅಕ್ರಮ ಮರಳು ದಂಧೆ ಮತ್ತು ಗ್ಯಾಸ್ ಸಿಲಿಂಡರ್ ಅಕ್ರಮಗಳ ವಿರುದ್ಧ ಧೈರ್ಯವಾಗಿ ಹೆಜ್ಜೆಯಿಟ್ಟ ಸ್ವಚ್ಛ ಹಸ್ತದ ಅಧಿಕಾರಿ. ಈ ಎಂಟೂ ಅಧಿಕಾರಿಗಳು ಬರಿ ಐಎಎಸ್ ಹುದ್ದೆಯಲ್ಲಿದ್ದವರಲ್ಲ, ದೇಶದ ಯುವಜನತೆಗೆ 'ಪ್ರಾಮಾಣಿಕತೆ' ಎಂದರೆ ಏನೆಂದು ತೋರಿಸಿಕೊಟ್ಟ ನಿಜವಾದ ಕ್ರಾಂತಿಕಾರಿಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆ ವಿಶೇಷ ಸ್ಥಾನಮಾನ ತೆಗೆಯದೇ ಇದ್ದಿದ್ದರೆ, POK ಜನ ಭಾರತಕ್ಕೆ ಸೇರಲು ಹೋರಾಡುತ್ತಿದ್ದರು! ಓಮರ್ ಅಬ್ದುಲ್ಲಾ ಹೇಳಿಕೆ ಸಂಚಲನ
ರಿಲಯನ್ಸ್ ರಿಟೇಲ್‌ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಭಾಗದ ಸಿಒಒ ಆಗಿ ವಿನೀತ್ ಜೈನ್ ನೇಮಕ, ಈ ಹಿಂದೆ ಎಲ್ಲಿದ್ರು?