Indian Citizenship : ಪಾಕಿಸ್ತಾನದಿಂದ ಬಂದ ಮನವಿಗಳ ಸಂಖ್ಯೆ 7306!

By Suvarna NewsFirst Published Dec 23, 2021, 9:12 PM IST
Highlights

ಭಾರತೀಯ ಪೌರತ್ವಕ್ಕೆ ಪಾಕಿಸ್ತಾನದ ಪ್ರಜೆಗಳಿಂದಲೇ ಹೆಚ್ಚಿನ ಬೇಡಿಕೆ
ಡಿ.14ರವರೆಗೆ ಕೇಂದ್ರ ಗೃಹ ಸಚಿವಾಲಯಕ್ಕೆ 7306 ಮನವಿ
ಈ ವರ್ಷದ ಸೆ. 20ರ ವೇಳೆಗೆ 1.11 ಲಕ್ಷ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ

ನವದೆಹಲಿ (ಡಿ. 23): ಈ ವರ್ಷದ ಡಿಸೆಂಬರ್ 14ರ ವೇಳೆಗೆ ಭಾರತೀಯ ಪೌರತ್ವಕ್ಕಾಗಿ (Indian Citizenship) 7306 ಪಾಕಿಸ್ತಾನಿ ಪ್ರಜೆಗಳು (Pakistanis) ಮನವಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ (Union minister of state for home affairs) ನಿತ್ಯಾನಂದ ರೈ (Nityanand Rai) ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಈ ವರ್ಷ ಭಾರತೀಯ ಪೌರತ್ವಕ್ಕಾಗಿ ಸಲ್ಲಿಕೆಯಾದ ಮನವಿಗಳ ಪಟ್ಟಿಯಲ್ಲಿ ಶೇ. 70ರಷ್ಟು ಪಾಲು ಪಾಕಿಸ್ತಾನದ ಪ್ರಜೆಗಳದ್ದೇ ಆಗಿದೆ. ಈ ವರ್ಷದಲ್ಲಿ ನಿಗದಿತ ದಿನಾಂಕದವರೆಗೂ 10, 635 ಭಾರತೀಯ ಪೌರತ್ವದ ಮನವಿಗಳನ್ನು ಸ್ವೀಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಸದ ಅಬ್ದುಲ್ ವಹಾಬ್ ( Abdul Wahab ) ಅವರು ಭಾರತೀಯ ಪೌರತ್ವಕ್ಕಾಗಿ ಪ್ರಸ್ತುತ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಹಾಗೂ ಅವುಗಳಲ್ಲಿ ಎಷ್ಟನ್ನು ಮಾನ್ಯ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ನಿತ್ಯಾನಂದ ರೈ ಉತ್ತರ ನೀಡಿದರು. ಪಾಕಿಸ್ತಾನ ಮಾತ್ರವಲ್ಲದೆ, ಅಫ್ಘಾನಿಸ್ತಾನ (Afghanistan), ಶ್ರೀಲಂಕಾ (Sri Lanka), ಅಮೆರಿಕ (United States), ನೇಪಾಳ ಹಾಗೂ ಬಾಂಗ್ಲಾದೇಶಗಳಿಂದ ಸಲ್ಲಿಕೆಯಾದ ಮನವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಅಫ್ಘಾನಿಸ್ತಾನದಿಂದ 1152, ನಿರಾಶ್ರಿತರಿಂದ 428, ಅಮೆರಿಕ ಹಾಗೂ ಶ್ರೀಲಂಕಾದಿಂದ 223, ನೇಪಾಳ ಹಾಗೂ ಬಾಂಗ್ಲಾದೇಶದಿಂದ ಕ್ರಮವಾಗಿ 189 ಹಾಗೂ 161 ಪೌರತ್ವ ಮನವಿಗಳು ಬಂದಿದೆ. ಅದರೊಂದಿಗೆ ಚೀನಾ ಪ್ರಜೆಗಳಿಂದ ಬಂದ 10 ಮನವಿಯೂ ಬಾಕಿ ಉಳಿದಿದೆ ಎಂದಿದ್ದಾರೆ.

ಇದೇ ವೇಳೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ 2018 ರಿಂದ 2021ರ ಅವಧಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯಗಳಾದ (Minority Groups ) ಹಿಂದೂ, ಸಿಖ್, ಕ್ರಿಶ್ಚಿಯನ್, ಜೈನ್ ಹಾಗೂ ಬೌದ್ಧರಿಂದ ಎಷ್ಟು ಪೌರತ್ವದ ಅರ್ಜಿಗಳು ಬಂದಿವೆ ಹಾಗೂ ಅವುಗಳಲ್ಲಿ ಎಷ್ಟು ಮಂದಿಗೆ ಪೌರತ್ವ ನೀಡಲಾಗಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ರಾಜ್ಯಸಭಾ ಸಂಸದ ಎಂಪಿ ಕೆ ಕೇಶವ ರಾವ್ (K Keshava Rao) ಪ್ರಶ್ನೆ ಕೇಳಿದ್ದರು. 2018ರಿಂದ 2021ರ ಅವಧಿಯಲ್ಲಿ ಈ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಂದ 8244 ಪೌರತ್ವದ ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 3117 ಮಂದಿಗೆ ಪೌರತ್ವ ನೀಡಲಾಗಿದೆ ಎಂದು ತಿಳಿಸಿದರು.

Flight Birth : ವಿಮಾನದಲ್ಲಿ ಮಗು ಹುಟ್ಟಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ?
ಈ ತಿಂಗಳ ಆರಂಭದಲ್ಲಿ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದ ರೈ, 2021ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಂತೆ ಕಳೆದ ಏಳು ವರ್ಷಗಳಲ್ಲಿ ಒಟ್ಟು 8.5 ಲಕ್ಷ ಮಂದಿ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದ್ದು, ಈ ವರ್ಷದ ಆರಂಭದಿಂದ ಸೆಪ್ಟೆಂಬರ್ 20ರ ವೇಳೆಗೆ 1,11,287 ಮಂದಿ ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟಿದ್ದಾರೆ. ಇನ್ನು ಕಳೆದ ಐದು ವರ್ಷಗಳಲ್ಲಿ ಗಮನಿಸಿದರೆ, 2016ರಲ್ಲಿ ಗರಿಷ್ಠ 1106 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದ್ದರೆ, 2018ರಲ್ಲಿ ಕನಿಷ್ಠ 628 ಮಂದಿ ಪಡೆದುಕೊಂಡಿದ್ದಾರೆ. ಇನ್ನು 2017ರಲ್ಲಿ817, 2019ರಲ್ಲಿ 987 ಹಾಗೂ 2020ರಲ್ಲಿ639 ಮಂದಿ ಭಾರತೀಯ ಪೌರತ್ವ ಪಡೆದಿದ್ದಾರೆ.

ಪಾಕ್, ಬಾಂಗ್ಲಾ, ಆಫ್ಘಾನ್‌ ವಲಸೆಗಾರರಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಅಹ್ವಾನಿಸಿದ ಕೇಂದ್ರ!
ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) (CAA) ಅನ್ನು ಪರಿಚಯಿಸಿದ್ದು, 2020ರ  ಜನವರಿ 10 ರಂದು ಇದು ಕಾನೂನಾಗಿ ಜಾರಿಯಾಗಿದೆ. ಈ ಕಾಯ್ದೆಯ ಅಡಿಯಲ್ಲಿ 2014ರ ಡಿಸೆಂಬರ್ 31ರ ಒಳಗಾಗಿ ಭಾರತಕ್ಕೆ ಬಂದಿರುವ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶದ ಅಲ್ಪ ಸಂಖ್ಯಾತ ಸಮುದಾಯದವರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ( Citizenship Amendment Act) ಅಡಿಯಲ್ಲಿ ಕೇಂದ್ರ ಸರ್ಕಾರ ಈವರೆಗೂ ಯಾವುದೇ ನಿಯಮವನ್ನು ರೂಪಿಸಿಲ್ಲ, 2022ರ ಜನವರಿಯವರೆಗೆ ನಿಯಮ ರೂಪಿಸಲು ಸಮಯವನ್ನು ಕೇಳಿದೆ.

click me!