ದೇಶದಲ್ಲಿ 548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ| ಕೊರೋನಾ ಯೋಧರಿಗೆ ಅಂಟಿದ ಸೋಂಕು| ಒಟ್ಟು 274 ವೈದ್ಯರಿಗೆ ಸೋಂಕು ತಗಲಿದ್ದು, 274 ನರ್ಸ್ ಹಾಗೂ ಅರೆವೈದ್ಯ ಸಿಬ್ಬಂದಿಗೆ ಸೋಂಕು
ನವದೆಹಲಿ(ಮೇ.07): ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್‌ಗಳಿಗೆ ಸೋಂಕು ತಗಲಿದರೆ ಕಷ್ಟಎಂಬ ಆತಂಕದ ನಡುವೆಯೇ ದೇಶದಲ್ಲಿ ಈವರೆಗೆ 548 ವೈದ್ಯರು, ನರ್ಸ್‌ಗಳು ಹಾಗೂ ಅರೆವೈದ್ಯ ಸಿಬ್ಬಂದಿಗೆ ಸೋಂಕು ತಗಲಿದೆ. ಒಟ್ಟು 274 ವೈದ್ಯರಿಗೆ ಸೋಂಕು ತಗಲಿದ್ದು, 274 ನರ್ಸ್ ಹಾಗೂ ಅರೆವೈದ್ಯ ಸಿಬ್ಬಂದಿಗೆ ಸೋಂಕು ಉಂಟಾಗಿದೆ.
ಇವರೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದಾರೆ. ಇನ್ನು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವಾರ್ಡ್ ಬಾಯ್‌ಗಳು, ಫೀಲ್ಡ್ ಕೆಲಸಗಾರರು, ನೈರ್ಮಲ್ಯ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್‌ಗಳು, ಲ್ಯಾಬ್ ಸಹಾಯಕರು, ಪ್ಯೂನ್‌ಗಳು, ಲಾಂಡ್ರಿ ಹಾಗೂ ಅಡುಗೆ ಸಿಬ್ಬಂದಿಯಲ್ಲಿ ಎಷ್ಟುಮಂದಿಗೆ ಸೋಂಕು ತಗಲಿದೆ ಎಂಬುದನ್ನು ಲೆಕ್ಕ ಹಾಕಿಲ್ಲ ಎಂದು ಮೂಲಗಳು ಹೇಳಿವೆ.
ಕೊರೋನಾಪೀಡಿತ ವೈದ್ಯರು ಹಾಗೂ ನರ್ಸ್‌ಗಳಲ್ಲಿ ಎಷ್ಟುಮಂದಿಗೆ ಆಸ್ಪತ್ರೆಯಲ್ಲಿ ಸೋಂಕು ತಗಲಿದೆ ಹಾಗೂ ಎಷ್ಟುಮಂದಿಗೆ ಆಸ್ಪತ್ರೆಯ ಹೊರಗೆ ಸಮುದಾಯದಿಂದ ಸೋಂಕು ತಗಲಿದೆ ಎಂಬ ಮಾಹಿತಿ ದೊರೆತಿಲ್ಲ. ಈಗಾಗಲೇ ಕೊರೋನಾದಿಂದ ಕೆಲ ವೈದ್ಯರು ಹಾಗೂ ನರ್ಸ್‌ಗಳು ಸಾವನ್ನಪ್ಪಿರುವ ವರದಿಗಳೂ ಬಂದಿವೆ. ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲೇ 13 ಮಂದಿ ವೈದ್ಯಕೀಯ ಸಿಬ್ಬಂದಿಗೆ ಹಾಗೂ ಏಮ್ಸ್ ಆಸ್ಪತ್ರೆಯಲ್ಲಿ 10 ಮಂದಿಗೆ ಕೊರೋನಾ ತಗಲಿದೆ.