ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!

By Suvarna NewsFirst Published Aug 20, 2020, 3:34 PM IST
Highlights

ಬರೋಬ್ಬರಿ 2 ತಿಂಗಳ ಲಾಕ್‌ಡೌನ್ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಪ್ರಮುಖವಾಗಿ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಸೇರಿದಂತೆ ಬಿದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಬಹುತೇಕರ ಆದಾಯ ಸಂಪೂರ್ಣ ನಿಂತು ಹೋಗಿದೆ. ಒಂದು ಹೊತ್ತಿನ ಊಟಕ್ಕೆ ಪರದಾಡವ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಲಾಕ್‌ಡೌನ್ ಪರಿಣಾಮದ ಕುರಿತು ಅಧ್ಯಯನ ವರದಿ ಬಹಿರಂಗಗೊಂಡಿತ್ತು. ಮತ್ತಷ್ಟು ಆತಂಕ ತರುತ್ತಿದೆ. 
 

ಪಾಟ್ನಾ(ಆ.20): ಕೊರೋನಾ ವೈರಸ್ ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಭೀಕರತೆ ಹೆಚ್ಚಿಸುತ್ತಿದೆ. ಆರಂಭಿಕ ಹಂತದಲ್ಲಿ ಕೊರೋನಾ ವೈರಸ್ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿ ಮಾಡಿದ್ದರು. ಮಾರ್ಚ್ 25 ರಿಂದ ಮೇ 31ರ ವರೆಗೆ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಇದರಿಂದ ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಲಾಕ್‌ಡೌನ್ ಸೃಷ್ಟಿಸಿದ ಪರಿಣಾಮ ಮಾತ್ರ ಘನಘೋರ. ಹಲವರು ಕೆಲಸ ಕಳೆದುಕೊಂಡಿದ್ದರು. ಕೂಲಿ ನೌಕರರು, ವಲಸೆ ಕಾರ್ಮಿಕರ ಆದಾಯ ಸಂಪೂರ್ಣ ನಿಂತು ಹೋಯಿತು. ಇದೀಗ ಲಾಕ್‌ಡೌನ್ ಪರಿಣಾಮ ಕುರಿತು ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ವರದಿ ಪ್ರಕಾರ ಶೇ. 51 ರಷ್ಟು ಮಂದಿಯ ಆದಾಯ ಸಂಪೂರ್ಣ ನಿಂತು ಹೋಗಿದೆ.

ಬದುಕು ಅನಿವಾರ್ಯ' ನಗರದತ್ತ ವಲಸೆ ಕಾರ್ಮಿಕರ ಪುನರಾಗಮನ.

ಯುನಿಸೆಫ್ ಹಾಗೂ ಡಿಎಂಐ ಜಂಟಿಯಾಗಿ ಬಿಹಾರ ವಲಸೆ ಕಾರ್ಮಿಕರಿಗೆ ಆದ ಪರಿಣಾಮದ ಕುರಿತು ಅಧ್ಯಯನ ನಡೆಸಲಾಗಿತ್ತು. ಈ ವರದಿ ನೀಡಿದ ಅಂಕಿ ಅಂಶಗಳು ಆಘಾತ ತರುವಂತಿದೆ. ಲಾಕ್‌ಡೌನ್ ಹಾಗೂ ಕೊರೋನಾ ಕಾರಣ ಬಿಹಾರಕ್ಕೆ ಬರೋಬ್ಬರಿ 21 ಲಕ್ಷ ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ. ಅಧ್ಯಯನದ ಪ್ರಕಾರ ಇದರಲ್ಲಿ ಶೇಕಡಾ 51 ರಷ್ಟು ಮಂದಿಯ ಆದಾಯ ಸಂಪೂರ್ಣ ನಿಂತು ಹೋಗಿದ್ದು, ಯಾವ ದಾರಿಯೂ ಕಾಣದಾಗಿದೆ. 

ಕೆಲಸವೂ ಇಲ್ಲ, ಹಣವೂ ಇಲ್ಲ; ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ ಜನ

ಶೇಕಡಾ 30 ರಷ್ಟು ಮಂದಿಯ ವೇತನ ಕಡಿತ ಮಾಡಲಾಗಿದ್ದು, ಬದುಕು ಕಠಿಣವಾಗಿದೆ. ಕೇವಲ ಶೇಕಡಾ 7 ರಷ್ಟು ಮಂದಿಗೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಹೆಚ್ಚಿನ ಯಾವುದೇ ನಷ್ಟ, ಆದಾಯ ಕಡಿತ, ಉದ್ಯೋಗ ಕಡಿತ ಆಗಿಲ್ಲ ಎಂದಿದ್ದಾರೆ. 

ವಲಸೆ ಕಾರ್ಮಿಕರಲ್ಲಿ ಲಾಕ್‌ಡೌನ್ ಪರಿಣಾಮ:
ಸಂಪೂರ್ಣ ಆದಾಯ ಸ್ಥಗಿತ: 51%
ಬಹುಪಾಲು ವೇತನ ಕಡಿತ : 30%
ಸಣ್ಣ ಪ್ರಮಾಣದ ವೇತನ ಕಡಿತ: 12%
ಯಾವುದೇ ಸಮಸ್ಯೆಗಾದ ಕಾರ್ಮಿಕರು: 7%

ಸದ್ಯ ಅನ್‌ಲಾಕ್ 3.0 ನಿಯಮ ಜಾರಿಯಲ್ಲಿದ್ದು, ಬಹುತೇಕ ಕ್ಷೇತ್ರಗಳಿಗೆ ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಕೆಲಸ ಕಾರ್ಯಗಳು ಆರಂಭಗೊಂಡಿದೆ. ಪುಟ್ಟ ಮಕ್ಕಳು, ಹಸುಗೂಸುಗಳೊಂದಿಗೆ ಮತ್ತೆ ಪಟ್ಟಣ ತೆರಳಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

5 ರಿಂದ 6 ತಿಂಗಳ ಕಾದು ಸಹಜ ಸ್ಥಿತಿಗೆ ಬಂದ ಬಳಿಕ ತೆರಳಲು ಇಚ್ಚಿಸುವ ಮಂದಿ: 70%
ಕೆಲಸಕ್ಕೆ ಯಾವಾತ್ತು ಮರಳುತ್ತೇವೆ ಅನ್ನೋದೇ ತಿಳಿಯುತ್ತಿಲ್ಲ; 13%
ಸಂಪೂರ್ಣ ಅನ್‍ಲಾಕ್ ಆದ ಬಳಿಕ ಮರಳುತ್ತೇವೆ : 11%
ಇನ್ನೆಂದು ಪಟ್ಟಣ, ನಗರಕ್ಕೆ ತೆರಳುವುದಿಲ್ಲ: 6%

ಲಾಕ್‌ಡೌನ್ ಮೊದಲ ತಿಂಗಳು ಹೇಗೋ ಕಳೆದಿದೆವು. ಆದರೆ ಮೇ ತಿಂಗಳಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಮಕ್ಕಳಿಗೆ ಸರಿಯಾದ ಆಹಾರ ನೀಡುಲು ಸಾಧ್ಯವಾಗುತ್ತಿಲ್ಲ. ಸರ್ಕಾರ, ಸಂಘ ಸಂಸ್ಥೆಗಳು ಲಾಕ್‌ಡೌನ್ ವೇಳೆ ರೇಷನ್ ನೀಡಿತ್ತು. ಇದೀಗ ಲಾಕ್‌ಡೌನ್ ಮುಗಿದಿದೆ. ಕೆಲಸ ಕಾರ್ಯಗಳು ಆರಂಭಗೊಂಡಿದೆ. ಆದರೆ ನಾವು ಕೆಲಸವೇ ಕಳೆದುಕೊಂಡಿದ್ದೇವೆ. ಇತ್ತ ಆದಾಯವೂ ಇಲ್ಲ, ಉದ್ಯೋಗವೂ ಇಲ್ಲದೇ ದಿನದೂಡುತ್ತಿದ್ದೇವೆ ಎಂದು ಅಧ್ಯಯನದಲ್ಲಿ ವಲಸೆ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಮನ್‌ರೇಗ ಸೇರಿದಂತೆ ಸರ್ಕಾರದ ಹಲವು ಯೋಜನೆಗಳಲ್ಲಿ ವಲಸೆ ಕಾರ್ಮಿಕರಿಗೆ ಸರ್ಕಾರ ಕೆಲಸ ನೀಡುತ್ತಿದೆ. ಆದರೆ 21 ಲಕ್ಷ ವಲಸೆ ಕಾರ್ಮಿಕರ ಪೈಕಿ ಕೇವಲ 8.40 ಲಕ್ಷ ಮಂದಿಗೆ ಈ ರೀತಿ ಉದ್ಯೋಗ ಸಿಕ್ಕಿದೆ. ಇನ್ನುಳಿದ ಮಂದಿಗೆ ಸಿಕ್ಕಿಲ್ಲ. ಕೊಡುವ ಅವಕಾಶವೂ ಸರ್ಕಾರದ ಬಳಿ ಇರಲಿಲ್ಲ.  ಇದು ಬಿಹಾರದ ಅಧ್ಯಯನ ವರದಿ. ಈ ಪರಿಸ್ಥಿತಿ ಕೇವಲ ಬಿಹಾರ ವಲಸೆ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ಎಲ್ಲಾ ರಾಜ್ಯದ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಸೇರಿದಂತೆ ಬಹುತೇಕ ಕಾರ್ಮಿಕ ವರ್ಗದ ಪರಿಸ್ಥಿತಿಯಾಗಿದೆ.

click me!