
ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಎಷ್ಟು ಜಾಗರೂಕರಾಗಿದ್ದರೂ ಸಾಲದು, ಪೋಷಕರ ಕಣ್ಣು ತಪ್ಪಿಸಿ ಏನಾದರೊಂದು ಕಿತಾಪತಿ ಮಾಡಿ ಅಪಾಯವನ್ನು ಮೈಮೇಲೆ ಎಳೆದುಕೊಂಡು ಮನೆಮಂದಿಯೆಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಆಟವಾಡುತ್ತಾ ನಾಣ್ಯ ನುಂಗಿ ಬಿಡುವುದು ಮೂಗಿನೊಳಗೆ ಕಾಳುಗಳನ್ನು ತುಂಬಿಕೊಳ್ಳುವುದು ಚೊಂಬಿನೊಳಗೆ ತಲೆ ಸಿಲುಕಿಸಿಕೊಳ್ಳುವುದು ಹೀಗೆ ಮಕ್ಕಳು ತಮಗರಿವಿಲ್ಲದೇ ಏನಾದರೊಂದು ಅವಾಂತರ ಮಾಡಿ ಪೋಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಾರೆ.
ಅಪ್ಪ ಅಂಗಡಿಯಿಂದ ತಂದ ಹೊಸ ಚೊಂಬಿನಲ್ಲಿ ಮಗುವಿನ ಆಟ
ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಮಗುವೊಂದು ಅಪ್ಪ ಆಗಷ್ಟೇ ಅಂಗಡಿಯಿಂದ ತಂದ ಹೊಸದಾದ ಚೊಂಬಿನಲ್ಲಿ ಆಟವಾಡುತ್ತಾ ಚೊಂಬನ್ನು ತಲೆಗೆ ಹಾಕಿಕೊಂಡಿದೆ. ಆದರೆ ನಂತರ ವಾಪಸ್ ತೆಗೆಯುವುದಕ್ಕೆ ಮಾತ್ರ ಆಗಿಲ್ಲ. ಮಗುವಿನ ತಲೆಯನ್ನು ಚೊಂಬಿನಿಂದ ಹೊರಗೆ ತೆಗೆಯಲು ಹಲವು ಪ್ರಯತ್ನ ಮಾಡಿದ ಪೋಷಕರು ಸಾಧ್ಯವಾಗದೇ ಹೋದಾಗ ಬಳಿಕ ಮಗುವನ್ನು ಅಗ್ನಿ ಶಾಮಕ ಸಿಬ್ಬಂದಿ ಬಳಿ ಕರೆದೊಯ್ದಿದ್ದಾರೆ.
ತಲೆ ಚೊಂಬಿನಲ್ಲಿ ಸಿಲುಕಿ ಪರದಾಟ
ಅಂದಹಾಗೆ ಈ ಘಟನೆ ನಡೆದಿರುವುದು ಮಲ್ಕನ್‌ಗಿರಿ ಜಿಲ್ಲೆಯ ಕೊರುಕೊಂಡ ಪ್ರದೇಶದಲ್ಲಿ. ಇಲ್ಲಿನ ಮೂರು ವರ್ಷದ ಗಂಡು ಮಗುವೊಂದು ಅಪ್ಪ ಆಗಷ್ಟೇ ಅಂಗಡಿಯಿಂದ ಕೊಂಡು ತಂದ ಚೊಂಬಿನಲ್ಲಿ ಆಟವಾಡುತ್ತಾ ತಲೆಗೆ ಹಾಕಿಕೊಂಡಿದೆ. ಹೀಗೆ ಚೊಂಬಿನೊಳಗೆ ಹೋದ ತಲೆಯನ್ನು ಹೊರತೆಗೆಯಲಾಗದೇ ಮಗು ಅಳುವುದಕ್ಕೆ ಶುರು ಮಾಡಿದ್ದು, ಪೋಷಕರು ಮಗುವನ್ನು ಚೊಂಬಿನಿಂದ ತೆಗೆದು ರಕ್ಷಿಸಲು ಹಲವು ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ.
ಮಗುವನ್ನು ಫೈರ್ ಸ್ಟೇಷನ್‌ಗೆ ಕರೆದುಕೊಂಡು ಹೋದ ಪೋಷಕರು
ಈ ಸ್ಟೀಲ್ ಚೊಂಬು ಬಹಳ ಗಟ್ಟಿಯಾಗಿದ್ದು, ಮಗುವಿನ ತಲೆಯನ್ನು ಅದರಿಂದ ತೆಗೆದು ರಕ್ಷಿಸುವುದು ಗಂಭೀರ ಸವಾಲಿನಿಂದ ಕೂಡಿತ್ತು. ಚೊಂಬಿನಿಂದ ಮಗುವಿನ ತಲೆಯನ್ನು ಸುಲಭವಾಗಿ ತೆಗೆಯಲು ಸಾಧ್ಯವಿರಲಿಲ್ಲ ಹಾಗೆಯೇ ಮಗುವಿಗೆ ಗಾಯವಾಗದಂತೆ ಮಡಕೆಯನ್ನು ಕತ್ತರಿಸುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಮಗುವಿಗೆ ಹಾನಿಯಾಗುವ ಅಪಾಯವಿದ್ದ ಕಾರಣಕ್ಕೆ ಗ್ಯಾಸ್ ಕಟ್ಟರ್ ಬಳಕೆಯನ್ನು ತಳ್ಳಿಹಾಕಲಾಯಿತು. ಹೀಗಾಗಿ ಬೇರೆ ಯಾವುದೇ ಆಯ್ಕೆ ಇಲ್ಲದ ಪೋಷಕರು ನಂತರ ಮಗುವನ್ನು ಮಲ್ಕನ್‌ಗಿರಿಯ ಅಗ್ನಿಶಾಮಕ ಸಿಬ್ಬಂದಿ ಬಳಿ ಕರೆದುಕೊಂಡು ಹೋಗಿದ್ದಾರೆ.
ಹೈಡ್ರಾಲಿಕ್ ಕಾಂಬಿ ಉಪಕರಣ ಬಳಸಿ ರಕ್ಷಣೆ
ಅಲ್ಲಿ ಅಗ್ನಿಶಾಮಕ ದಳದವರು ಬಹಳ ಸೂಕ್ಷ್ಮವಾಗಿ ಪ್ಲಾನ್ ಮಾಡಿದ್ದು, ಹೈಡ್ರಾಲಿಕ್ ಕಾಂಬಿ ಉಪಕರಣವನ್ನು ಬಳಸಿ, ಸ್ಟೀಲ್ ಪಾತ್ರೆಯನ್ನು ಎಚ್ಚರಿಕೆಯಿಂದ ಕತ್ತರಿಸಿ ಮಗುವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ವೇಳೆ ಅಲ್ಲಿ ಸೇರಿದ ಜನ ಹರಿಬೋಲ್, ಜೈ ಜಗನ್ನಾಥ್ ಎಂದು ಘೋಷಣೆ ಕೂಗುತ್ತಾ ಅಗ್ನಿ ಶಾಮಕ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು.
ಹೀಗೆ ಮಗುವನ್ನು ಅಪಾಯದಿಂದ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ಬಳಿಕ ಅಗ್ನಿಶಾಮಕ ಇಲಾಖೆಯಿಂದ ಸನ್ಮಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಮಲ್ಕನ್‌ಗಿರಿ ಅಗ್ನಿ ಶಾಮಕ ಸ್ಟೇಷನ್‌ನ ಅಧಿಕಾರಿ ಕಮಲ್ ಕುಮಾರ್ ಗೌಡ, ಆ ಮಗುವಿನ ಪೋಷಕರ ಬಳಿ ಮಗುವನ್ನು ಚೊಂಬಿನಿಂದ ಹೊರತೆಗೆಯಲು ಯಾವುದೇ ಉಪಕರಣಗಳಿರಲಿಲ್ಲ, ಹೀಗಾಗಿ ಅವರು ನಮ್ಮ ಬಳಿ ಕರೆತಂದರು. ಇಲ್ಲಿ ಹೈಡ್ರಲಿಕ್ ಕೊಂಬಿ ಹಾಗೂ ಇತರ ಉಪಕರಣಗಳನ್ನು ಬಳಸಿ ಮಗುವನ್ನು ರಕ್ಷಿಸಲಾಯ್ತು.
ನಾವು ಮಗುವನ್ನು ಕೇವಲ 10 ನಿಮಿಷದಲ್ಲೂ ರಕ್ಷಿಸಬಹುದಿತ್ತು. ಆದರೆ ಮಗು ತುಂಬಾ ಪುಟ್ಟ ಮಗುವಾಗಿದ್ದರಿಂದ ರಕ್ಷಣೆ ಸ್ವಲ್ಪ ಕಷ್ಟಕರವಾಗಿತ್ತು. ಸ್ಟೀಲ್ ಪಾತ್ರೆಯನ್ನು ಕತ್ತರಿಸುವುದು ಕೂಡ ಕಷ್ಟಕರವಾಗಿತ್ತು. ಹೀಗಾಗಿ ಬಹಳ ಸೂಕ್ಷ್ಮವಾಗಿ ಆ ಪಾತ್ರೆಯನ್ನು ಕತ್ತರಿಸುವ ಮೂಲಕ ಮಗುವನ್ನು ರಕ್ಷಿಸಲಾಯ್ತು ಎಂದು ಮಲ್ಕನ್‌ಗಿರಿ ಅಗ್ನಿ ಶಾಮಕ ದಳದ ಅಧಿಕಾರಿ ಕಮಲ್ ಕುಮಾರ್ ಗೌಡ ಹೇಳಿದರು.
ಈ ಸ್ಟೀಲ್ ಪಾತ್ರೆಯನ್ನು ಕತ್ತರಿಸುವುದಕ್ಕೆ ಸುಮಾರು 2 ಗಂಟೆ ಹಿಡಿದಿದೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ