
ಪಾಟ್ನಾ (ಜು.28) ವ್ಯಕ್ತಿ ಮೃತಪಟ್ಟು ವರ್ಷಗಳೇ ಉರುಳಿದ್ದರೂ ಸೌಲಭ್ಯ ಪಡೆಯುತ್ತಿರುವ ಘಟನೆ, ಇಲ್ಲದೇ ಇರುವವರ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆಯುವದು ಸೇರಿದಂತೆ ಹಲವು ಅಕ್ರಮಗಳು ವರದಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ನಾಯಿಗೆ ನಿವಾಸ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಕಂದಾಯ ಅಧಿಕಾರಿ ಸಹಿ ಮಾಡಿ ಮಂಜೂರು ಮಾಡಿರುವ ಪ್ರಮಾಣ ಪತ್ರ ಇದಾಗಿದೆ. ಭ್ರಷ್ಟ ವ್ಯವಸ್ಥೆಯಲ್ಲಿ ಏನು ಬೇಕಾದರು ನಡೆಯಬಹುದು ಅನ್ನೋದಕ್ಕೆ ಇದು ಉದಾಹರಣೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಷ್ಟಕ್ಕೂ ನಾಯಿಗೆ ನಿವಾಸ ಪ್ರಮಾಣ ಪತ್ರ ನೀಡಿರುವುದು ಬಿಹಾರದ ಮೊಹಲ್ಲಾ ಕೌಲಿಚಕ್‌ನಲ್ಲಿ.
ಮತದಾರ ಚೀಟಿ ಅಕ್ರಮದ ನಡುವೆ ನಿವಾಸ ಪ್ರಮಾಣ ಪತ್ರ ಅಕ್ರಮ
ಬಿಹಾರದಲ್ಲಿ ಮತದಾರರ ಚೀಟಿಯಲ್ಲಿ ಭಾರಿ ಅಕ್ರಮವಾಗಿದೆ ಅನ್ನೋ ಆರೋಪ ದೇಶಾದ್ಯಂತ ಸದ್ದು ಮಾಡಿದೆ. ಹೋರಾಟಗಳು, ಪ್ರತಿಭಟನೆಗಳು ತೀವ್ರಗೊಂಡಿದೆ. ಇದರ ನಡುವೆ ಡಾಗ್ ಬಾಬ್ ನಿವಾಸ ಪ್ರಮಾಣ ಪತ್ರ ವೈರಲ್ ಆಗಿದೆ. ಜುಲೈ 24, 2025ರಂದು ಈ ನಿವಾಸ ಪ್ರಮಾಣ ಪತ್ರಕ್ಕೆ ಕಂದಾಯ ಅಧಿಕಾರಿ ಸಹಿ ಹಾಕಿ ನೀಡಲಾಗಿದೆ.
ಡಾಗ್ ಬಾಬು, ತಂದೆ ಕುತ್ತಾ ಬಾಬು, ತಾಯಿ ಕುತಿಯಾ ದೇವಿ
ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿರುವ ಹೆಸರು, ಪೋಷಕರು ಹೆಸರು, ವಿಳಾಸ ನೋಡಿದರೆ ಇದು ನಿಜವೇ ಎಂದು ಹೌಹಾರುವುದು ಖಚಿತ. ಕಾರಣ ನಿವಾಸ ಪ್ರಮಾಣ ಪತ್ರ ನೀಡಿರುವುದು ನಾಯಿಗೆ. ಈ ನಾಯಿ ಹೆಸರು ಡಾಗ್ ಬಾಬು, ತಂದೆಯ ಹೆಸರು ಕುತ್ತಾ ಬಾಬು, ತಾಯಿ ಹೆಸರು ಕುತಿಯಾ ದೇವಿ. ವಿಳಾಸ ಮೊಹಲ್ಲಾ ಕೌಲಿಚಕ್, ವಾರ್ಡ್ ನಂ.15, ನಗರ ಪರಿಷದ್ ಮಸೌರ್ಹಿ, ಬಿಹಾರ ಎಂದು ನೀಡಲಾಗಿದೆ.
ಸರ್ಟಿಫಿಕೇಟ್ ನಂಬರ್ ಪರಿಶೀಲಿಸಿದಾಗ ಮತ್ತೊಂದು ಅಚ್ಚರಿ
ನಾಯಿಗೆ ನೀಡಿರುವ ನಿವಾಸ ಪ್ರಮಾಣ ಪತ್ರದಲ್ಲಿ ಸರ್ಟಿಫಿಕೇಟ್ ನಂಬರ್ ನಮೂದಿಸಲಾಗಿದೆ. ಈ ನಂಬರ್ ಪರಿಶೀಲಿಸಿದಾಗ ಮತ್ತೊಂದು ಅಚ್ಚರಿ ಬಯಲಾಗಿದೆ. ಈ ನಂಬರ್ ದೆಹಲಿಯ ಮಹಿಳೆಯ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಈ ಮಹಿಳೆ ಹಾಗೂ ಆಕೆಯ ಪತಿಯ ಆಧಾರ್ ಕಾರ್ಡ್ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ದಾಖಲೆಗಳ ಆಧಾರದಲ್ಲಿ ನಾಯಿಗೆ ನಿವಾಸ ಪ್ರಮಾಣ ಪತ್ರ ನೀಡಿದೆ.
ನಾಯಿಗೆ ಪ್ರಮಾಣ ಪತ್ರಕ್ಕೆ ಭಾರಿ ಆಕ್ರೋಶ
ಬಿಹಾರದಲ್ಲಿ ನಾಯಿಗೆ ನೀಡಿರುವ ಪ್ರಮಾಣ ಪತ್ರಕ್ಕೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ವಿಪಕ್ಷಗಳು ಇದೇ ವಿಚಾರ ಮುಂದಿಟ್ಟು, ಅಕ್ರಮ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದೆ. ಹೆಸರು, ವಿಳಾಸ, ನಕಲಿ ದಾಖಲೆಗಳು ಯಾವುದನ್ನು ಪರಿಶೀಲಿಸದೆ ನಿವಾಸ ಪ್ರಮಾಣ ಪತ್ರ ನೀಡಿರುವುದು ಹೇಗೆ ಎಂದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಎಚ್ಚೆತ್ತ ಜಿಲ್ಲಾಡಳಿತದಿಂದ ಕ್ರಮ, ಪ್ರಮಾಣ ಪತ್ರ ಕ್ಯಾನ್ಸಲ್
ಅಕ್ರಮ ಬಯಲಾಗುತ್ತಿದ್ದಂತೆ ಸ್ಥಳೀಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಡಾಗ್ ಬಾಬುಗೆ ನೀಡಿದ ನಿವಾಸ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಇಷ್ಟೇ ಅಲ್ಲ ಈ ಪ್ರಕರಣ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಇದರ ಬೆನ್ನಲ್ಲೇ ಸಬ್ ಡಿವಿಶನ್ ಕಚೇರಿ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಆದೇಶ ನೀಡಿದೆ. 24 ಗಂಟೆಯಲ್ಲಿ ವರದಿ ನೀಡಬೇಕಾಗಿ ಸೂಚಿಸಿದೆ. ಸ್ಥಳೀಯ ಜಿಲ್ಲಾಡಳಿತ, ಬಿಹಾರದ ಎನ್‌ಡಿಎ ಸರ್ಕಾರದ, ಸಿಎಂ ನಿತೀಶ್ ಕುಮಾರ್ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ